NEWSನಮ್ಮರಾಜ್ಯರಾಜಕೀಯ

ಮಾಜಿ‌ ಸಾರಿಗೆ ಸಚಿವ, ಹಿರಿಯ ರಾಜಕಾರಣಿ ಶತಾಯುಷಿ ಭೀಮಣ್ಣ ಖಂಡ್ರೆ ನಿಧನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು/ಬೀದರ್‌: ಮಾಜಿ‌ ಸಚಿವರು, ನಾಡಿನ ಹಿರಿಯ ರಾಜಕಾರಣಿಗಳು ಆದ ಭೀಮಣ್ಣ ಖಂಡ್ರೆಯವರ ನಿಧನದಿಂದ ದುಃಖಿತನಾಗಿದ್ದೇನೆ. ಶರಣ ಚಿಂತನೆಗಳ ನೆರಳಂತೆ ಬಾಳಿದ ಧೀಮಂತ ನಾಯಕನ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಹಾತ್ಮಗಾಂಧಿಯವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಭೀಮಣ್ಣ ಖಂಡ್ರೆಯವರು ಬಳಿಕ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡವರು. ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಟೊಂಕಕಟ್ಟಿ ನಿಂತು, ಆ ಪ್ರಯತ್ನದಲ್ಲಿ ಕೂಡ ಸಫಲರಾದ ಹುಟ್ಟು ಹೋರಾಟಗಾರ. ಭೀಮಣ್ಣ ಖಂಡ್ರೆಯವರ ಬದುಕಿನ ಹೆಜ್ಜೆಗಳು ಈ ಮಣ್ಣಿನಲ್ಲಿ ಚಿರಸ್ಥಾಯಿ ಎಂದರು.

ಬದುಕು ಕೊಟ್ಟ ಎಲ್ಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜಕ್ಕಾಗಿ ದುಡಿದ ಸಾರ್ಥಕ ಜೀವಕ್ಕೆ ಅಂತಿಮ ನಮನಗಳು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ಸದಸ್ಯರು ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ‌ ಎಂದು ಪ್ರಾರ್ಥಿಸಿದ್ದಾರೆ.

ಬೀದರ್​​  ಸ್ವಗೃಹದಲ್ಲಿ ಶುಕ್ರವಾರ ರಾತ್ರಿ ನಿಧನ

ಬೀದರ್:  ಶತಾಯುಷಿ ಭೀಮಣ್ಣ ಖಂಡ್ರೆ (102) ಅವರು ವಯೋಸಹಜ ಅನಾರೋಗ್ಯದಿಂದ ಬೀದರ್​​ನ ಸ್ವಗೃಹದಲ್ಲಿ ಶುಕ್ರವಾರ ರಾತ್ರಿ ನಿಧನರಾದರು. ವಯೋ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ಮಲ್ಟಿಸ್ಪೆಷಾಲಿಟಿ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಕೆಲವು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಸೋಮವಾರ ಅವರನ್ನು ಮನೆಗೆ ಕರೆದೊಯ್ದು ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ರಾತ್ರಿ ಆರೋಗ್ಯ ಮತ್ತಷ್ಟು ಕ್ಷೀಣಿಸಿದ್ದು, ಕೊನೆಯುಸಿರೆಳೆದರು.

ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ: ಭೀಮಣ್ಣ ಖಂಡ್ರೆ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂದು ಅವರ ಮಗ, ಸಚಿವರೂ ಆಗಿರುವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಭಾಲ್ಕಿಯ ಗಾಂಧಿ ಗಂಜ್​ನಲ್ಲಿರುವ ಸ್ವಗೃಹದ ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಭೀಮಣ್ಣ ಖಂಡ್ರೆ ನಡೆದುಬಂದ ಹಾದಿ: ಡಾ. ಭೀಮಣ್ಣ ಖಂಡ್ರೆ ಅವರು 1927ರ ಜನವರಿ 8ರಂದು ಶಿವಲಿಂಗಪ್ಪ ಖಂಡ್ರೆ ಮತ್ತು ಶ್ರೀಮತಿ ಪಾರ್ವತಿ ದಂಪತಿಯ ಪುತ್ರನಾಗಿ ಜನಿಸಿದರು. ಭಾಲ್ಕಿ ಹಿರೇಮಠದಲ್ಲಿ ಕನ್ನಡ ಶಿಕ್ಷಣ ಪಡೆದು ಶರಣತತ್ವದ ದೀಕ್ಷೆ ಪಡೆದ ಅವರು, ಬಾಲ್ಯದಲ್ಲಿಯೇ ಶಿಸ್ತಿನ ಬದುಕಿಗೆ ಪೂರಕವಾದ ಮೌಲ್ಯಗಳನ್ನು ಅಳವಡಿಸಿಕೊಂಡರು.

