ಬೆಂಗಳೂರು: ನಗರದ ವಿವಿಧೆಡೆ ಮುಖ್ಯಂಂತ್ರಿ ಸಿದ್ದರಾಮಯ್ಯ ಬುಧವಾರ ಸುತ್ತಾಡಿ, ಅಭಿವೃದ್ಧಿ ಕಾಮಗಾರಿಗಳು ಮತ್ತು ಮಳೆಯಿಂದ ಸಮಸ್ಯೆಗಳಿಗೆ ಒಳಗಾದ ಪ್ರದೇಶಗಳನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಮಳೆಗಾಲ ನಿರ್ವಹಣೆಗೆ ಎಲ್ಲ ರೀತಿಯಲ್ಲಿಯೂ ಸಜ್ಜಾಗಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ ಅವರು, ಯಾವುದೇ ಕಾರಣಕ್ಕೂ ಮಳೆ ಬಂದಾಗ ಮನೆ, ಮಳಿಗೆಗಳಿಗೆ ನೀರು ನುಗ್ಗಬಾರದು. ಒಂದು ವೇಳೆ ನುಗ್ಗಿದರೆ ಇಂಜಿನಿಯರ್‌ಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ರಸ್ತೆ ಹಾಗೂ ಗುಂಡಿಗಳನ್ನು ನಿರ್ವಹಿಸಲು ಒಂದು ಶಾಶ್ವತ ನಿರ್ವಹಣಾ ವ್ಯವಸ್ಥೆ ರೂಪಿಸಲು ಸೂಚನೆ ನೀಡಿರುವ ಸಿಎಂ ಅವರು, ಗುಂಡಿಗಳು ಬಿದ್ದ ಹಾಗೆಯೇ ಕೂಡಲೇ ದುರಸ್ತಿ ಮಾಡಬೇಕು, ಬಿಡಿಎನಲ್ಲಿಯೂ ಈ ರೀತಿ ವ್ಯವಸ್ಥೆ ರೂಪಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ವಿಳಂಬವಾಗಿರುವ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು, ಹೂಳೆತ್ತಬೇಕು ಹಾಗೂ ಒಣಗಿರುವ ಕೊಂಬೆಗಳನ್ನು ಕತ್ತರಿಸಬೇಕು. ಪಾದಚಾರಿ ಮಾರ್ಗಗಳನ್ನು ಸರಿಪಡಿಸಬೇಕು. ರಾಜಕಾಲುವೆಗೆ ಕಸ ಹಾಕುವುದನ್ನು ತಡೆಗಟ್ಟಬೇಕು. ಮುಂಗಾರು ಪ್ರಾರಂಭವಾಗುವ ಮುಂಚಿತವಾಗಿ ರಾಜಕಾಲುವೆಗಳ ಹೂಳು ತೆಗೆಯಬೇಕು ಎಂದು ತಿಳಿಸಿದರು.
ಒಂದು ತಿಂಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ: ಬೆಂಗಳೂರು ನಗರದ ವಾರ್ಡ್ ರಸ್ತೆಗಳಲ್ಲಿ 5,500 ಗುಂಡಿಗಳು ಬಿದ್ದಿದ್ದು, ಅವುಗಳನ್ನು ಮುಚ್ಚಬೇಕು, ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ 557 ಗುಂಡಿಗಳಿವೆ. ಈ ತಿಂಗಳಲ್ಲಿ ಭರ್ತಿ ಮಾಡಬೇಕು. ಸಿಲ್ಕ್ ಬೋರ್ಡ್ ಬಳಿ ಮೆಟ್ರೋ ನಿರ್ಮಿಸಿರುವ ರಸ್ತೆ ಅಗಲೀಕರಣ ಮಾಡಬೇಕು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಡಿವಾಳ ಕೆರೆಯ ಬಳಿ ಇನ್ನೊಂದು ಚರಂಡಿ ನಿರ್ಮಿಸಬೇಕು ಎಂದು ಸೂಚಿಸಿದರು.
