ಹಾಸನ: ದೇವೇಗೌಡರು ಅಂದುಕೊಂಡ ಮಟ್ಟಿಗೆ ನಾಡಿನ ಸೇವೆ ಮಾಡಲು ಸಾಧ್ಯವಾಗಿಲ್ಲ. ಕಾರಣ ಅವರಿಗೆ ಸಿಕ್ಕ ಅವಧಿ ತೀರ ಕಡಿಮೆ. ಹೀಗಾಗಿ ಅವರ ಆಸೆ ಪೂರೈಸಲು ನಾನು ಸಾಹಸವೊಂದನ್ನು ಮಾಡಲು ಹೊರಟಿದ್ದೇನೆ ಅದಕ್ಕೆ ನಿಮ್ಮೆಲ್ಲರ ಬೆಂಬಲ ಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಹಾಸನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 11 ತಿಂಗಳು ಪ್ರಧಾನಿಯಾಗಿ, 2 ವರ್ಷ ರಾಜ್ಯದ ಸಿಎಂ ಆಗಿ ಮತ್ತು 3 ವರ್ಷ ಸಚಿವರಾಗಿ ಜನರ ಸೇವೆ ಮಾಡಿದ್ದಾರೆ. ಆದರೂ ದೇವೇಗೌಡರ 60 ವರ್ಷದ ರಾಜಕೀಯ ಜೀವನದಲ್ಲಿ ಈ ನಾಡಿಗೆ ಏನೇನೊ ಮಾಡಬೇಕೆಂಬ ಕನಸು ಕಂಡಿದ್ದರೋ ಅದನ್ನು ಮಾಡಲಾಗಿಲ್ಲ. ಅವರ ಆಸೆ ಪೂರೈಸಲು ನಾನು ಈಗ ಸಾಹಸಕ್ಕೆ ಕೈ ಹಾಕಿದ್ದೇನೆ ಎಂದು ಹೇಳಿದರು.
ಇನ್ನು ಹಾಸನಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅವರ ಆಸೆ ಪೂರೈಸುತ್ತೇನೆ ಎಂದು ಶಪಥ ಮಾಡಿದ ಅವರು, ನಿಮ್ಮ ಕಣ್ಣೆದುರೇ ನಿಮ್ಮ ಆಸೆಯಂತೆ ಜನರ ಬದುಕು ಕಟ್ಟೋ ಸರ್ಕಾರ ಬರುತ್ತೆ. ಅದನ್ನು ನೋಡಲು ನೀವು ಇರಬೇಕು ಎಂದು ತಂದೆಯಿಂದ ವಚನ ಪಡೆದುಕೊಂಡಿದ್ದೇನೆ. ದೇವರಿಗೂ ಇದೇ ಪ್ರಾರ್ಥನೆ ಮಾಡುತ್ತಿದ್ದೇನೆ. ನಾನು ಕಂಡ ಕನಸನ್ನು ನನ್ನ ಮಕ್ಕಳು ನನಸು ಮಾಡಿದ್ದಾರೆ ಎಂದು ಅವರ ಮನಃ ತೃಪ್ತಿಯಾಗಬೇಕು ಎಂದರು.
ನಮ್ಮ ಭದ್ರಕೋಟೆ ಛಿದ್ರ ಮಾಡುತ್ತೇವೆ ಅಂತಾ ಕೆಲವರು ಹೊರಟಿದ್ದಾರೆ. ದೇವೇಗೌಡರು ಬೆಳೆಸಿರುವ ಲಕ್ಷಾಂತರ ಕಾರ್ಯಕರ್ತರ ಶಕ್ತಿ ಇರೋವರೆಗೂ ಈ ಪಕ್ಷಕ್ಕೆ ಯಾರೂ ಏನು ಮಾಡಲು ಸಾಧ್ಯವಿಲ್ಲ ಎಂದು ಅಬ್ಬರಿಸಿದರು.
ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು: ಹಣ ಇದೆ ಅಂತಾ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಎಚ್‌ಡಿಕೆ, 40 ಸೀಟ್ ಏಕಾಂಗಿಯಾಗಿ ಗೆದ್ದಿರುವುದು ಕಡಿಮೆಯೇ? ಅವರಿದ್ದಾಗ ಎಷ್ಟು ಜನ ನಾಯಕರಿದ್ದರು? 58 ಸೀಟ್ ಗೆಲ್ಲಬೇಕಾದ್ರೆ ಯರ‍್ಯಾರ ಕೊಡುಗೆ ಎಷ್ಟು? ಅದೆಲ್ಲಾ ಹೇಳಬೇಕಲ್ವಾ? ಎಂದು ಸವಾಲ್ ಹಾಕಿದ್ದಾರೆ.
ಹಾಸನ ಕ್ಷೇತ್ರದಲ್ಲೂ ಸದ್ಯದಲ್ಲೇ ಪಂಚರತ್ನ ಯಾತ್ರೆ ಮಾಡುತ್ತೇವೆ. ಈ ಬಗ್ಗೆ ನಾನು, ರೇವಣ್ಣ ತೀರ್ಮಾನ ಮಾಡುತ್ತೇವೆ. ಪಂಚರತ್ನ ಯಾತ್ರೆಯ ಯೋಜನೆಗಳು ಅನುಷ್ಠಾನಕ್ಕೆ ಬರಬೇಕಾದರೆ 123 ಸ್ಥಾನ ಗೆಲ್ಲಬೇಕು. ಹಾಸನದಲ್ಲಿ 7ಕ್ಕೆ ಏಳೂ ಸ್ಥಾನ ಗೆಲ್ಲಬೇಕು. ಅದನ್ನು ಹೊರತುಪಡಿಸಿ ಬೇರೆ ಚರ್ಚೆ ಅನಗತ್ಯ ಎಂದ ಅವರು, ಈ ಯಾತ್ರೆ ಆರಂಭಿಸಿದಾಗ ನನ್ನ ಬಳಿ ಹಣ ಇರಲಿಲ್ಲ, ಮುಂದಿನ ಚುನಾವಣೆ ನಡೆಸಲು ಈ ಕ್ಷಣದವರೆಗೂ ನನ್ನ ಹತ್ತಿರ ಹಣ ಇಲ್ಲ ಎಂದು ಹೇಳಿದರು.