NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರಿಗೆ ಸಿಹಿಸುದ್ದಿ: 26 ತಿಂಗಳ ಹಿಂಬಾಕಿ ಪಾವತಿಗೆ ಸರ್ಕಾರ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ 1.15ಲಕ್ಷ ನೌಕರರ ಪಾಲಿಗೆ ಸರ್ಕಾರ ಮಹತ್ವದ ಸಿಹಿ ಸುದ್ದಿ ನೀಡಿದೆ. ಕಳೆದೆರಡು ವರ್ಷಗಳಿಂದ 38 ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದ ವೇತನ ಹಿಂಬಾಕಿ (ಅರಿಯರ್ಸ್) ಹಾಗೂ ವೇತನ ಪರಿಷ್ಕರಣೆಗಾಗಿ ಆಗ್ರಹಿಸಿ ಸಾರಿಗೆ ಸಿಬ್ಬಂದಿ ನಾಳೆ ನಡೆಸಲುದ್ದೇಶಿಸಿದ್ದ ಪ್ರತಿಭಟನೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನೌಕರರ ಪ್ರಮುಖ ಬೇಡಿಕೆಗಳಲ್ಲಿ ಒಂದಾದ 38 ತಿಂಗಳ ಹಿಂಬಾಕಿಯಲ್ಲಿ 26 ತಿಂಗಳ ಹಿಂಬಾಕಿ ಪಾವತಿಸಲು ಸರ್ಕಾರ ಆದೇಶ ಹೊರಡಿಸಿದೆ.

  ನೌಕರರಿಗೆ ಶೇ.75ರಷ್ಟು  ಜಯ: ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ (KSRTC, BMTC, NWKRTC, KKRTC) ನೌಕರರು ಒಟ್ಟು 38 ತಿಂಗಳ ವೇತನ ಹಿಂಬಾಕಿಯನ್ನು ನೀಡುವಂತೆ ಒತ್ತಾಯಿಸುತ್ತಿದ್ದರು. ಈ ಬಗ್ಗೆ ಗಂಭೀರ ಚರ್ಚೆ ನಡೆಸಿದ ರಾಜ್ಯ ಸರ್ಕಾರ, ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ಪ್ರಾಥಮಿಕ ಹಂತದಲ್ಲಿ 26 ತಿಂಗಳ ಅರಿಯರ್ಸ್ ನೀಡಲು ಅಧಿಕೃತ ಒಪ್ಪಿಗೆ ಸೂಚಿಸಿದೆ. ಅಂದರೆ, 1-1-2021 ರಿಂದ 28-02-2023 ರವರೆಗೆ 26 ತಿಂಗಳ ಹಿಂಬಾಕಿ ನೀಡಲು ಒಪ್ಪಿಗೆಯನ್ನು ಸೂಚಿಸಿದೆ. ಇದು ಸಾರಿಗೆ ನೌಕರರ ಸಂಘಟನೆಗಳ ನಿರಂತರ ಶ್ರಮಕ್ಕೆ ಸಂದ ಜಯವೆಂದೇ ವಿಶ್ಲೇಷಿಸಲಾಗುತ್ತಿದೆ.

ವೇತನ ಪರಿಷ್ಕರಣೆಗೆ ದಿನಾಂಕ ನಿಗದಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ನಂತರ ಮತ್ತೊಂದು ಪ್ರಮುಖ ಘೋಷಣೆ ಮಾಡಿದ್ದಾರೆ. 1ನೇ ಏಪ್ರಿಲ್ 2025 ರಿಂದ ಜಾರಿಗೆ ಬರುವಂತೆ ಸಾರಿಗೆ ನೌಕರರ ವೇತನವನ್ನು ಪರಿಷ್ಕರಣೆ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿಸಿದೆ.

