NEWSನಮ್ಮಜಿಲ್ಲೆನಮ್ಮರಾಜ್ಯ

ನಿರುದ್ಯೋಗ ನಿವಾರಣೆಗೆ ಸ್ಪಷ್ಟ ಯೋಜನೆ ರೂಪಿಸಿ ಅನುಷ್ಠಾನ : ಸಿಎಂ ಭರವಸೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಮ್ಮ ಸರ್ಕಾರವು ಯುವ ಶಕ್ತಿಯನ್ನು ರಾಜ್ಯದ ಸಂಪತ್ತು ಎಂದು ಭಾವಿಸಿದೆ. ನಿರುದ್ಯೋಗ ನಿವಾರಣೆಗೆ ನಾವು ಸ್ಪಷ್ಟ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತೇವೆ. ಇದರ ಜೊತೆಗೆ ರಾಜ್ಯ ಸರ್ಕಾರವು ಡ್ರಗ್ಸ್ ಪಿಡುಗನ್ನು ನಿಯಂತ್ರಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಈಗಾಗಲೇ ಕ್ರಮ ಕೈಗೊಂಡಿದೆ. ಜೊತೆಗೆ ಡ್ರಗ್ಸ್ ಎಂಬ ಮಹಾಮಾರಿಯ ವಿರುದ್ಧ ಜನಜಾಗೃತಿಯನ್ನೂ ಹಾಗೂ ಯುವಜನರೊಂದಿಗೆ ಸಂವಾದಗಳನ್ನೂ ನಾವು ಏರ್ಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಾಣಿಕ್​ಷಾ ಪರೇಡ್​ ಮೈದಾನದಲ್ಲಿ ಆಯೋಜಿಸಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತ್ರಿವಣ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಡಿದ ಸಿಎಂ ಅವರು, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕೆಂಬ ಉದ್ದೇಶದಿಂದ ದಿವಂಗತ ರಾಜೀವ್ ಗಾಂಧಿಯವರು ಸಂವಹನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದರು. ತಂತ್ರಜ್ಞಾನದ ಅಸೀಮ ಸಾಧ್ಯತೆಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಆಡಳಿತ ನಡೆಸಿದ್ದ ಮನಮೋಹನ್ ಸಿಂಗ್‍ರವರ ನೇತೃತ್ವದ ಯುಪಿಎ ಸರ್ಕಾರ “ಆಧಾರ್” ವ್ಯವಸ್ಥೆಯನ್ನು ಜಾರಿಗೆ ತಂದಿತು ಎಂದರು.

ಇನ್ನು “ಆಧಾರ್” ಬಂದ ನಂತರ ಫಲಾನುಭವಿಗಳಿಗೆ ಸವಲತ್ತನ್ನು ನೇರವಾಗಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಈಗ ನಾವು ನಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಇದೇ ವ್ಯವಸ್ಥೆಯನ್ನೇ ಬಳಸುತ್ತಿದ್ದೇವೆ. ವರ್ಷಕ್ಕೆ 50 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ, ನಯಾಪೈಸೆಯಷ್ಟು ಭ್ರಷ್ಟಾಚಾರದ ಸೋಂಕು ಇಲ್ಲದೆ ನೇರವಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಭ್ರಷ್ಟಾಚಾರವು ಸಾಂಸ್ಥೀಕರಣಗೊಳ್ಳುವ ಮಟ್ಟಿಗೆ ಬೆಳೆದಿದೆ. ಇದನ್ನು ಹಂತ ಹಂತವಾಗಿ ನಿವಾರಿಸುವ ಕೆಲಸ ಮಾಡಲು ಪಣತೊಟ್ಟಿದ್ದೇವೆ. ಈಗಾಗಲೆ ಸರ್ಕಾರವು ಭ್ರಷ್ಟಾಚಾರವನ್ನು ನಿವಾರಿಸಲು ಅಗತ್ಯವಿರುವ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿಂದೆ ನಡೆದಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ಆದೇಶಗಳನ್ನು ಹೊರಡಿಸಿದೆ. ತಪ್ಪಿತಸ್ಥರ ವಿರುದ್ಧ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ದೃಢ ನಿಲುವು ತಾಳಿದೆ ಎಂದು ತಿಳಿಸಿದರು.