ಈಜಿಪುರದಲ್ಲಿ ಬಿಬಿಎಂಪಿ ವತಿಯಿಂದ ಮೇಲ್ಸೇತುವೆ ನಿರ್ಮಾಣ ನನೆಗುದಿಗೆ ಬಿದ್ದಿದ್ದು, ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ. ಇವರ ಗುತ್ತಿಗೆ ರದ್ದು ಮಾಡಿ ಹೊಸಬರಿಗೆ ಕೊಡಲು ಸೂಚನೆ ನೀಡಲಾಗಿದೆ. ಮುಂಗಾರು ಮಳೆಗೂ ಮುನ್ನ ಪ್ರವಾಹ ಉಂಟಾಗಬಾರದೆಂದು ಚುನಾವಣಾ ಆಯೋಗದಿಂದ ಅನುಮತಿ ಪಡೆದು 7-8 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ: ರಾಜಕಾಲುವೆ ಒತ್ತುವರಿಯಾಗಿದ್ದರೆ ಎಷ್ಟೇ ಪ್ರಭಾವಿಗಳಾಗಿದ್ದರೂ ತೆರವು ಗೊಳಿಸಬೇಕು. ಬೆಂಗಳೂರಿನಲ್ಲಿ 400 ಕೆರೆಗಳಿದ್ದವು. ಅನೇಕ ಕೆರೆಗಳು ಹೂಳಿನಿಂದ ತುಂಬಿವೆ ಹಾಗೂ ಒತ್ತುವರಿಯಾಗಿವೆ. ಒತ್ತುವರಿ ತೆರವು ಮಾಡಿ ನೀರು ಹರಿಯಲು ಕಾಲುವೆ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಜೂನ್‌ಗೆ ಮುಂಚೆಯೇ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪ್ರವಾಹ ಸಂಬಂಧಿ ಸ್ಥಳಗಳನ್ನು ಮಾತ್ರ ಪರಿಶೀಲಿಸಲು ಚುನಾವಣಾ ಆಯೋಗ ಅನುಮತಿ ನೀಡಿದೆ, ಅದರಂತೆ ಪರಿಶೀಲಿಸಲಾಗಿದೆ. ಕೆರೆಗಳಿಂದ ತೆಗೆಯಲಾಗುವ ಹೂಳನ್ನು ಗುರುತು ಮಾಡಿರುವ ಸ್ಥಳಗಳಲ್ಲಿ (ಕ್ವಾರಿಗಳಿಗೆ) ಹಾಕಲಾಗುತ್ತಿದೆ. ಇನ್ನು ಬಿಬಿಎಂಪಿ ಚುನಾವಣೆ ಬಗ್ಗೆ ಲೋಕಸಭೆ ಫಲಿತಾಂಶದ ನಂತರ ಚಿಂತಿಸಲಾಗುವುದು ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೂ ಯಲಹಂಕಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ 20 ಮನೆಗಳಿಗೆ ನೀರು ನುಗ್ಗಿದೆ ಎಂದು ವರದಿಯಾಗಿತ್ತು. ಯಲಹಂಕ ಕೆರೆಗೆ ನೀರು ಹೋಗುವಂತೆ ಮಾಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಬಿಬಿಎಂಪಿಗೆ ನೀರು ಹೋಗಲು ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇನ್ನು ಗಾಳಿ ಆಂಜನೇಯ ದೇವಾಲಯದ ಬಳಿ ಮಳೆ ಜಾಸ್ತಿಯಾದಾಗ ನೀರು ಹರಿಯಲು ಎತ್ತರ ಸಾಲಲ್ಲ, ಹೂಳು ತುಂಬಿತ್ತು. ಪರ್ಯಾಯವಾಗಿ ಇನ್ನೊಂದು ಮೋರಿ ನಿರ್ಮಿಸಲು. ಸೂಚನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ 860 ಕಿಮೀ ರಾಜಕಾಲುವೆ ಇದೆ. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 491 ಕಿಮೀ ರಾಜಕಾಲುವೆಯನ್ನು ತೆರವು ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.
ಹಿಂದಿನ ಸರ್ಕಾರ ಜನವರಿ 2023 ರಲ್ಲಿ 193 ಕಿಮೀ ತೆರವು ಮಾಡಲು ಕ್ರಮ ತೆಗೆದುಕೊಂಡಿತ್ತು. ಮೊದಲೇ ಈ ಕೆಲಸ ಮಾಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. 1800 ಕೋಟಿ ರೋ. ಇದಕ್ಕೆ ವೆಚ್ಚವಾಗುತ್ತಿದೆ. 174 ಕಿಮೀ ಉಳಿದಿದೆ. ವಿಶ್ವ ಬ್ಯಾಂಕ್ ಸುಮಾರು 2000 ಕೋಟಿ ರೂಪಾಯಿ ನೀಡಲಿದೆ.
12 ಪ್ರಕರಣ ಸಿವಿಲ್ ನ್ಯಾಯಾಲಯದಲ್ಲಿವೆ. ವಕೀಲರು ಇದಕ್ಕೆ ಹಾಜರಾಗುತ್ತಿದ್ದು, ಅಗತ್ಯ ಬಿದ್ದರೆ ವಿಶೇಷ ವಕೀಲರನ್ನು ನೇಮಿಸಿ ಪ್ರಕರಣ ಇತ್ಯರ್ಥ ಗೊಳಿಸಲಾಗುವುದು. 12.15 ಕಿಮೀ ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.