ಬೆಂಗಳೂರು: ಪ್ರಮುಖವಾಗಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈಗಾಗಲೇ ಸಾರಿಗೆ ನೌಕರರು ಅನೇಕ ಬಾರಿ ಮುಷ್ಕರ ಮಾಡಿದ್ದಾರೆ. ಆದರೂ, ಇದುವರೆಗೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಹೀಗಾಗಿ ನಾಳೆಯಿಂದ (ಮಾ.24) ಬೇಡಿಕೆ ಈಡೇರುವವರೆಗೂ ಮುಷ್ಕರ ನಡೆಸುವುದು ಖಚಿತ ಎಂದು ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಮಾ.20ರಂದು ಕಾರ್ಮಿಕ ಇಲಾಖೆ ಆಯುಕ್ತರು ರಾಜೀಸಂಧಾನ ಸಭೆ ಕರೆದು ನಾಮ್ ಕೇ ವಾಸ್ತೆ ಎಂಬಂತೆ ನಡೆದುಕೊಂಡರು. ಇನ್ನು ಮಾ.21ರಂದು ಬಿಎಂಟಿಸಿ ಅಧಿಕಾರಿಗಳು ಮತ್ತೊಂದು ಸುತ್ತಿನ ಮಾತುಕತೆಗೆ ಕರೆದು ಬೆದರಿಕೆ ಹಾಕಿದ್ದರು. ಹೀಗಾಗಿ ನಮ್ಮ ಬೇಡಿಕೆಗಳು ಈಡೇರುವವರೆಗೂ ಮುಷ್ಕರ ಮಾಡುವುದು ಸಿದ್ಧ ಎಂದು ಹೇಳಿದರು.
ಸಾರಿಗೆ ನೌಕರರನ್ನು ವೇತನ ಆಯೋಗ ಮಾದರಿಯಡಿ ತರಬೇಕು ಎನ್ನುವುದು ಪ್ರಮುಖ ಬೇಡಿಕೆ ಆಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾರಿಗೆ ಸಚಿವರು ಪದೇಪದೆ ಹಳೇ ಮಾತುಗಳನ್ನೇ ಹೇಳುತ್ತಿದ್ದಾರೆ. ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ತೀರ್ಮಾನ ಮಾಡುತ್ತಿಲ್ಲ. ಇನ್ನು ಸರ್ಕಾರ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ ಇದು. ಇದಿಷ್ಟೇ ಸಾಕು ಎಂಬಂತೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಸಿಎಂಗೆ ಅಭಿನಂದನೆ ಸಲ್ಲಿಸಿ ಬಂದಿದ್ದಾರೆ.
ಇದೆಲ್ಲವನ್ನು ಗಮನಿಸಿದರೆ, ಸರ್ಕಾರ ನಮ್ಮನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತದೆ. ಇದರಿಂದ ಬೇಸತ್ತಿರುವ ನಮಗೆ ಮುಷ್ಕರ ಮಾಡುವುದು ಬಿಟ್ಟು ಬೇರೆ ದಾರಿ ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಬಸ್‌ಬಂದ್ ಮಾಡಿ ಮುಷ್ಕರ ಮಾಡುವುದು ಖಚಿತ ಎಂದು ಹೇಳಿದರು.
ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಕರೆ ನೀಡಿರುವ ಬಂದ್ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 6ಗಂಟೆಯಿಂದಲೇ ಬಸ್‌ಗಳು ರಸ್ತೆಗಿಳಿಯುವುದು ಬಹುತೇಕ ಅನುಮಾನವೆ. ಹೀಗಾಗಿ ನಾಡಿನ ಜನರು ತುರ್ತು ಕೆಲಸಗಳಿದ್ದರೆ ನಿಮ್ಮ ಸ್ವಂತ ವಾಹನಗಳನ್ನು ಅವಲಂಬಿಸುವುದು ಒಳ್ಳೆಯದು.
ಮಾ.31ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಅಲ್ಲಿಯವರೆಗೂ ಮುಷ್ಕರ ಮುಂದುವರಿದರೆ ವಿದ್ಯಾರ್ಥಿಗಳಿಗೂ ತೊಂದರೆ ಆಗಬಹುದು. ಇಲ್ಲ ಅಷ್ಟರೊಳಗೆ ಸರ್ಕಾರ ನೌಕರರ ಜತೆ ಮಾತುಕತೆ ನಡೆಸಿದರೆ ಬಂದ್ ವಾಪಸ್ ಪಡೆಯುವ ಸಾಧ್ಯತೆಯೂ ಹೆಚ್ಚಿದೆ.
ಒಟ್ಟಾರೆ, ನಾಳೆ ಬೆಳಗ್ಗೆ 6ಗಂಟೆಯಿಂದ ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿಯಲ್ಲ. ಈ ಬಂದ್ ಸಂಬಂಧ ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಬಂದ್‌ನಲ್ಲಿ ಭಾಗವಹಿಸುವುದಕ್ಕಾಗಿಯೇ ಸಾರಿಗೆ ನೌಕರರು ಕಾರು, ಟಿಟಿ ಸೇರಿದಂತೆ ಇತರ ವಾಹನಗಳನ್ನು ಬುಕ್ ಮಾಡಿಕೊಂಡಿದ್ದು, ಬಸ್ ನಿಲ್ಲಿಸಿ ಮುಷ್ಕರದಲ್ಲಿ ಭಾಗವಹಿಸುವುದಕ್ಕೆ ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.