ಇಂದು ನಾವು ವಿಲಕ್ಷಣವಾದ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಒಂದೆಡೆ ವಿಜ್ಞಾನ ಮತ್ತು ತಂತ್ರಜ್ಞಾನಗಳು ಮನುಷ್ಯನ ಬದುಕನ್ನು ಹಸನುಗೊಳಿಸುವ ಹೊಸ ಅವಕಾಶಗಳನ್ನು ಮತ್ತು ಸಾಧ್ಯತೆಗಳನ್ನು ತೆರೆಯುತ್ತಿವೆ. ಸಂವಹನ ತಂತ್ರಜ್ಞಾನವು ಜಗತ್ತನ್ನು ಪ್ರತಿದಿನವೂ ಕಿರಿದಾಗಿಸುತ್ತಿದೆ.

ಆದರೆ ಇದರಿಂದ ಮನುಷ್ಯನ ಸ್ವಾರ್ಥ ಮತ್ತು ಕ್ರೌರ್ಯಗಳು ತೀವ್ರಗೊಳ್ಳುತ್ತಿವೆ. ಆಧುನಿಕ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆಯು ಮನುಷ್ಯರ ಘನತೆಯನ್ನು ಕುಗ್ಗಿಸದಂತೆ, ಅವರ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳದಂತೆ ಮಾಡಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ನಾವು ಕಾರ್ಯಯೋಜನೆಯನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.

ಕಳೆದ ಕೆಲವು ವರ್ಷಗಳಿಂದೀಚೆಗೆ ದೇಶವು ವಿಪರೀತ ಆತಂಕಿತಗೊಂಡಿದೆ. ಸಮಾಜಗಳಲ್ಲಿ ವಿನಾಕಾರಣ ದ್ವೇಷ, ಹಿಂಸೆ, ಗುಮಾನಿ, ಶತ್ರುತ್ವ ಭಾವ, ಅಸಹನೆಗಳು ಬೆಳೆಯುತ್ತಿವೆ. ಕೆಟ್ಟದ್ದನ್ನು ಉತ್ಪಾದಿಸಿ ಅದಕ್ಕೆ ಎಲ್ಲರ ಒಪ್ಪಿಗೆ ಇದೆ ಎಂಬ ಭಾವನೆಯನ್ನು ಸೃಷ್ಟಿಸಲು ಸಮಾಜದ ಕೆಲವು ವರ್ಗಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಈ ರೀತಿಯ ನಕಾರಾತ್ಮಕ ಧೋರಣೆಯನ್ನು ನಾವು ಹಿಮ್ಮಟ್ಟಿಸಲೇಬೇಕು.

ಶಾಂತಿ ಸುವ್ಯವಸ್ಥೆಗಳಿದ್ದರೆ ಸಮಾಜವು ಅಭಿವೃದ್ಧಿಯತ್ತ ಸಾಗುತ್ತದೆ. ಹಿಂಸೆ, ಗೊಂದಲಗಳು ಇರುವ ಸಮಾಜಗಳು, ಕಾನೂನು ಸುವ್ಯವಸ್ಥೆ ಕುಸಿದು ಬಿದ್ದ ವ್ಯವಸ್ಥೆಗಳಲ್ಲಿ ಬಡತನ ಹೆಚ್ಚುತ್ತದೆ. ಪ್ರತಿ ವರ್ಷ ಲಕ್ಷಾಂತರ ಪ್ರತಿಭಾವಂತರು ನಮ್ಮ ಹೆಮ್ಮೆಯ ದೇಶದ ನಾಗರಿಕತ್ವವನ್ನು ತೊರೆದು ಹೋಗುತ್ತಿದ್ದಾರೆ. ನಮ್ಮ ವಿಶ್ವವಿದ್ಯಾಲಯಗಳು ಅಪ್ರತಿಮ ಪ್ರತಿಭಾವಂತರನ್ನು, ವೈಜ್ಞಾನಿಕ, ವೈಚಾರಿಕ ಸ್ಫೂರ್ತಿಯುಳ್ಳ ಜ್ಞಾನಿಗಳನ್ನು ಸೃಷ್ಟಿಸಬೇಕಾದ ಅನಿವಾರ್ಯತೆ ಇದೆ ಎಂದರು.

