ಬೆಂಗಳೂರು: ಗುತ್ತಿಗೆದಾರರಿಂದ 40% ಕಮಿಷನ್ ಪಡೆಯುತ್ತಿರುವ ಆರೋಪದ ಬಗ್ಗೆ ಸರ್ಕಾರ ನ್ಯಾಯಾಂಗ ತನಿಖೆ ನಡೆಸಿದರೆ ನಾವು ಸೂಕ್ತ ದಾಖಲೆ ಕೊಡಲು ಸಿದ್ದರಿದ್ದೇವೆ ಎಂದು ಗುತ್ತಿಗೆದಾರ ಸಂಘ ಹೇಳಿದೆ.
ಬುಧವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಗುತ್ತಿಗೆದಾರರ ಸಂಘದ ನಿಯೋಗ, ರಾಜ್ಯ ಸರ್ಕಾರದ ಶೇ.40ರಷ್ಟು ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ನಡೆಸಲು ಒಪ್ಪುತ್ತಿಲ್ಲ ಎಂದು ತಿಳಿಸಿದೆ.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾವು ಕೂಡ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಡ ಹಾಕುತ್ತೇವೆ. ಒಂದು ವೇಳೆ ಸರ್ಕಾರ ನಮ್ಮ ಆಗ್ರಹಕ್ಕೆ ಬೆಲೆ ಕೊಡದೆ ಹೋದರೆ ಈ ವಿಚಾರವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನು ತಮ್ಮನ್ನು ಭೇಟಿ ಮಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇತೃತ್ವದ ನಿಯೋಗದೊಂದಿಗೆ ಸಮಾಲೋಚನೆ ನಡೆಸಿದ ಅವರು, ನ್ಯಾಯಾಂಗ ತನಿಖೆಗೆ ಸರ್ಕಾರ ಒಪ್ಪುತ್ತಿಲ್ಲ ಎಂದರೆ ಇದರರ್ಥ ಭ್ರಷ್ಟಾಚಾರ ಮಾಡಿರುವುದನ್ನು ಒಪ್ಪಿಕೊಂಡಂತೆ ಅಲ್ಲವಾ? ಸರ್ಕಾರ ಪ್ರಾಮಾಣಿಕವಾಗಿದ್ದರೆ ನ್ಯಾಯಾಂಗ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
ನಾನು ಹೈಕೋರ್ಟ್‍ನ ಹಾಲಿ ನ್ಯಾಯಾಧೀಶ ಉಸ್ತುವಾರಿಯಲ್ಲಿ ತನಿಖೆ ಮಾಡಿ ಎಂದು ಒತ್ತಾಯ ಮಾಡಿದ್ದೆ. ಸರ್ಕಾರ ಇದಕ್ಕೆ ಒಪ್ಪುತ್ತಿಲ್ಲ ಎಂದ ಅವರು, ಟೆಂಡರ್ ಅನುಮೋದನೆಗೆ ಮೊದಲೇ ಶೇ.30ರಿಂದ ಶೇ.40ರಷ್ಟು ಕಮಿಷನ್ ಕೊಡಬೇಕಾಗಿದೆ ಎಂದು ಪ್ರಧಾನಿಗೆ ಪತ್ರ ಬರೆದು 1 ವರ್ಷವಾದರೂ ಅವರೂ ಯಾವ ಕ್ರಮ ಕೈಗೊಂಡಿಲ್ಲ ಎಂದು ಗುತ್ತಿಗೆ ದಾರರು ತಿಳಿಸಿದ್ದಾರೆ ಎಂದರು.
ಅಲ್ಲದೆ ನ್ಯಾಯಾಂಗ ತನಿಖೆ ನಡೆಸುವುದಾದರೆ ದಾಖಲಾತಿ ಕೊಡಲು ನಾವು ತಯಾರಾಗಿದ್ದೇವೆ, ಒಂದು ವೇಳೆ ನಮ್ಮಿಂದ ಅದನ್ನು ಸಾಬೀತು ಮಾಡಲು ಆಗದೆ ಹೋದರೆ ಕಾನೂನು ಕ್ರಮ ಎದುರಿಸಲು ಸಿದ್ಧರಿದ್ದೇವೆಂದು ಹೇಳಿದ್ದಾರೆ ಎಂದರು.
