ಮಾವು, ಹಲಸು ಪ್ರಿಯರಿಗೆ ಸಿಹಿಸುದ್ದಿ: ಜೂ.5 ರಿಂದ 7ರವರೆಗೆ ಮಾವು, ಹಲಸು ಹಣ್ಣುಗಳ ಪ್ರದರ್ಶನ ಮಾರಾಟ ಮೇಳ
ಮೇಳದಲ್ಲಿ 50ಕ್ಕೂ ಹೆಚ್ಚು ವಿವಿಧ ತಳಿಗಳ ಮಾವು, ಹಲಸು ಹಾಗೂ ಇತರೆ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಕಲ್ಪಿಸಲಾಗುವುದು. ಜಿಲ್ಲೆಯ ಸಾರ್ವಜನಿಕರು ಮೂರು ದಿನಗಳ ಈ ಮೇಳದಲ್ಲಿ ಭಾಗವಹಿಸಿ ರೈತರಿಂದ ನೇರವಾಗಿ ತಮಗಿಷ್ಟವಾದ ಹಣ್ಣುಗಳು ಖರೀದಿಸಬಹುದಾಗಿದೆ.

ಬೆಂಗಳೂರು: ಮಾವು ಮತ್ತು ಹಲಸು ಹಣ್ಣಿನ ಋತುಮಾನದ ಈ ಸಂಧರ್ಭದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗಲೆಂದು ಒಂದೇ ವೇದಿಕೆಯಲ್ಲಿ ವಿವಿಧ ತಳಿಯ “ಮಾವು ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಜೂನ್ 5 ರಿಂದ 7 ವರೆಗೆ ದೇವನಹಳ್ಳಿ, ಟೌನ್‌ನ ರಾಣಿ ಕ್ರಾಸ್ ( ನಂದಿ ಬೆಟ್ಟಕ್ಕೆ ಹೋಗುವ ರಸ್ತೆ ) ಬಳಿ ಆಯೋಜಿಸಿದೆ.
ಮಾವು ಮತ್ತು ಹಲಸು ಒಂದು ಋತುಮಾನ ಆಧಾರಿತ ಬೆಳೆಯಾಗಿದ್ದು, ಪ್ರಸ್ತುತ ಹಂಗಾಮಿನಲ್ಲಿ ಮಾವು ಮತ್ತು ಹಲಸು ಬೆಳೆ ಕಟಾವಿಗೆ ಬಂದಿದೆ. ಮಾವು ಹಲಸು ಹಾಗೂ ಇತರೆ ಹಣ್ಣುಗಳನ್ನು ಬೆಳೆಯುತ್ತಿರುವ ರೈತರಿಗೆ ಉತ್ತಮ ಬೆಲೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಸಿಗುವಂತೆ ಮಾಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಬೆಂಗಳೂರು ಗ್ರಾಮಾಂತರ ಅವರ ಸಹಯೋಗದೊಂದಿಗೆ ಮೇಳ ಏರ್ಪಡಿಸಲಾಗಿದೆ.
ಈ ಮೇಳದಲ್ಲಿ 50ಕ್ಕೂ ಹೆಚ್ಚು ವಿವಿಧ ತಳಿಗಳ ಮಾವು, ಹಲಸು ಹಾಗೂ ಇತರೆ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಕಲ್ಪಿಸಲಾಗುವುದು. ಜಿಲ್ಲೆಯ ಸಾರ್ವಜನಿಕರು ಮೂರು ದಿನಗಳ ಈ ಮೇಳದಲ್ಲಿ ಭಾಗವಹಿಸಿ ರೈತರಿಂದ ನೇರವಾಗಿ ತಮಗಿಷ್ಟವಾದ ಹಣ್ಣುಗಳು ಖರೀದಿಸಬಹುದಾಗಿದೆ.
ಮೇಳವನ್ನು ಜೂನ್ 5ರ ಬೆಳಗ್ಗೆ 10.30 ಗಂಟೆಗೆ ಸಂಪುಟ ದರ್ಜೆ ಸಚಿವ ಕೆ.ಎಚ್ ಮುನಿಯಪ್ಪ ಅವರು ಉದ್ಘಾಟನೆ ನೇರವೇರಿಸಲಿದ್ದಾರೆ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಶರತ್ ಕುಮಾರ್ ಬಚ್ಚೇಗೌಡ ಸಸ್ಯ ಸಂತೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದರು, ಶಾಸಕರು, ವಿಧಾನ ಸಭೆ,ಶಾಸಕರು ವಿಧಾನ ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಯ ಎಲ್ಲ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತರು ಭಾಗವಹಿಸಲಿದ್ದಾರೆ.
ಮೇಳದಲ್ಲಿ ಸಸ್ಯ ಸಂತೆ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಜಿಲ್ಲೆಯ ಎಲ್ಲ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಿಂದ ವಿವಿಧ ಜಾತಿಯ ಹಣ್ಣಿನ ಕಸಿ/ಸಸಿ ಗಿಡಗಳನ್ನು ಅಲಂಕಾರಿಕ ಗಿಡಗಳನ್ನು ಪ್ರದರ್ಶನಕ್ಕೆ ಹಾಗೂ ಇಲಾಖೆ ನಿಗಧಿಪಡಿಸಿದ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುವುದು. ಸದರಿ ಸಸ್ಯ ಸಂತೆ ಯಲ್ಲಿ ಮಾವು, ಸೀಬೆ, ತೆಂಗು, ನೆರಳೆ, ಕರಿಬೇವು, ನಿಂಬೆ, ಸಪೋಟ, ಮಲ್ಲಿಗೆ ಹಾಗೂ ಇತ್ಯಾದಿ ಕಸಿ/ಸಸಿಗಳು ಹಾಗೂ ಅಲಂಕಾರಿಕ ಗಿಡಗಳನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾವು ಬೆಳೆಯನ್ನು 5081.14 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಪ್ರಮುಖವಾಗಿ ಬಾದಾಮಿ, ರಸಪುರಿ, ತೋತಾಪುರಿ, ಮಲ್ಲಿಕಾ, ಸೇಂದೂರಾ ಮುಂತಾದ ತಳಿಗಳನ್ನು ಬೆಳೆಯಲಾಗುತ್ತಿದ್ದು ವಾರ್ಷಿಕ ಉತ್ಪಾದನೆ 40653.64 ಮೆಟ್ರಿಕ್ ಟನ್ ಗಳೆಂದು ಅಂದಾಜಿಸಲಾಗಿರುತ್ತದೆ. ಹಲಸು ಬೆಳೆಯನ್ನು 60.00 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು ವಾರ್ಷಿಕ ಉತ್ಪಾದನೆ 2762 ಮೆಟ್ರಿಕ್ ಟನ್ ನಷ್ಟು ಅಂದಾಜಿಸಲಾಗಿದೆ.
ತೋಟಗಾರಿಕೆ ಇಲಾಖಾ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾವು, ಹಲಸು ಹಾಗೂ ಇತರೆ ಹಣ್ಣುಗಳ ಪ್ರದೇಶ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಡಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಣ್ಣಿನ ಬೆಳೆಗಳ ಸರ್ವತೋಮುಖ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆಯು ಜಿಲ್ಲೆಯ ರೈತರಿಗೆ ಹತ್ತು ಹಲವಾರು ಯೋಜನೆಗಳನ್ನು ತಲುಪಿಸಲು ಕಾರ್ಯೋನ್ಮುಖವಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿನಿರ್ದೇಶಕರು ತಿಳಿಸಿದ್ದಾರೆ.
Related









