ಬೆಂಗಳೂರು: ನಗರದ ಉಡ್ ಲ್ಯಾಂಡ್ ಹೋಟೆಲ್ ಸಮೀಪದ ಸಪಂಗಿ ರಾಮನಗರದ ಮೊದಲ ಮುಖ್ಯ ರಸ್ತೆಯಲ್ಲಿರುವ (ಮಿಷನ್ ರೋಡ್) ಮೈಸೂರು ಅಗರಬತ್ತಿ ತಯಾರಕರ ಸಂಘದ ಕಟ್ಟಡದಲ್ಲಿರುವ ಮೈಸೂರು ಅಗರಬತ್ತಿ ತಯಾರಕರ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಉಚಿತ ಡಯಾಲಿಸಿಸ್ ಕೇಂದ್ರ ಆರಂಭವಾಗಿದೆ.
ವಾಸವಿ ಟ್ರಸ್ಟ್ ಹಾಗೂ ಅದ್ವೈತ್ ಹುಂಡೈ ಕಂಪೆನಿ ಅಧ್ಯಕ್ಷ ಎಸ್.ವಿ.ಎಸ್. ಸುಬ್ರಮಣ್ಯಂ ಗುಪ್ತ ಹಾಗೂ ಸುಂಕು ಗುಂಡಯ್ಯ ಶೆಟ್ಟಿ ಮತ್ತು ಕೆ.ಎಂ.ಸತ್ಯಮ್ ಶೆಟ್ಟಿ ಡಯಾಲಿಸಿಸ್ ಘಟಕಗಳನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಆರ್. ವಿ. ರವೀಂದ್ರನ್ ಚಾಲನೆ ನೀಡಿದರು.
ಟ್ರಸ್ಟ್ ವ್ಯವವಸ್ಥಾಪಕ ಧರ್ಮದರ್ಶಿ ಸುಂಕು ಜಗನ್ನಾಥ್ ತಮ್ಮ ಸ್ವಾಗತ ಭಾಷಣದಲ್ಲಿ ಅಗರಬತ್ತಿ ತಯಾರಕರ ಸಂಘದ ಹಾಗೂ ಚಾರಿಟಬಲ್ ಟ್ರಸ್ಟ್ ಸ್ಥಾಪನೆ ಬೆಳವಣಿಗೆ, ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಶಿಕ್ಷಣ ಹಾಗೂ ಆರೋಗ್ಯ ರಕ್ಷಣೆಗೆ ಒದಗಿಸುತ್ತಿರುವ ಸೌಲಭ್ಯಗಳನ್ನು ವಿವರಿಸಿದರು.
ಈ ಕೇಂದ್ರವು ಸದ್ಯಕ್ಕೆ 16 ಹಾಸಿಗೆಗಳನ್ನು ಹೊಂದಿದ್ದು ಪ್ರತಿದಿನ 32 ಜನರಿಗೆ ಎರಡು ತಂಡಗಳಲ್ಲಿ ಉಚಿತ ಸೇವೆ ಒದಗಿಸಲಾಗುವುದು. ಸದ್ಯದಲ್ಲೇ ಇನ್ನೂ ಹತ್ತು ಹಾಸಿಗೆಗಳನ್ನು ಒದಗಿಸಲು ಕ್ರಮಕೈಕೊಳ್ಳಲಾಗಿದೆ. ಡಯಾಲಿಸಿಸ್ ಉಪಕರಣಗಳನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿದೆ. ಒಬ್ಬರಿಗೆ ಒಂದು ದಿನಕ್ಕೆ ಅಂದಾಜು 1400 ರೂ. ಖರ್ಚು ಬರುತ್ತದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ.ಎಲ್. ರಮೇಶ್ ತಿಳಿಸಿದರು.
ಸುಮಾರು 50 ಲಕ್ಷ ರೂ.ಗಳ ಮೂಲ ದೇಣಿಗೆಯಿಂದ ಆರಂಭವಾದ ಟ್ರಸ್ಟು ಇಂದು ಐದು ಕೋಟಿ ರೂ.ಗಳನ್ನು ದಾನ ರೂಪದಲ್ಲಿ ಸಂಗ್ರಹಿಸಿದೆ. ಮೂರು ಕೋಟಿ ರೂ.ಗಳಷ್ಟು ದೇಣಿಗೆಯ ಭರವಸೆ ದೊರೆತಿದೆ ಎಂದು ಟ್ರಸ್ಟಿನ ಖಜಾಂಚಿ ಹಿತಿನ್ ತಿಳಿಸಿದರು.
ಹಿರಿಯ ಪತ್ರಕರ್ತರಾದ ವೆಂಕಟನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಟ್ರಸ್ಟ್ ಬೆಳವಣಿಗೆಗೆ ವಿವಿಧ ರೀತಿಯಲ್ಲಿ ನೆರವಾದವರನ್ನು ಗೌರವಿಸಲಾಯಿತು. ಸುಮನಾ ಕಾರ್ಯಕ್ರಮ ನಿರೂಪಿಸಿದರು.