ಗದಗ: ಜಿಲ್ಲೆಯ ಹದಲಿ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನೊಬ್ಬನಿಂದ ತೀವ್ರ ಹಲ್ಲೆಗೊಳಗಾಗಿದ್ದ ಸಹ ಶಿಕ್ಷಕಿ ಗೀತಾ ಬಾರಕೇರಿ ಅವರು ಚಿಕಿತ್ಸೆ ಫಲಿಸದೆ ಗುರುವಾರ ಅಸುನೀಗಿದ್ದಾರೆ.
ಕಳೆದ ಸೋಮವಾರ ಶಾಲೆಯಲ್ಲಿ ಶಿಕ್ಷಕಿ ಗೀತಾ ಮತ್ತು ಆಕೆಯ ಮಗನ ಮೇಲೆ ಆರೋಪಿ ಶಿಕ್ಷಕ ಮುತ್ತಪ್ಪ ಹಡಗಲಿ ಎಂಬಾತ ದಾಳಿ ನಡೆಸಿ, ಹಲ್ಲೆ ಮಾಡಿದ್ದ. ಘಟನೆಯಲ್ಲಿ ಗೀತಾ ಅವರ ಮಗ ಹತ್ತುವರ್ಷದ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ಭರತ್ ಸ್ಥಳದಲ್ಲೇ ಮೃತಪಟ್ಟಿದ್ದ.
ಇನ್ನು ಹಲ್ಲೆಯಿಂದ ಭೀಕರವಾಗಿ ಗಾಯಗೊಂಡಿದ್ದ ಗೀತಾ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರೂ ಕೊನೆಯುಸಿರೆಳೆದಿದ್ದಾರೆ. ಈ ದಾಳಿಗೆ ಗೀತಾ ಅವರ ಮೇಲಿನ ಅಸೊಯೆಯೇ ಕಾರಣ ಎಂದು ಹೇಳಲಾಗುತ್ತಿದೆ.
ಘಟನೆ ಏನು?: ಆರೋಪಿ ಮುತ್ತಪ್ಪ ಹಡಗಲಿ ಹಾಗೂ ಗೀತಾ ಬಾರಕೇರಿ ಹಲವು ದಿನಗಳಿಂದ ನಿಕಟ ಸ್ನೇಹ ಹೊಂದಿದ್ದರು. ಶಾಲಾ ಪ್ರವಾಸಕ್ಕೆ ತೆರಳಿದ್ದ ಸಮಯದಲ್ಲಿ ಗೀತಾ ಅವರು ಮುಖ್ಯೋಪಾಧ್ಯಾಯ ಸಂಗನಗೌಡ ಪಾಟೀಲ್ ಅವರೊಂದಿಗೆ ಉತ್ತಮ ಸ್ನೇಹ ಬೆಳೆಸಿದ್ದರೆಂದು ಶಂಕಿಸಿದ್ದ ಆರೋಪಿ ಮುತ್ತಪ್ಪ ಹಡಗಲಿ ಇದೇ ಕಾರಣಕ್ಕೆ ಅಸೂಯೆಪಟ್ಟಿದ್ದನು. ಈ ಅಸೊಯೆಯೆ ಈ ಘಟನೆಗೆ ಕಾರಣವಾಗಿದೆ ಎಂದು ಊಹಿಸಲಾಗಿದೆ.
ಈ ಕಾರಣಕ್ಕೆ ಆರೋಪಿ ಶಿಕ್ಷಕ ಸೋಮವಾರ ಸಿಕ್ಕಸಿಕ್ಕವರ ಮೇಲೆ ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿದ್ದಾನೆ. ಗೀತಾ ಮಗ ಭರತ್‌ನನ್ನು ಹೊಡೆದು, ಬಾಲಕನ ತಲೆಯನ್ನು ಸಿಮೆಂಟ್ ಕಂಬಕ್ಕೆ ಗುದ್ದಿ ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ಎಸೆದಿದ್ದನು. ಇದನ್ನು ತಡೆಯಲು ಬಂದ ಗೀತಾ ಮೇಲೂ ಸಲಾಕೆಯಿಂದ ಹೊಡೆದಿದ್ದನು. ಪ್ರಾಂಶುಪಾಲರ ಮೇಲೂ ಹಲ್ಲೆ ನಡೆಸಿದ್ದನು.
ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಗೀತಾ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಸಿಲಾಗುತ್ತಿತ್ತು. ಆದರೂ ಅವರು ಬದುಕುಳಿಯಲಿಲ್ಲ. ಸದ್ಯ ಆರೋಪಿ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದು, ಆತ ಜೈಲುಸೇರಿದ್ದಾನೆ. ಆದರೆ ಬದುಕಿ ಬಾಳಬೇಕಿದ್ದ ಕಂದಮ್ಮ ಮತ್ತು ತಾಯಿ ಗೀತಾ ಅವರು ಬಾರದ ಲೋಕಕ್ಕೆ ಹೋಗೇ ಬಿಟ್ಟಿದ್ದಾರೆ. ಈ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ವಿದ್ಯಾರ್ಥಿ ಸಾವಿಗೆ ಇಡೀ ರಾಜ್ಯವೇ ಮರುಕಪಟ್ಟಿತ್ತು.