NEWSನಮ್ಮಜಿಲ್ಲೆನಮ್ಮರಾಜ್ಯ

ತುಂಬಿದ ಹೇಮೆ: ಸುರಕ್ಷಿತ ಸ್ಥಳ ತಲುಪುವಂತೆ ನದಿ ಪಾತ್ರದ ಜನರಿಗೆ ಸೂಚನೆ

ವಿಜಯಪಥ ಸಮಗ್ರ ಸುದ್ದಿ

ಹಾಸನ: ಹೇಮಾವತಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ಯಾವುದೇ ಸಮಯದಲ್ಲಿ ಡ್ಯಾಂನಿಂದ ನದಿಗೆ ನೀರು ಹೊರಬಿಡುವ ಸಾಧ್ಯತೆಯಿದೆ ಇದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗ್ಗೆ 6 ಗಂಟೆಗೆ ಹೇಮಾವತಿ ಜಲಾಶಯಕ್ಕೆ 16,394 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದಿಂದ 4,600 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಸದ್ಯ ಈಗ 2,921.50 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಜಲಾಶಯದ ಗರಿಷ್ಠ ನೀರಿನ ಮಟ್ಟ 2922.00 ಅಡಿಗಳಾಗಿದ್ದು, ಇನ್ನೂ ಅರ್ಧ ಅಡಿಗಳಷ್ಟು ನೀರನ್ನು ಮಾತ್ರ ಜಲಾಶಯದಲ್ಲಿ ಸಂಗ್ರಹಿಸಬಹುದಾಗಿದೆ. ಈಗಾಗಲೇ ಹವಾಮಾನ ಇಲಾಖೆ (IMD) ಅ.29 ರವರೆಗೆ ಮಳೆಯ ಮುನ್ಸೂಚನೆ ನೀಡಿರುವ ಕಾರಣ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರಲಿದೆ.

ಹೀಗಾಗಿ ಹೇಮಾವತಿ ನದಿ ಪಾತ್ರ, ನದಿ ದಂಡೆ, ನದಿಯ ಅಸುಪಾಲಿನಲ್ಲಿರುವ ಎಲ್ಲ ಗ್ರಾಮಸ್ಥರು, ಸ್ಥಳೀಯರು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಲ್ಲಿ ತಕ್ಷಣವೇ ತೆರಳುವಂತೆ ಸೂಚನೆ ನೀಡಲಾಗಿದೆ.

ಇನ್ನು ಈ ಸಂಬಂಧ ಕಂದಾಯ ಇಲಾಖೆ, ತಹಸೀಲ್ದಾರ್‌ ಸೇರಿದಂತೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ಯಾವುದೇ ತೊಂದರೆ, ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಹೇಮಾವತಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಜ್ಯೋತಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಹೇಮಾವತಿ ಜಲಾಶಯ 37.103 ಟಿಎಂಸಿ ನೀರಿನ ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಸದ್ಯ 36.620 ಟಿಎಂಸಿ ನೀರು ಸಂಗ್ರಹವಾಗಿದೆ. ಹೀಗಾಗಿ ಯಾವ ಸಮಯದಲ್ಲಿ ಬೇಕಾದರೂ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡಬಹುದು.

Megha
the authorMegha

Leave a Reply

error: Content is protected !!