ಭ್ರಷ್ಟಾಚಾರಕ್ಕೆ ಶರವೇಗ: ಭ್ರಷ್ಟಾಚಾರ ಎಲ್ಲ ಕಾಲದಲ್ಲೂ ಆಮೆ ವೇಗದಲ್ಲಿ ಇತ್ತು, ಈಗ ಶರವೇಗದಲ್ಲಿ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದವರು ಹೇಳಿದ್ದಾರೆ. ಗುತ್ತಿಗೆದಾರರಿಗೆ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಬಿಬಿಎಂಪಿಯಿಂದ ಸುಮಾರು 22 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣ ಬಿಡುಗಡೆಯಾಗಬೇಕಿದೆಯಂತೆ. ಈ ಬೃಹತ್ ಬಾಕಿ ಮೊತ್ತವನ್ನು ಆದ್ಯತೆ ಮೇಲೆ ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.
ಇನ್ನೊಂದು ವಿಚಾರ ಅನುದಾನ ಮೀಸಲಿಡದೆ ಟೆಂಡರ್ ಕರೆಯುತ್ತಾರೆ, ಇದರಿಂದ ಕಾಮಗಾರಿ ಹಣ ಬಿಡುಗಡೆ ಆಗುವುದು ಹೇಗೆ ಎಂದು ಒಟ್ಟಾರೆ ಗುತ್ತಿಗೆದಾರರು ಸಾಕಷ್ಟು ಬೇಸರಗೊಂಡಿದ್ದಾರೆ. ಇಂತಹ ಭ್ರಷ್ಟ ಸರ್ಕಾರ ಯಾವ ಕಾಲದಲ್ಲೂ ಇರಲಿಲ್ಲ ಎಂಬುದು ಅವರ ಅಳಲು ಎಂದು ಸಿದ್ದರಾಮಯ್ಯ ತಿಳಿಸಿದರು.
ಮೋದಿ ಅವರು ಚುನಾವಣಾ ಭಾಷಣದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಶೇ.10ರಷ್ಟು ಕಮಿಷನ್ ಸರ್ಕಾರ ಎಂದು ಆರೋಪ ಮಾಡಿದಾಗ ಎಲ್ಲರೂ ಅದಕ್ಕೆ ಪ್ರಚಾರ ನೀಡಿದರು, ಯಾರು ಅವರ ಬಳಿ ದಾಖಲೆ ಕೇಳಿಲ್ಲ. ಈಗ ಗುತ್ತಿಗೆದಾರರ ಸಂಘದವರು ಸರ್ಕಾರದ ಭ್ರಷ್ಟಾಚಾರವನ್ನು ಸಾಬೀತು ಮಾಡಲು ಸಿದ್ಧರಿದ್ದಾರೆ. ತನಿಖೆ ಆಗಬೇಕೋ ಬೇಡವೋ ಎಂದು ಪ್ರಶ್ನಿಸಿದರು.
ಮತ್ತೆ ಪ್ರಧಾನಿಗೆ ಮತ್ತೊಮ್ಮೆ ಪತ್ರ ಬರೆಯುವುದಾಗಿ ಕೆಂಪಣ್ಣ ಹೇಳಿದ್ದಾರೆ. ಸಚಿವ ಮುನಿರತ್ನ ಅವರ ಹೆಸರು ಪ್ರಸ್ತಾಪ ಮಾಡಿದ್ದಾರೆ, ಇದರ ಜತೆಗೆ ನೀರಾವರಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ ಎಂದರು.
ಬಿಜೆಪಿ ಸರ್ಕಾರದ ಶೇ.40ರಷ್ಟು ಕಮಿಷನ್ ವಿಚಾರವನ್ನು ಮಾತ್ರ ಚುನಾವಣೆಯಲ್ಲಿ ಜನರ ಬಳಿ ತೆಗೆದುಕೊಂಡು ಹೋಗುವುದಲ್ಲ, ರಾಜ್ಯದಲ್ಲಿ ಇದರ ಜೊತೆಗೆ ಇನ್ನೂ ಹಲವು ಗಂಭೀರ ಸಮಸ್ಯೆಗಳಿವೆ. ಮಹಿಳೆಯರು, ಮಕ್ಕಳು, ರೈತರು, ಯುವಜನರು ಎದುರಿಸುತ್ತಿರುವ ಹಲವು ಸಮಸ್ಯೆಗಳು ಇವೆ, ಅವೆಲ್ಲವನ್ನೂ ಜನರ ಮುಂದಿಡುತ್ತೇವೆ ಎಂದು ಹೇಳಿದರು.