ನಾಡಿನ ನೆಲ, ಜಲ, ಭಾಷೆ ಹಾಗೂ ಅಸ್ಮಿತೆಯನ್ನು ಕಾಪಾಡಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಹಾಗೆಯೇ ಮಹಾನ್ ಮಾನವತಾವಾದಿಗಳಾದ ಬುದ್ಧ, ಗಾಂಧೀಜಿ, ಬಸವಣ್ಣ, ಅಂಬೇಡ್ಕರ್, ಕುವೆಂಪು ಮೊದಲಾದವರು ಪ್ರತಿಪಾದಿಸಿದ ಮಾನವೀಯತೆಯ ತಳಹದಿಯ ಅಭಿವೃದ್ಧಿಯ ಮಾದರಿಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಇದನ್ನು ‘ಕರ್ನಾಟಕ ಮಾದರಿ ಅಭಿವೃದ್ಧಿʼ ಎಂದು ಕರೆಯಲಾಗುತ್ತದೆ.

“ಅನ್ನವನು ಕೊಡು ಮೊದಲು, ಬಟ್ಟೆಯನು ಕೊಡು ಉಡಲು,
ಕಟ್ಟಿಕೊಡು ಮನೆಗಳನು..ಇದು ಮೊದಲು, ಆಮೇಲೆ ಉಳಿದುದೆಲ್ಲ.”
ಎಂದು ಎಂ. ಗೋಪಾಲಕೃಷ್ಣ ಅಡಿಗರು ಹೇಳುತ್ತಾರೆ. ನಮ್ಮ ಗ್ಯಾರಂಟಿ ಯೋಜನೆಗಳಿಗೆ ಪ್ರೇರಣೆ ಇದೇ ಚಿಂತನೆಯಾಗಿದೆ.

ಆಧುನಿಕ ಭಾರತದ ನಿರ್ಮಾತೃ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯದ ಮುನ್ನಾ ದಿನ ಆಗಸ್ಟ್ 14, 1947 ರಂದು ಮಾಡಿರುವ ಅತ್ಯಂತ ಜನಪ್ರಿಯ ಭಾಷಣ “Tryst with destiny” ಎಂದೇ ಹೆಸರಾಗಿದೆ. ಇದರಲ್ಲಿ ನೆಹರು ಅವರು, “ಭವಿಷ್ಯ ಸುಲಭವಲ್ಲ ಅಥವಾ ನಿರಾಳವೂ ಅಲ್ಲ; ಬದಲಿಗೆ ನಾವು ಈ ವರೆಗೆ ಕೈಗೊಂಡಿರುವ ಹಾಗೂ ಇಂದು ಕೈಗೊಳ್ಳುವ ಪ್ರತಿಜ್ಞೆಗಳನ್ನು ಈಡೇರಿಸುವ ನಿರಂತರ ಪ್ರಯತ್ನಗಳನ್ನೊಳಗೊಳ್ಳುವುದು.

ಭಾರತದ ಸೇವೆಯೆಂದರೆ ನೋವನುಭವಿಸುತ್ತಿರುವ ಲಕ್ಷಾಂತರ ಜನರ ಸೇವೆ ಮಾಡುವುದು. ಬಡತನ, ಮೂಢನಂಬಿಕೆ, ರೋಗರುಜಿನಗಳು ಹಾಗೂ ಅವಕಾಶಗಳಲ್ಲಿನ ಅಸಮಾನತೆಯನ್ನು ನಿವಾರಿಸುವುದು.” ಎಂದಿದ್ದಾರೆ. ನಾವು ನೆಹರೂ ಅವರ ಆಶಯಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ.

ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ಸುಮಾರು 4 ಲಕ್ಷ ಕೋಟಿಗೂ ಹೆಚ್ಚಿನ ತೆರಿಗೆ, ಸುಂಕ, ಮೇಲ್ತೆರಿಗೆಗಳನ್ನು ಕೇಂದ್ರಕ್ಕೆ ಪಾವತಿಸುತ್ತಿದೆ. ಅದರೆ ನಮಗೆ ವಾಪಸ್ಸು ಬರುತ್ತಿರುವುದು 50 ಸಾವಿರ ಕೋಟಿ ರೂ. ಮಾತ್ರ. ನಮಗೆ ನ್ಯಾಯಯುತವಾಗಿ ಬರಬೇಕಾದಷ್ಟು ಸಂಪನ್ಮೂಲಗಳು ಕೇಂದ್ರದಿಂದ ಮರಳಿ ಬಂದರೆ ರಾಜ್ಯವು ಅತ್ಯಂತ ಶ್ರೀಮಂತ ರಾಜ್ಯವಾಗುವುದು. ಇಷ್ಟರ ನಡುವೆಯೂ ನಾವು ಆರ್ಥಿಕ ಶಿಸ್ತನ್ನು ಸರಿಯಾಗಿ ಪಾಲಿಸುತ್ತಿದ್ದೇವೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ನೈಜ ದೇಶಪ್ರೇಮಿಗಳಿಗೆ ಇದು ಅರ್ಥವಾಗುತ್ತದೆ.

