ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ನಿನ್ನೆ (ಶುಕ್ರವಾರ) ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಅವರ ವಿರುದ್ಧ ಸದಾಶಿವನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಪತಿಯ ಆತ್ಮಹತ್ಯೆ ಪ್ರಯತ್ನ ಬಗ್ಗೆ ಅವರ ಪತ್ನಿ ಜಾಹ್ನವಿ ಅವರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದು, ಇತ್ತೀಚೆಗೆ ಸಂತೋಷ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಿದ್ದೆ ಮಾಡುತ್ತಿರಲಿಲ್ಲ. ಹೀಗಾಗಿ ನಿದ್ರೆ ಮಾಡಲು ಅವರು ನಿದ್ರೆ ಮಾತ್ರೆ ಮೊರೆ ಹೋಗುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಮನೆಗೆ ಬಂದಾಗ ಬೇಸರದಲ್ಲಿದ್ದರು
ನಿನ್ನೆ ಕೆಲಸದ ನಿಮಿತ್ತ ಹೊರ ಹೋಗಿದ್ದರು. ಬಂದಾಗ ಬೇಸರದಲ್ಲಿದ್ದ ಅವರು ಓದುವ ಕೋಣೆಗೆ ಹೋದರು. ಒತ್ತಡಕ್ಕೆ ಸಿಲುಕಿದಾಗ ಸಂತೋಷ್ ಪುಸ್ತಕ ಓದುತ್ತಿದ್ದರು. ಅದರಂತೆ ನಿನ್ನೆಯೂ ಪುಸ್ತಕ ಓದುವ ಕೋಣೆಗೆ ಹೋಗಿದ್ದರು. ಎಂದಿನಂತೆ ನಿದ್ರೆ ಮಾತ್ರೆ ಸೇವಿಸಿದ್ದರು, ಆದರೆ ಹೆಚ್ಚು ಮಾತ್ರೆ ಸೇವಿಸಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನನಗೆ ವಿಷಯ ತಿಳಿದ ಕೂಡಲೇ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಿದೆವು ಎಂದು ಜಾಹ್ನವಿ ಹೇಳಿಕೆ ನೀಡಿದ್ದಾರೆ.
ಕೌಟುಂಬಿಕ ಕಲಹ ?
ಸಂತೋಷ್ ಅವರ ಆಪ್ತರು ಹೇಳುವ ಪ್ರಕಾರ ಮೂರು ವರ್ಷದ ಹಿಂದೆ ಅರಸೀಕೆರೆ ಮೂಲದ ಜಾಹ್ನವಿ ಅವರನ್ನು ಮದುವೆಯಾಗಿದ್ದರು. ಸಂತೋಷ್ ಕೆಲ ನಡವಳಿಕೆಗಳ ಬಗ್ಗೆ ಪತ್ನಿ ಅಸಮಾಧಾನ ಹೊರ ಹಾಕಿ ಇಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ವರ್ಷದ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲೇರುವ ಸ್ಥಿತಿ ನಿರ್ಮಾಣವಾಗಿತ್ತು. ರಾಜಿ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಆದರೆ, ಜಾಹ್ನವಿ ಅವರು ನಾನು ಮತ್ತು ಪತಿ ಇಬ್ಬರು ಸಂತೋಷವಾಗಿದ್ದೇವೆ ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡಬೇಡಿ ಎಂದು ಹೇಳಿದ್ದಾರೆ.
ಕಾರ್ಯದರ್ಶಿ ಹುದ್ದೆಗೆ ಕುತ್ತು ?
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಬಿ. ಮರಮಕಲ್ ಅವರನ್ನು ವಜಾ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮಾಧ್ಯಮ ಸಲಹೆಗಾರ ಪತ್ರಕರ್ತ ಮಹದೇವ ಪ್ರಕಾಶ್ ಅವರು ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಸಂತೋಷ್ ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಕೆಳಗೆ ಇಳಿಯಲು ಸೂಚಿಸಲಾಗಿದೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿತ್ತು.
ಜತೆಗೆ ನವೆಂಬರ್ ತಿಂಗಳಾಂತ್ಯಕ್ಕೆ ರಾಜೀನಾಮೆ ನೀಡಬೇಕು, ತಪ್ಪಿದಲ್ಲಿ ವಜಾ ಮಾಡಲಿದ್ದಾರೆ ಎನ್ನಲಾಗಿತ್ತು. ಈ ದಿಢೀರ್ ರಾಜಕೀಯ ಬೆಳವಣಿಗೆ ಸಂತೋಷ್ ಬೇಸರಕ್ಕೆ ಕಾರಣವಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರ ಎಂಬ ಪ್ರಶ್ನೆಯೂ ಈಗ ಮುನ್ನೆಲೆಗೆ ಬಂದಿದೆ.