ಬೆಂಗಳೂರು: ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬಿಜೆಪಿ ಸೇರ್ಪಡೆಯಾದರು.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಇದೇ ವೇಳೆ ಶಿವರಾಮೇಗೌಡ ಅವರ ಪುತ್ರ ಚೇತನ್ ಸೇರಿದಂತೆ ನಾಗಮಂಗಲ ಕ್ಷೇತ್ರ ವಿವಿಧ ಪಕ್ಷಗಳ ಮುಖಂಡರು ಸಹ ಬಿಜೆಪಿ ಸೇರ್ಪಡೆಯಾದರು.
ಜೆಡಿಎಸ್‌ನಿಂದ ಉಚ್ಚಾಟನೆಯಾದ ಬಳಿಕ ಶಿವರಾಮೇಗೌಡ ಪಕ್ಷೇತರ ಸ್ಪರ್ಧೆಗೆ ತಯಾರಿ ನಡೆಸಿದ್ದರು. ನಾಗಮಂಗಲ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಅವರು ಹಳ್ಳಿ ಹಳ್ಳಿಗಳನ್ನು ಸುತ್ತುತ್ತಿದ್ದರು.
ಇದೀಗ ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಟಕ್ಕರ್ ಕೊಡಲು ಶಿವರಾಮೇಗೌಡಗೆ ಬಿಜೆಪಿ ಗಾಳ ಹಾಕಿದ್ದು ಟಿಕೆಟ್ ಭರವಸೆಯೊಂದಿಗೆ ಅಧಿಕೃತವಾಗಿ ಇಂದು ಬಿಜೆಪಿ ಸೇರ್ಪಡೆ ಮಾಡಿಕೊಂಡಿದೆ.
ಕಳೆದ ಮೂರು ದಿನದ ಹಿಂದೆ ಬಿಜೆಪಿ ಸೇರಲು ಶಿವರಾಮೇಗೌಡ ನಿರ್ಧರಿಸಿದ್ದರು. ಕೊನೆ ಕ್ಷಣದಲ್ಲಿ ಪಕ್ಷ ಸೇರ್ಪಡೆಗೆ ಬ್ರೇಕ್ ಬಿದ್ದಿತ್ತು. ಬಳಿಕ ಕೋರ್ ಕಮಿಟಿ ಸಭೆ ಸಮಯದ ಅಭಾವ ಹಾಗೂ ಟಿಕೆಟ್ ಸಿಗುವ ಭರವಸೆ ಸಿಗದ ಹಿನ್ನೆಲೆ ಶಿವರಾಮೇಗೌಡ ಬಿಜೆಪಿ ಸೇರ್ಪಡೆಯಾಗಿರಲಿಲ್ಲ. ಇದೀಗ ನಾಗಮಂಗಲ ಟಿಕೆಟ್ ಭರವಸೆ ಸಿಗುತ್ತಿದ್ದಂತೆ ಕಮಲ ಮುಡಿದಿದ್ದಾರೆ.