ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬುಧವಾರ ಮುಂಜಾನೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಬೆಳಗ್ಗಿನ ಜಾವ ತೀವ್ರ ಜ್ವರ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕುಮಾರಸ್ವಾಮಿ ಅವರು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಂಚಾರ ನಡೆಸಿದ್ದರಿಂದ ಕೊನೆಯ ಹಂತದಲ್ಲಿ ಅವರಿಗೆ ಜ್ವರ ಮತ್ತು ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ಅವರು ವೇಳೆ ಕೆಲವು ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಚುನಾವಣೆಯ ಬಳಿಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಿದ್ದ ಅವರು ಕುಟುಂಬದ ಜತೆಗೆ ಯುರೋಪ್ ಮತ್ತು ಗೆಳೆಯರ ಜತೆಗೆ ಕ್ಯಾಂಬೋಡಿಯಾ ಪ್ರವಾಸವನ್ನು ಮುಗಿಸಿ ಬಂದಿದ್ದರು.
ತುಂಬ ಲವಲವಿಕೆಯಿಂದ ಇದ್ದ ಅವರು, ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಆಕರ್ಷಣೆಯ ಕೇಂದ್ರ ಬಿಂದುಕೂಡ ಆಗಿದ್ದರು. ಆ ವೇಳೆ ಸರ್ಕಾರದ ಮೇಲೆ ಹಲವು ಹಗರಣಗಳ ಆರೋಪ ಮಾಡಿದ್ದರು. ಪೆನ್ ಡ್ರೈವ್‌ನಲ್ಲಿ ಎಲ್ಲ ದಾಖಲೆಗಳಿವೆ ಎಂದು ಹೇಳಿಕೊಂಡೇ ವಿಧಾನಸೌಧಕ್ಕೆ ಬಂದಿದ್ದರು.
ಶ್ರೀನಿವಾಸಪುರಕ್ಕೆ ಹೋಗಬೇಕಿತ್ತು: ನಿಗದಿತ ಕಾರ್ಯಕ್ರಮದಂತೆ ಕುಮಾರಸ್ವಾಮಿಯವರು ಬುಧವಾರ (ಆ.30) ಕೋಲಾರ ಜಿಲ್ಲೆಯ ಶ್ರೀನಿವಾಸಪುರಕ್ಕೆ ಹೋಗಬೇಕಿತ್ತು. ಅಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ವೇಳೆ ರೈತರ ಬೆಳೆ ನಾಶಪಡಿಸಿರುವ ಆರೋಪ ಕೇಳಿಬಂದಿತ್ತು. ಇಲ್ಲಿ ರೈತರು ಹಾಗೂ ಅಧಿಕಾರಿಗಳೊಂದಿಗೆ ಕುಮಾರಸ್ವಾಮಿ ಮಾತುಕತೆ ನಡೆಸಲಿದ್ದರು. ಇದೀಗ ಈ ಭೇಟಿಯನ್ನು ಮುಂದೂಡಲಾಗಿದೆ.