ಮಂಡ್ಯ: ಪೊಲೀಸರ ನಿರ್ಲಕ್ಷ್ಯದಿಂದ ಮೂರುವರೆ ವರ್ಷದ ಬಾಲಕಿ ಅಸುನೀಗಿದ ಪ್ರಕರಣ ಮಾಸುವ ಮುನ್ನವೇ ಮಂಡ್ಯದಲ್ಲಿ 7 ವರ್ಷದ ಬಾಲಕಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಜತೆಗೆ ಮಿಮ್ಸ್ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಮೃತ ಬಾಲಕಿಯ ಕುಟುಂಬ ಸದಸ್ಯರೊಂದಿಗೆ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮೇ 29 ರಂದು ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಲ್ಲೂರು ನಿವಾಸಿಗಳಾದ ನಿಂಗರಾಜು ಮತ್ತು ರಂಜಿತಾ ದಂಪತಿ ಮಗಳ ಕಾಲು ಮೇಲೆ ಟೈಲ್ಸ್ ಬಿದ್ದು ಆಕೆ ಕಾಲು ಮುರಿದಿತ್ತು. ಉತ್ತಮ ಚಿಕಿತ್ಸೆ ಸಿಗುವ ಭರವಸೆಯೊಂದಿಗೆ ಆಕೆಯನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಪಾಲಕರು ದಾಖಲಿಸಿದ್ದರು. ಅದರಂತೆ ಮೂಳೆ ಮುರಿದ್ದು ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದರು.
ಹೀಗಾಗಿ ಬಾಲಕಿ ಸಾನ್ವಿಗೆ ಮೇ 29ರ ರಾತ್ರಿಯೇ ಶಸ್ತ್ರಚಿಕಿತ್ಸೆ ಮಾಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಬಾಲಕಿ ಚೇತರಿಸಿಕೊಂಡು ಅವಳ ಪೋಷಕರೊಂದಿಗೆ ಮಾತನಾಡಿದ್ದಳು. ಆಕೆಯ ಪೋಷಕರು ನೀನು ಶೀಘ್ರವಾಗಿ ಚೇತರಿಸಿಕೊಳ್ಳುತ್ತೀಯೆ ಎಂದು ಹೇಳಿದ್ರು. ಆದರೆ ಬಾಲಿಕಿ ನಿನ್ನೆ ರಾತ್ರಿ ಮೃತಪಟ್ಟಿದ್ದಾಳೆ.
ಪ್ರತಿಭಟನೆ ಆಕ್ರೋಶ: ಬಾಲಕಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪೋಷಕರು ಮಿಮ್ಸ್ ವಿರುದ್ಧ ಪ್ರತಿಭಟನೆ ನಡೆಸಿದರು. ಅನೇಕ ಸಂಘಟನೆಗಳು ಪೋಷಕರ ಪ್ರತಿಭಟನೆಯನ್ನು ಬೆಂಬಲಿಸಿ ಮತ್ತು ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ.
ಶಸ್ತ್ರಚಿಕಿತ್ಸೆಯ ನಂತರ ಬಾಲಕಿಗೆ ಸರಿಯಾದ ಚಿಕಿತ್ಸೆ ಕೊಟ್ಟಿಲ್ಲ. ವೈದ್ಯರ ಬದಲು ವೈದ್ಯಕೀಯ ವಿದ್ಯಾರ್ಥಿಗಳು ಆಕೆಗೆ ಚಿಕಿತ್ಸೆ ನೀಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಇದಲ್ಲದೆ, ಮಗು ಸತ್ತರೆ, ಮೊದಲು ಪೋಷಕರಿಗೆ ತಿಳಿಸಬೇಕಾಗಿತ್ತು. ಆದರೆ ಬದಲಾಗಿ, ಅವರು ಪೊಲೀಸರಿಗೆ ಮತ್ತು ನಂತರ ಅವರ ಪೋಷಕರಿಗೆ ವರದಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪ ತಳ್ಳಿಹಾಕಿದ ವೈದ್ಯರು: ಪೋಷಕರ ಆರೋಪಗಳನ್ನು ವೈದ್ಯರು ತಳ್ಳಿಹಾಕಿದ್ದಾರೆ. ಪರೀಕ್ಷೆಗಳನ್ನು ನಡೆಸಿದ ನಂತರವೇ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ, ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಆರೋಗ್ಯ ಹದಗೆಟ್ಟಿತು. ಏತನ್ಮಧ್ಯೆ, ರಕ್ತ ಪರೀಕ್ಷೆಯಲ್ಲಿ ಮಗುವಿನ ಪ್ಲೇಟ್‌ಲೆಟ್ ಕಡಿಮೆಯಾಗಿದೆ ಮತ್ತು ಸೋಂಕು ಕೂಡ ಇದೆ ಎಂದು ತಿಳಿದುಬಂದಿದೆ. ವೈದ್ಯರ ಕಡೆಯಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ ಎಂದು ವೈದ್ಯ ಅಧಿಕಾರಿಗಳು ಸಮರ್ಥಿಸುತ್ತಿದ್ದಾರೆ.
ಮೃತದೇಹ ಮೈಸೂರಿಗೆ ರವಾನೆ: ಮಿಮ್ಸ್ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕಳುಹಿಸಲಾಗಿದೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸಲು ವೈದ್ಯರ ತಂಡವನ್ನು ನೇಮಿಸಲಾಗುವುದು ಎಂದು ಹೇಳಿದರು.
ಯಾವ ವೈದ್ಯರು ಅವನಿಗೆ ಚಿಕಿತ್ಸೆ ನೀಡಿದರು? ಚಿಕಿತ್ಸೆಗಾಗಿ ಯಾವ ಔಷಧಗಳನ್ನು ನೀಡಲಾಯಿತು? ಸಾವಿಗೆ ಕಾರಣವೇನೆಂದು ತನಿಖೆ ನಡೆಸಲಾಗುತ್ತದೆ. ಮರಣೋತ್ತರ ಪರೀಕ್ಷೆಯ ಜತೆಗೆ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಬಾಲಿಕ ಮಿಮ್ಸ್ ಆಸ್ಪತ್ರೆಯಲ್ಲಿ ನಿಧನವಾಗಿರುವ ಕಾರಣ, ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಕಳುಹಿಸಲಾಗಿದೆ ಎಂದು ಹೇಳಿದರು.
Related









