- ಪಿಂಚಣಿ 01.08.2024ರಿಂದ ಅನ್ವಯವಾಗುವಂತೆ ಅನುಷ್ಠಾನಗೊಳಿಸಲು ನಿರ್ಧಾರ
ಬೆಂಗಳೂರು: ರಾಜ್ಯ ಸರ್ಕಾರ ನಿವೃತ್ತ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದನ್ನು ನೀಡಿದ್ದು, 7ನೇ ವೇತನ ಆಯೋಗದ ಅನುಸಾರದಂತೆ ಪಿಂಚಣಿ ಮಂಜೂರು ಮಾಡಿ ಆದೇಶಿಸಿದೆ.
ಈ ಕುರಿತು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿ ಪರಿಷ್ಕರಣೆ ಕುರಿತಂತೆ ರಚಿಸಲಾಗಿದ್ದ ರಾಜ್ಯ 7ನೇ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಯನ್ನು 01.08.2024ರಿಂದ ಅನ್ವಯವಾಗುವಂತೆ ಅನುಷ್ಠಾನಗೊಳಿಸಲು ಸರ್ಕಾರದಲ್ಲಿ ನೀತಿ-ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಕುರಿತಂತೆ ಕೈಗೊಳ್ಳಲಾದ ನೀತಿ ನಿರ್ಣಯವನ್ನು ಅನುಷ್ಠಾನಗೊಳಿಸಿ ಹೊರಡಿಸಿರುವ 23.08.2024ರ ಸರ್ಕಾರಿ ಆದೇಶ ಸಂ: ಆಇ 21 ಎಸ್‌ಆರ್ 2024 ಮತ್ತು 28.08.2024ರ ಸರ್ಕಾರಿ ಆದೇಶ ಸಂ, ಆ-ಪಿಇಎನ್/262/2024ರ ಆದೇಶಗಳು ವಿಸ್ತೃತವಾಗಿದ್ದು ಸ್ವಯಂ-ವೇದ್ಯವಾಗಿವೆ.
ಈ ನಿಯಮಗಳ ಅವಕಾಶಗಳನ್ವಯ ನೌಕರರ ಪಿಂಚಣಿಯನ್ನು ಪರಿಷ್ಕರಿಸಿ ಮಂಜೂರು ಮಾಡುವ ಬಗ್ಗೆ ಸಕ್ಷಮ ಪ್ರಾಧಿಕಾರಿಗಳು ಸೂಕ್ತ ನಿರ್ಣಯ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಲು ನಿರ್ದೇಶಿಸಿದ್ದಾರೆ. ಈ ಮೂಲಕ ಸರ್ಕಾರಿ ನಿವೃತ್ತ ನೌಕರರಿಗೂ ಒಳ್ಳೆ ಪಿಂಚಣಿ ಸಿಗಲಿದೆ.