ಬೆಂಗಳೂರು: ಐದು ನಗರ ಪಾಲಿಕೆಗಳ ಆಯುಕ್ತರಿಂದ ಬೆಳಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು ಇತ್ತ ಕೇಂದ್ರ ನಗರ ಪಾಲಿಕೆ ಆಯುಕ್ತರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಬೆಂಗಳೂರು ಉತ್ತರ: ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮುಲ ಸುನೀಲ್ ಕುಮಾರ್ ಅವರು ಇಂದು ಬೆಳಗ್ಗೆ 6 ಗಂಟೆಗೆ ಯಲಹಂಕ ಸ್ಯಾಟಲೈಟ್ ವಾರ್ಡ್ ನಲ್ಲಿ ಆಟೋ ಟಿಪ್ಪರ್ ಮಸ್ಟರಿಂಗ್ ಕೇಂದ್ರ ಹಾಗೂ ತಿಂಡ್ಲು ವಾರ್ಡ್ ನಲ್ಲಿ ಪೌರಕಾರ್ಮಿಕರ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಹಾಜರಾತಿ ಪಡೆಯುವ, ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಯವೈಖರಿಯ ಕುರಿತು ಪರಿಶೀಲನೆ ನಡೆಸಿದರು.

ಮಸ್ಟರಿಂಗ್ ಕೇಂದ್ರದ ಬಳಿ ಆಟೋ ಟಿಪ್ಪರ್ ಗಳು ಪೌರಕಾರ್ಮಿಕರು ಸರಿಯಾದ ಸಮಯಕ್ಕೆ ಬರಬೇಕು. ಪೌರಕಾರ್ಮಿಕರು ರಸ್ತೆ ಬದಿ ಮಾತ್ರ ಗುಡಿಸುವುದಲ್ಲ, ಶೋಲ್ಡರ್ ಡ್ರೈನ್ ಹಾಗೂ ಪಾದಚಾರಿ ಮಾರ್ಗಗಳಲ್ಲೂ ಗುಡಿಸಿ ಎಲ್ಲಾ ಕಡೆ ಸ್ವಚ್ಛತೆ ಕಾಪಾಡಬೇಕು. ಎಲ್ಲರ ಹಾಜರಾತಿಯನ್ನು ಕಡ್ಡಾಯವಾಗಿ ಪಡೆಯಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಗ್ಗೆ ಕಾಲ್ನಡಿಗೆ ಮೂಲಕ ಸುಮಾರು 2 ಕಿ.ಮಿ ಸ್ಥಳ ಪರಿಶೀಲಿಸಿ, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವ, ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯ ಕೈಗೊಳ್ಳುವುದು, ಬಲ್ಕ್ ಜನರೇಟರ್ಸ್ ನಿಂದ ಸರಿಯಾಗಿ ತ್ಯಾಜ್ಯ ಸಂಗ್ರಹಿಸದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಗಡಿಗಳ ಮುಂಭಾಗ ಸ್ವಚ್ಛತೆ ಕಾಪಾಡುವಂತೆ ಎಚ್ಚರಿಕೆ ನೀಡಬೇಕು, ಅದನ್ನು ಪರಿಗಣಿಸದಿದ್ದಲ್ಲಿ ದಂಡ ವಿಧಿಸುವ ಕೆಲಸ ಮಾಡಲು ಕ್ರಮ ಕೈಗೊಳ್ಳಲು ತಿಳಿಸಿದರು.
ಈ ವೇಳೆ ಉತ್ತರ ನಗರ ಪಾಲಿಕೆಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು ದಕ್ಷಿಣ: ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು ಇಂದು ಬೆಳಗ್ಗೆ 6 ಗಂಟೆಗೆ ಜಯನಗರ ವಾರ್ಡ್ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಕೇಂದ್ರ ಹಾಗೂ ಕಸ ಬಿಸಾಡುವ ಬ್ಲಾಕ್ ಸ್ಪಾಟ್ ಗಳ ಪರಿಶೀಲನೆ ನಡೆಸಿ ತ್ವರಿತ ಗತಿಯಲ್ಲಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಬೇಕು. ಪಾದಚಾರಿ ಮಾರ್ಗಗಳಲ್ಲಿ ದುರಸ್ಥಿಯಾಗಿರುವ ಸ್ಲ್ಯಾಬ್‌ಗಳನ್ನು ಕೂಡಲೇ ಸರಿಪಡಿಸಬೇಕು. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಸ್ವಚ್ಛತೆ ಕಾಪಾಡಲು ಸೂಚನೆ ನೀಡಿದರು. ಇದೇ ವೇಳೆ ಜಯನಗರ ಕಾಂಪ್ಲೆಕ್ಸ್ ಬಳಿ ನಿವಾಸಿಗಳ ಜೊತೆ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸಿ ಆದ್ಯತೆ ಮೇರೆಗೆ ಬಗೆಹರಿಸುವ ಭರವಸೆ ನೀಡಿದರು.