ವೇತನದಲ್ಲಿ ಎಷ್ಟು ಪ್ರಮಾಣದ ಏರಿಕೆ ಮಾಡಬೇಕು ಎಂಬ ಬಗ್ಗೆ ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ. ಆದರೆ, ಇಲ್ಲಿ 2024 ಜನವರಿ 1ರಿಂದ ವೇತನ ಪರಿಷ್ಕರಣೆ ಆಗಬೇಕು. ಆದರೆ 2025 ಮಾರ್ಚ್‌ 1ರಿಂದ ಜಾರಿಗೆ ಬರುವಂತೆ ಎಂದು ಹೇಳಿದರುವುದರಿಂದ ನೌಕರರಿಗೆ ಆರ್ಥಿಕವಾಗಿ 15 ತಿಂಗಳ ನಷ್ಟುವಾಗುತ್ತಿದೆ . ಇದರಿಂದ ನೌಕರರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಈ ಬಗ್ಗೆ ಸರ್ಕಾರ ಮತ್ತು ಸಂಘಟನೆಗಳು ಚರ್ಚಿಸಿ ಅಗತ್ಯ ಪರಿಹಾರ ನೀಡುವುದು ಸೂಕ್ತವಾಗಿದೆ.

ಪ್ರತಿಭಟನೆ ಬಿಸಿ ತಾಕುವ ಮುನ್ನವೇ ಎಚ್ಚೆತ್ತ  ಸರ್ಕಾರ: ನಾಳೆಯಿಂದ (ಫೆಬ್ರವರಿ 19) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾರಿಗೆ ನೌಕರರು ಬೃಹತ್ ‘ಬೆಂಗಳೂರು ಚಲೋ’ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಬನಶಂಕರಿ ಡಿಪೋ ಸೇರಿದಂತೆ ನಗರದಾದ್ಯಂತ ಕರಪತ್ರಗಳನ್ನು ಹಂಚಿ, ಸೇವೆಯಲ್ಲಿ ವ್ಯತ್ಯಯ ಉಂಟುಮಾಡುವ ಎಚ್ಚರಿಕೆ ನೀಡಲಾಗಿತ್ತು. ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಧಕ್ಕೆಯಾಗಬಾರದು ಹಾಗೂ ನೌಕರರ ಹಿತರಕ್ಷಣೆ ಮಾಡಬೇಕು ಎಂಬ ದೃಷ್ಟಿಯಿಂದ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಈ ಐತಿಹಾಸಿಕ ತೀರ್ಮಾನ ಪ್ರಕಟಿಸಿದೆ.

ಸಚಿವ ರಾಮಲಿಂಗಾರೆಡ್ಡಿ ಸಂಧಾನ ಯಶಸ್ವಿ: ಸಾರಿಗೆ ಸಚಿವರು ಇಂದು ರಾತ್ರಿಯವರೆಗೂ ಸಂಘಟನೆಗಳೊಂದಿಗೆ ಸಭೆ ನಡೆಸಿ, ನೌಕರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಿರ್ಧಾರದಿಂದಾಗಿ ನಾಳೆ ನಡೆಯಬೇಕಿದ್ದ ಸೇವೆಯ ವ್ಯತ್ಯಯದ ಆತಂಕ ದೂರವಾದಂತಾಗಿದೆ. ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ನೌಕರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟಾರೆಯಾಗಿ, ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೌಕರರ ಬೇಡಿಕೆಗಳನ್ನು ಈಡೇರಿಸುವತ್ತ ಸರ್ಕಾರ ದಾಪುಗಾಲು ಹಾಕಿದೆ.

ಆದರೆ, ಬರಬೇಕಿರುವ 12 ತಿಂಗಳ ಅಂದರ 2020 ಜನವರಿ 1ರಿಂದ ಕೊಡಬೇಕಿರುವ ಹಿಂಬಾಕಿ ಹಾಗೂ 2024 ಜನವರಿ 1ರಿಂದ ವೇತನ ಹೆಚ್ಚಳ ಮಾಡಬೇಕು ಇಲ್ಲದಿದ್ದರೆ ಸಾರಿಗೆ ನೌಕರರಾದ ನಾವು ಏನು ಪಾಪ ಮಾಡಿದ್ದೇವೆ ನಮ್ಮ ನಿಮಗಕ್ಕೆ ಮಾತ್ರ ಕೊರೋನಾ ಇತ್ತೆ. ಎಲ್ಲ ಸರ್ಕಾರಿ ನೌಕರರಿಗೂ ಕೊಟ್ಟಿರುವ ವೇತನದಂತೆ ನಮಗೂ ಎಲ್ಲ ಸೌಲಭ್ಯಗಳನ್ನು ಚಾಚೂ ತಪ್ಪದೆ ನೀಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

Megha
the authorMegha

Leave a Reply

error: Content is protected !!