ಭಾಲ್ಕಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬೀದರ್‌ನಲ್ಲಿ ಪ್ರೌಢ ಶಿಕ್ಷಣ ಪಡೆದರು. ಮುನ್‌ಪಿ–ಫಾಜಲ್ ಪರೀಕ್ಷೆಯಲ್ಲಿ ಇಡೀ ಹೈದರಾಬಾದ್ ಪ್ರಾಂತ್ಯದಲ್ಲೇ ಪ್ರಥಮ ಸ್ಥಾನ ಪಡೆದು ತಮ್ಮ ಪ್ರತಿಭೆಯನ್ನು ಮೆರೆದರು. ನಂತರ ಹೈದರಾಬಾದ್‌ನ ಉಸ್ಮಾನಿಯಾ ಕಾಲೇಜಿನಲ್ಲಿ ವಕಾಲತ್ ಅಧ್ಯಯನ ಪೂರ್ಣಗೊಳಿಸಿದರು. ಕನ್ನಡದ ಜೊತೆಗೆ ಉರ್ದು, ಪಾರಸಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದರು.

ಭೀಮಣ್ಣ ಖಂಡ್ರೆ ರಾಜಕೀಯ ಪಯಣ: 1949–50ರಲ್ಲಿ ಪ್ರಜಾ ಸಮಾಜವಾದಿ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದ ಭೀಮಣ್ಣ ಖಂಡ್ರೆ, 1953ರಲ್ಲಿ ಭಾಲ್ಕಿ ಪುರಸಭೆಯ ಮೊದಲ ಚುನಾಯಿತ ಅಧ್ಯಕ್ಷರಾಗಿ ಜನಸೇವೆಗೆ ಹೊಸ ದಿಕ್ಕು ನೀಡಿದರು. ಅವರು 1962, 1967, 1978 ಮತ್ತು 1983ರಲ್ಲಿ ಭಾಲ್ಕಿ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದರು. ಇದೇ ವೇಳೆ 1988 ರಿಂದ 1994ರವರೆಗೆ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ (MLC) ಸೇವೆ ಸಲ್ಲಿಸಿದರು. ಶಾಸನಸಭೆಯ ವಿವಿಧ ಸಮಿತಿಗಳ ಸದಸ್ಯ ಹಾಗೂ ಅಧ್ಯಕ್ಷರಾಗಿ, ಪಾರ್ಲಿಮೆಂಟರಿ ವ್ಯವಹಾರಗಳ ಅಧ್ಯಯನ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ಸಚಿವರಾಗಿ ಭೀಮಣ್ಣ ಖಂಡ್ರೆ: ಎಂ.ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, 1992 ರಿಂದ 1994ರವರೆಗೆ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ ಡಾ. ಭೀಮಣ್ಣ ಖಂಡ್ರೆ, ಆಡಳಿತದಲ್ಲಿ ಶಿಸ್ತು, ಪಾರದರ್ಶಕತೆ ಮತ್ತು ಜನಪರ ನಿಲುವಿಗೆ ಹೆಸರಾಗಿದ್ದರು.

ಕಾಂಗ್ರೆಸ್ ಮತ್ತು ಸಮಾಜ ಸೇವೆ: 1980ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಭೆಯ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಹಾಗೂ ರೈತ ವಿಭಾಗದ ಸಂಚಾಲಕರಾಗಿ ದುಡಿದ ಅವರು, ರೈತರ ಹಿತಕ್ಕಾಗಿ ಸದಾ ಧ್ವನಿ ಎತ್ತಿದರು. ವೀರಶೈವ ಲಿಂಗಾಯತ ಸಮುದಾಯದ ಸಂಘಟನೆ, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಗೆ ಮಹತ್ವದ ಪಾತ್ರ ವಹಿಸಿದ್ದರು.

ರಾಜ್ಯ ಏಕೀಕರಣದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ 2006ರ ನವೆಂಬರ್ 1ರಂದು ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಕರ್ನಾಟಕ ಸರ್ಕಾರವು ಅವರನ್ನು ಗೌರವಿಸಿತು. ಇದು ಅವರ ದೀರ್ಘಕಾಲದ ಜನಸೇವೆಗೆ ಸಿಕ್ಕ ಗೌರವವಾಗಿತ್ತು.

Megha
the authorMegha

Leave a Reply

error: Content is protected !!