NEWSನಮ್ಮಜಿಲ್ಲೆನಮ್ಮರಾಜ್ಯ

ವಾರದೊಳಗೆ ಸಹಜ ಸ್ಥಿತಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ: ಆಹಾರ ಸಚಿವ ಮುನಿಯಪ್ಪ

ವಿಜಯಪಥ ಸಮಗ್ರ ಸುದ್ದಿ
  • 35.50 ಕೋಟಿ ರೂ.ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಬೆಂಗಳೂರು ಗ್ರಾಮಾಂತರ: ಕೊಲ್ಲಿ ದೇಶಗಳಲ್ಲಿ ಯುದ್ಧದ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಂಟಾದ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆ ಸಮಸ್ಯೆ ವಾರದೊಳಗೆ ಸಂಪೂರ್ಣ ನಿವಾರಣೆಯಾಗಲಿದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.

ದೇವನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜನರು ಮನೆಗಳಲ್ಲಿ ಅಡುಗೆ ಅನಿಲ ಬಳಕೆಯಲ್ಲಿ ಮಿತಿವ್ಯಯ ಮಾಡುವಲ್ಲಿ ಸಹಕರಿಸಬೇಕು. ಗ್ಯಾಸ್ ಪೂರೈಕೆದಾರರು ಕಾಳಸಂತೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಬಾರದು. ಕಾಳ ಸಂತೆಯಲ್ಲಿ ಗ್ಯಾಸ್ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಕೊಲ್ಲಿ ದೇಶಗಳ ಯುದ್ಧದ ಸಮಯದಲ್ಲಿ ಅನಗತ್ಯವಾಗಿ ಗ್ಯಾಸ್ ಸಿಲಿಂಡರ್ ಪೂರೈಕೆ ಬಗ್ಗೆ ಗೊಂದಲ ಸೃಷ್ಟಿಸಿದ್ದಾರೆ. ವಾರದಲ್ಲಿ ಎಲ್ಲ ಗೊಂದಲ ಬಗೆಹರಿಯಲಿದೆ ಎಂದರು.

3.60 ಕೋಟಿ ರೂ. ಕಾಮಗಾರಿಗೆ ಗುದ್ದಲಿ ಪೂಜೆ: ದೇವನಹಳ್ಳಿ ತಾಲೂಕು ರಾಷ್ಟ್ರೀಯ ಹೆದ್ದಾರಿ- 44 ರಿಂದ ಅರದೇಶನಹಳ್ಳಿ ಸೇರುವ ರಸ್ತೆಯ ಮಾರ್ಗ ಕನ್ನಮಂಗಲ, ಪೂಜನಹಳ್ಳಿ ರಸ್ತೆ ಅಭಿವೃದ್ಧಿ ಅಂದಾಜು ವೆಚ್ಚದ 3.60 ಕೋಟಿ ರೂ. ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ-207 ರಿಂದ ಕೊಂಡೇನಹಳ್ಳಿ ಗೇಟ್ (ರಾಜ್ಯ ಹೆದ್ದಾರಿ-104) ಸೇರುವ ರಸ್ತೆಯ ಮಾರ್ಗ ಗಂಗವಾರ-ಚೌಡಪ್ಪನಹಳ್ಳಿ, ಕಗ್ಗಲಹಳ್ಳಿ ರಸ್ತೆಯ 2.55 ಕಿ.ಮೀ ಮತ್ತು 1 ಕಿ.ಮೀ ರಸ್ತೆ ಅಭಿವೃದ್ಧಿ ಅಂದಾಜು ವೆಚ್ಚ 4.90 ಕೋಟಿ ರೂ. ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು.

ವಿಜಯಪುರ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬೆಸ್ಕಾಂ ವತಿಯಿಂದ 25 ಕೋಟಿ ರೂ. ವೆಚ್ಚದಲ್ಲಿ ಹಳೆಯ 11 ಕೆ.ವಿ ಮೇಲ್ತಂತಿ ತೆಗೆದು ಭೂಗತ ವಿದ್ಯುತ್ ಕೇಬಲ್ (ಯುಜಿಡಿ) ಅಳವಡಿಕೆ ಕಾಮಗಾರಿ ಮತ್ತು ಪಿಡಬ್ಲ್ಯೂಡಿ ವತಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಪುರಸಭೆ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಿ.ರಾಜಣ್ಣ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ. ಜಗನ್ನಾಥ, ವಿಜಯಪುರ ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್, ತಾಲೂಕು ಪಂಚಾಯಿತಿ ಇಒ ಶ್ರೀನಾಥ್ ಗೌಡ, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಬಯಪ್ಪ ಸದಸ್ಯ ಮಂಜುನಾಥ್ ಸೇರಿ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!