ಎಚ್.ಡಿ.ಕೋಟೆ: ಕಾಡು ಪ್ರಾಣಿಗಳ ಹಾವಳಿ ರೈತರ ಬೆಳೆ ಹಾನಿ ತಪ್ಪಿಸಲು ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಕಾಡಂಚಿನ ಪ್ರದೇಶದಲಿ ರೈತರ ಬೆಳೆಗಳನ್ನ ನಾಶ ಮಾಡಿ ಜನಸಾಮಾನ್ಯರ ಬದುಕಿಗೆ ಭಯದ ವಾತಾವರಣ ಸೃಷ್ಟಿಸುತ್ತಿರುವ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಅರಣ್ಯ ಇಲಾಖೆ ನಿರ್ಲಕ್ಷ ತನ ತೋರುತ್ತಿದೆ. ಕೂಡಲೇ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಎಚ್.ಡಿ.ಕೋಟೆ ತಾಲೂಕು ರೈತರ ಸಭೆಯಲ್ಲಿ ಆಗ್ರಹಿಸಿದರು.
ಬರಗಾಲದ ಸಂಕಷ್ಟದಲ್ಲಿರುವ ರೈತರ ಸಾಲ ವಸೂಲಾತಿಗಾಗಿ ಬ್ಯಾಂಕುಗಳು ರೈತರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸಿ, ಬರ ಪರಿಹಾರದ ಹಣ ಸಾಲಕ್ಕೆ ಜಮಾ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಮಳೆಯಿಂದ ಹಾನಿಯಾಗಿರು ಫಸಲಿಗೆ ಹಾಗೂ ಬಾಳೆ ಬೆಳೆ ಸೇರಿ ಮತ್ತಿತರ ಬೆಳೆ ನಷ್ಟ ಆಗಿರುವುದಕ್ಕೆ ಸಂಪೂರ್ಣ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹಧನ ಐದು ರೂಪಾಯಿ ಕೂಡ ಕಳೆದ ಎಂಟು ತಿಂಗಳಿಂದ ಬಿಡುಗಡೆ ಮಾಡಿಲ್ಲ. ಸುಮಾರು 700 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ಕಾವೇರಿ ಪ್ರಾಧಿಕಾರದ ಸೂಚನೆ ಧಿಕ್ಕರಿಸಿ ಕಾವೇರಿ ಕೊಳ್ಳದ ರೈತರ ಹಿತರಕ್ಷಿಸಿ.
ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ಕಳೆದ ವರ್ಷ ಬರಗಾಲದ ಕಾರಣ ಯಾವುದೇ ಬೆಳೆ ಬೆಳೆದಿಲ್ಲ ಎಂಬುದನ್ನು ಗಂಭೀರವಾಗಿ ಅರಿತು ನೀರು ಹರಿಸುವುದಿಲ್ಲ ಎಂದು ಕಾವೇರಿ ಪ್ರಾಧಿಕಾರಕ್ಕೆ ತಿಳಿಸಲಿ ಎಂದು ಆಗ್ರಹಿಸಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಸಂಘಟನಾ ಕಾರ್ಯದರ್ಶಿ ಕೆಂಡಗಣ್ಣಸ್ವಾಮಿ, ತಾಲೂಕ ಅಧ್ಯಕ್ಷ ರಾಜೇಶ್, ಸರಗೂರು ತಾಲೂಕು ಉಪಾಧ್ಯಕ್ಷ ಸುನಿಲ್, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಅಂಬಳೆ ಮಂಜುನಾಥ, ಗಂಗಾಧರ, ಕೆಂಡಗಣ್ಣಪ್ಪ ಮತ್ತಿತರರು ಇದ್ದರು.