ಇನ್ನು ಬಿಜೆಪಿ ನಾಯಕರು ತಮ್ಮ ಭ್ರಷ್ಟಾಚಾರವನ್ನು ಯಾವ ರೀತಿ ಸಮರ್ಥನೆ ಮಾಡಿಕೊಳ್ಳುತ್ತಾರೆಂಬುದು ಮುಖ್ಯವಲ್ಲ. ಬಿಜೆಪಿ ಆರೋಪಿ ಸ್ಥಾನದಲ್ಲಿರುವ ಪಕ್ಷ. ಅವರ ಹೇಳಿಕೆಗಳಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಗುತ್ತಿಗೆದಾರರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಅವರು ಮಾತಿಗೆ ತಪ್ಪಿದ್ದಾರೆ. ಅಧಿಕಾರಿಗಳು ಮುಖ್ಯಮಂತ್ರಿ ಮಾತು ಕೇಳುತ್ತಿಲ್ಲ ಎಂದು ಕೆಂಪಣ್ಣನವರು ಹೇಳಿದ್ದಾರೆ. ಸೆಪ್ಟಂಬರ್ ತಿಂಗಳಲ್ಲಿ ಅಧಿವೇಶನವನ್ನು ಕರೆಯಲೇಬೇಕು. ಸದನ ನಡೆದು ಆರು ತಿಂಗಳು ಭರ್ತಿ ಆಗುತ್ತದೆ. ಹಾಗಾಗಿ ಸರಕಾರಕ್ಕೆ ಅಧಿವೇಶನ ಕರೆಯದೆ ಬೇರೆ ದಾರಿ ಇಲ್ಲ’ ಎಂದು ಹೇಳಿದರು.
ಬಿಬಿಎಂಪಿ ಗುತ್ತಿಗೆದಾರರು ನಿನ್ನೆ ಸುದ್ದಿಗೋಷ್ಠಿ ಮಾಡಿ ಕಮಿಷನ್ ಶೇ.40ರಿಂದ ಶೇ.50ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ. ಕೆಲವೆಡೆ ಶೇ.100ರಷ್ಟು ಕಮಿಷನ್ ವ್ಯವಹಾರ ನಡೆಯುತ್ತಿದೆ. ಲಿಂಗಸೂರು, ದೇವದುರ್ಗದಲ್ಲಿ ಕಾಮಗಾರಿಯನ್ನೇ ಮಾಡದೆ ಬಿಲ್ ತೆಗೆದುಕೊಂಡಿದ್ದಾರೆಂಬ ಆರೋಪ ಇದೆ. ನ್ಯಾಯಾಂಗ ತನಿಖೆ ನಡೆದರೆ ಈ ಎಲ್ಲ ವಿಚಾರಗಳು ಹೊರಬರುತ್ತದೆ ಎಂದು ತಿಳಿಸಿದರು.
ಭ್ರಷ್ಟಾಚಾರವನ್ನು ಸಾಬೀತು ಮಾಡುತ್ತೇವೆ, ಒಂದು ವೇಳೆ ನಾವು ಸಾಬೀತು ಮಾಡಲು ಆಗಿಲ್ಲ ಎಂದರೆ ಕಾನೂನು ಕ್ರಮ ಜರುಗಿಸಿ, ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಹಾಗಾದರೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಇರುವ ಸಮಸ್ಯೆಯೇನು?
ಅಪರಾಧಿ ಸ್ಥಾನದಲ್ಲಿರುವವರಿಂದ ಸಲಹೆ ಪಡೆಯಬೇಕೋ ಅಥವಾ ದೂರುದಾರರಿಂದ ಸಲಹೆ ಪಡೆಯಬೇಕೋ? ಸರ್ಕಾರ ಭ್ರಷ್ಟಾಚಾರ ಆರೋಪ ಎದುರಿಸುತ್ತಿದೆ, ಹಾಗಾಗಿ ಸರ್ಕಾರದ ವಿರುದ್ಧ ದೂರು ನೀಡಿದವರು ಏನು ಒತ್ತಾಯ ಮಾಡುತ್ತಿದ್ದಾರೆ ಅದನ್ನು ಮಾಡಿ. ತಪ್ಪಿಸಿಕೊಳ್ಳೋಕೆ ಏಕೆ ನೋಡುತ್ತೀರಾ?’l ಸಿದ್ದರಾಮಯ್ಯ ವಿಪಕ್ಷ ನಾಯಕ