ಕರ್ನಾಟಕದ ಜನರು ಒಡೆದಾಳುವವರ ವಿರುದ್ಧ ನಿಂತಿದ್ದಾರೆ. ಇವನಾರವನೆನ್ನದೆ ಒಳಗೊಂಡು ಆಡಳಿತ ಮಾಡುವ ನಮ್ಮನ್ನು ಆರಿಸಿದ್ದಾರೆ. ಈ ಸ್ವಾತಂತ್ರ್ಯ ದಿನದಂದು ನಾನು ನೀಡುವ ಭರವಸೆಯಲ್ಲಿ ಬಹಳ ಮುಖ್ಯವಾದುದು ಈ ಒಳಗೊಂಡು ಬಾಳುವ, ಎಲ್ಲರ ಅಭಿವೃದ್ಧಿಯನ್ನು ಬಯಸುವ ಕರ್ನಾಟಕದ ಹೊಸ ಮಾದರಿಗಳನ್ನು ಪ್ರಬಲಗೊಳಿಸುವ ಭರವಸೆಯೇ ಆಗಿದೆ.

ಪಂಡಿತ್ ನೆಹರೂ ಅವರು ಹೇಳಿದಂತೆ ಎಲ್ಲರೂ ಒಟ್ಟುಗೂಡಿ ದುಡಿಯೋಣ, ರಾಜ್ಯದ ಅಭಿವೃದ್ಧಿಯ ಹೊಸ ಮನ್ವಂತರವನ್ನು ಪ್ರಾರಂಭಿಸೋಣ. ನಮ್ಮ ನಾಡಿನಲ್ಲಿ ಶಾಂತಿ, ಸೌಹಾರ್ದ, ಸಮೃದ್ಧಿಗಳು ನೆಲೆಸಲಿ. ಬಲಿಷ್ಠವಾಗಿ ನಿಂತಿರುವ ನಮ್ಮ ದೇಶದ ಸೈನ್ಯ, ದೇಶದ ಸಂಪತ್ತನ್ನು ಹೆಚ್ಚಿಸುತ್ತಿರುವ ಯುವಜನತೆ ಮತ್ತು ದೇಶವು ಹಸಿವಿನಿಂದ ಕಂಗೆಡದಂತೆ ನಿರಂತರ ಅನ್ನ ಉತ್ಪಾದಿಸುತ್ತಿರುವ ಅನ್ನಬ್ರಹ್ಮನೆಂದು ಕರೆಯಲಾಗುವ ರೈತರನ್ನು ಸ್ಮರಿಸೋಣ. ಕಾರ್ಮಿಕರು, ವಿಜ್ಞಾನಿಗಳು, ತಂತ್ರಜ್ಞಾನಿಗಳು… ಮುಂತಾದವರನ್ನು ಹುರಿದುಂಬಿಸೋಣ. ಶ್ರದ್ಧೆಯಿಂದ ದುಡಿದು ಸುಭದ್ರ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಸುಭದ್ರ ಕರ್ನಾಟಕ ಹಾಗೂ ಸುಭದ್ರ ಭಾರತವನ್ನು ನಿರ್ಮಿಸೋಣ.

ಇದು ಎಲ್ಲರ ಭಾರತ. ವೈವಿಧ್ಯತೆಯಲ್ಲಿ ಏಕತೆ ಎಂಬುದು ನಮ್ಮ ಮೂಲಮಂತ್ರ. ಇದನ್ನು ಪ್ರತಿ ಕ್ಷಣವೂ ನೆನಪಿಸಿಕೊಳ್ಳೋಣ. ಅಂತಿಮವಾಗಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನ ಮಾತುಗಳು ಸಮಸ್ತ ಜನಕೋಟಿಯ ಘೋಷ ವಾಕ್ಯವಾಗಲಿ ಎಂದು ಈ ಸಂದರ್ಭದಲ್ಲಿ ಆಶಿಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು