ನ್ಯೂಡೆಲ್ಲಿ: ಎಸ್.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ, ಸುಧಾಮೂರ್ತಿ, ಎಸ್‍ಎಲ್ ಭೈರಪ್ಪ ಅವರಿಗೆ ಪದ್ಮ ಭೂಷಣ ಹಾಗೂ 5 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
2023ನೇ ಸಾಲಿನ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ. ಈ ಬಾರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಒಬ್ಬರಿಗೆ ಪದ್ಮವಿಭೂಷಣ, ಇಬ್ಬರಿಗೆ ಪದ್ಮಭೂಷಣ, 5 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.
ಖಾದರ್ ವಲ್ಲಿ ದೂದೇಕುಲ (ವಿಜ್ಞಾನ ಮತ್ತು ಇಂಜಿನಿಯರಿಂಗ್), ರಾಣಿ ಮಾಚಯ್ಯ (ಕಲೆ), ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಕಲೆ), ಐ ಶಾ ರಶೀದ್ ಅಹಮದ್ ಕ್ವಾದ್ರಿ (ಕಲೆ), ಸುಬ್ಬರಾಮನ್ (ಪುರಾತತ್ವ ಶಾಸ್ತ್ರ) ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.
ಮೋದಿ ಪ್ರಧಾನಿಯಾಗಿದ್ರಿಂದ ನನಗೆ ಪ್ರಶಸ್ತಿ ಬಂತು: ನರೇಂದ್ರ ಮೋದಿ ಅವರು ಪ್ರಧಾನಿ ಆದ ಕಾರಣವೇ ನನಗೆ ಪದ್ಮಭೂಷಣ ಪ್ರಶಸ್ತಿ ಬಂತು. ಇಲ್ಲದೆ ಇದ್ದರೆ ಬರುತ್ತಿರಲಿಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಹೇಳಿದ್ದಾರೆ.
ಮೈಸೂರಿನ ಕುವೆಂಪು ನಗರದ ತಮ್ಮ ನಿವಾಸದಲ್ಲಿ ಶಾಸಕ ರಾಮದಾಸ್ ಅವರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮೋದಿ ಅವರು ಪ್ರಧಾನಿ ಆದ ಕಾರಣವೇ ನನಗೆ ಈ ಪ್ರಶಸ್ತಿ ಬಂತು.
ಇಲ್ಲದೆ ಇದ್ದರೆ ಬರುತ್ತಿರಲಿಲ್ಲ. ಲೇಖಕ ಸತ್ತೇ ಸಾಯುತ್ತಾನೆ. ಆದರೆ ಅವನು ಬರೆದ ಪುಸ್ತಕ ಎಷ್ಟು ದಿನ ಪ್ರಸ್ತುತ ಇರುತ್ತದೋ ಅಲ್ಲಿಯವರೆಗೆ ಲೇಖಕ ಸದಾ ಜೀವಂತ. ನನ್ನ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ ಎಂದರು.