ಬೆಂಗಳೂರು ಪಶ್ಚಿಮ: ಪಶ್ಚಿಮ ನಗರ ಪಾಲಿಕೆಯ ಆಯುಕ್ತರಾದ ಡಾ: ರಾಜೇಂದ್ರ ಕೆ.ವಿ. ಅವರು ಕೂಡ ಬೆಳಗ್ಗೆ 6 ಗಂಟೆಗೆ ಹಾವನೂರು ವೃತ್ತ, ಬಸವೇಶ್ವರನಗರ, ಸಿದ್ಧಯ್ಯ ಪುರಾಣಿಕ ರಸ್ತೆ, 8ನೇ ಬಿ ಮುಖ್ಯರಸ್ತೆ ವರೆಗೆ ಅಧಿಕಾರಿಗಳೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜಾಜಿನಗರ ವಾರ್ಡ್ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಸುತ್ತಮತ್ತಲಿನ ಪ್ರದೇಶ ಸ್ವಚ್ಛತೆ ಕಾಪಾಡಬೇಕು. ನೇತಾಜಿ ಸುಭಾಷ್ ಚಂದ್ರ ಉದ್ಯಾನಕ್ಕೆ ಭೇಟಿ ನೀಡಿ ಸ್ವಚ್ಚತೆ ಕಾಪಾಡುವ ಜೊತೆಗೆ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು. ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಗುಣಮಟ್ಟ ಕಾಪಾಡುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ನೀಡಲು ಕ್ರಮವಹಿಸುವಂತೆ ಸೂಚನೆ ನೀಡಿದರು.
ರಸ್ತೆ ಬದಿ, ಪಾದಚಾರಿ ಮಾರ್ಗಗಳು, ಮರಗಳಲ್ಲಿ ನೇತಾಡುವ ಒ.ಎಫ್.ಸಿ ಕೇಬಲ್‌ಗಳಿಂದ ಪಾದಚಾರಿಗಳಿಗೆ ಸಮಸ್ಯೆ ಆಗಲಿದ್ದು, ಅಂತಹ ಓ.ಎಪಫ್.ಸಿ ಕೇಬಲ್‌ಗಳನ್ನು ತೆರವುಗೊಳಿಸಬೇಕು. ಉದ್ದಿಮೆ ಪರವಾನಗಿಯನ್ನು ಪರಿಶೀಲಿಸಿ ಕಾನೂನು ಪ್ರಕಾರ ನೀಡಬೇಕು. ರಾಜಕಾಲುವೆ ಹಾಗೂ ಚರಂಡಿಗಳಲ್ಲಿ ನಿರಂತರವಾಗಿ ಹೂಳೆತ್ತಲು ಸೂಚನೆ ನೀಡಿದರು.
ಈ ವೇಳೆ ವಲಯ ಜಂಟಿ ಆಯುಕ್ತರಾದ ಸಂಗಪ್ಪ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು ಪೂರ್ವ: ಪೂರ್ವ ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್. ರವರು ಇಂದು ಬೆಳಗ್ಗೆ 06.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಅಧಿಕಾರಿಗಳೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಬ್ಬಲೂರು ಜಂಕ್ಷನ್, ವಿಪ್ರೋ, ಸನ್ನಿ ಬ್ರೂಕ್ಸ್ ಬಳಿ ರಾಜಕಾಲುವೆ ಸಮಸ್ಯೆ ಕುರಿತಂತೆ ಪರಿಶೀಲನೆ ನಡೆಸಿ ಜಲಾವೃತವಾಗದಂತೆ ಅಗತ್ಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು. ಇನ್ನು ದೊಡ್ಡಕನ್ನಹಳ್ಳಿ ರಸ್ತೆ ಅಗಲೀಕರಣವನ್ನು ತ್ವರಿತವಾಗಿ ಪೂರ್ಣಗೊಳಿಬೇಕು. ಸರ್ಜಾಪುರದಿಂದ ವರ್ತೂರು ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸಿ.ಡಿ.ಪಿ ರಸ್ತೆಯನ್ನು 45 ಮೀಟರ್ ಗೆ ಅಗಲೀಕರಣ ಮಾಡಬೇಕಿದ್ದು, ಅದಕ್ಕೆ ಅರಣ್ಯ ಭೂಮಿಯ ಅವಶ್ಯಕತೆಯಿದೆ. ಈ ಸಂಬಂಧ ಅರಣ್ಯ ಭೂಮಿಯನ್ನು ಹಸ್ತಾಂತರ ಮಾಡಿಕೊಳ್ಳುವ ಸಲುವಾಗಿ ಕೂಡಲೆ ಸಭೆ ಏರ್ಪಡಿಸಲು ಸೂಚನೆ ನೀಡಿದರು.
ಪಣತ್ತೂರು ಎಚ್ ಕ್ರಾಸ್ ಅಗಲೀಕರಣ ಹಾಗೂ ಪಣತ್ತೂರು ರೈಲ್ವೆ ಕೆಳ ಸೇತುವೆ ಬಳಿ ಡ್ರೈನೇಜ್ ಕಾಮಗಾರಿ ಪರಿಶೀಲಿಸಿ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಯಿತು. ನಂತರ ಬಳಗೆರೆ ಬಳಿ ರಾಜಕಾಲುವೆಗೆ ಆರ್.ಸಿ.ಸಿ ಗೋಡೆ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು ತ್ವರಿತವಾಗಿ ಮುಗಿಸಲು ಸೂಚನೆ ನೀಡಿದರು.
ವರ್ತೂರು ಕೋಡಿ ಬ್ರಿಡ್ಜ್ ಅಗಲೀಕರಣ ಕಾಮಗಾರಿ ವೀಕ್ಷಣೆ ಮಾಡಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡಲಾಯಿತು. ಕೊನೆಯದಾಗಿ ಸಾಯಿ ಲೇಔಟ್ ಗೆ ಭೇಟಿ ನೀಡಿ ಜಲಾವೃತ ತಪ್ಪಿಸುವ ಸಲುವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಈ ವೇಳೆ ಅಪರ ಆಯುಕ್ತರು (ಅಭಿವೃದ್ಧಿ) ಲಕ್ಕಂಡೆ ಸ್ನೇಹಲ್ ಸುಧಾಕರ್, ಜಂಟಿ ಆಯುಕ್ತರಾದ ದಾಕ್ಷಾಯಿಣಿ, ಮುಖ್ಯ ಅಭಿಯಂತರರಾದ ಲೋಕೇಶ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು ಕೇಂದ್ರ: ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಇಂದು ಬೆಳಿಗ್ಗೆ ನಗರ ಪಾಲಿಕೆ ಕಚೇರಿಯಲ್ಲಿ ಕಂದಾಯ, ಕಾಮಗಾರಿ, ಹಣಕಾಸು, ಆರೋಗ್ಯ ವಿದ್ಯುತ್ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಸಂಬಂಧಿಸಿದ ಅಭಿಯಂತರರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೇಂದ್ರ ಪಾಲಿಕೆ ಕೆಲಸ ಕಾರ್ಯಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ತೆರಿಗೆ ಸಂಗ್ರಹ, ಬ್ಲಾಕ್ ಸ್ಪಾಟ್ ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವುದು, ರಸ್ತೆ ಗುಂಡಿಗಳನ್ನು ಮುಚ್ಚುವುದು, ವಿದ್ಯುತ್ ದೀಪಗಳ ಸಮರ್ಪಕ ನಿರ್ವಹಣೆ, ಸ್ವಚ್ಛತಾ ಕಾರ್ಯ ಮತ್ತು ಇತರೆ ಕಾರ್ಯಗಳಿಗೆ ಸಂಬಂಧಿಸಿದಂತೆ ಎಲ್ಲಾ ಅಧಿಕಾರಿಗಳು ಸ್ವತಃ ಅವರವರ ಜವಾಬ್ದಾರಿಗಳನ್ನು ಅರಿತು ಪ್ರತಿದಿನ ಹುಮ್ಮಸ್ಸಿನಿಂದ ಕಾರ್ಯ ನಿರ್ವಹಿಸಲು ಸೂಚನೆ ನೀಡಿದರು.
ಈ ವೇಳೆ ಕೇಂದ್ರ ಪಾಲಿಕೆ ಜಂಟಿ ಆಯುಕ್ತ ರಂಗನಾಥ್, ಉಪ ಆಯುಕ್ತರಾದ ರಾಜು, ಮುಖ್ಯ ಅಭಿಯಂತರಾದ ಸುಗುಣ, ವಿಜಯಕುಮಾರ್ ಹರಿದಾಸ್ ಸೇರಿದಂತೆ ಇನ್ನಿತರೆ ಸಂಬಂಧಿಸಿದ ಅಧಿಕಾರಿಗಳು ಇದ್ದರು.
Related









