ಬೆಂಗಳೂರು: ಸಾರಿಗೆ ನೌಕರರಿಗೆ 17 ಮಾರ್ಚ್2023ರಂದು ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವುದಕ್ಕೆ ದ್ವಿಪಕ್ಷೀಯ ಒಪ್ಪಂದದಂತೆ ಮಾಡಲಾಗಿದೆ ಎಂದು ಹೇಳಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಹಿಗ್ಗಿದರು.
ಆದರೆ, ಅಸಲಿಗೆ ಸರ್ಕಾರ ಯಾವುದೇ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳದೆ ಏಕಪಕ್ಷೀಯವಾಗಿ ನೌಕರರ ವೇತವನ್ನು ಶೇ.15ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ ಎಂಬುದಕ್ಕೆ ಸಾರಿಗೆ ನಿಗಮದ ಮಹಿಳಾ ನೌಕರರೊಬ್ಬರು ಆರ್‌ಟಿಐಯಡಿ ಕೋರಿದ್ದ ಮಾಹಿತಿಯಿಂದ ಬಹಿರಂಗವಾಗಿದೆ.
ಹೌದು! ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯ ನೇತೃತ್ವ ವಹಿಸಿರುವ ಅನಂತ ಸುಬ್ಬರಾವ್ ಅವರು ಸರ್ಕಾರ ಮೂಲ ವೇತನಕ್ಕೆ ಬಿಡಿಎ ಮರ್ಜ್ ಮಾಡಿ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು, ಇಲ್ಲದಿದ್ದರೆ ಮಾರ್ಚ್ 21ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಆ ಬಳಿಕ ಮಾ.17ರಂದು ಸರ್ಕಾರ ಶೇ.15ರಷ್ಡು ವೇತನ ಹೆಚ್ಚಳ ಮಾಡಿ ಅದೂ ಕೂಡ ಮೂಲವೇತನಕ್ಕಷ್ಟೇ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಇದನ್ನು ಒಪ್ಪದ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮಾ.21ರಿಂದ ರಾಜ್ಯಾದ್ಯಂತ ಬಸ್‌ನಿಲ್ಲಿಸಿ ಮುಷ್ಕರ ಮಾಡುತ್ತೇವೆ ಎಂದು ಹೇಳಿದ್ದರು.
ಆದರೆ, ಮಾ.18ರಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಸಾರಿಗೆ ಕೇಂದ್ರ ಕಚೇರಿಯಲ್ಲಿ ಕದ್ದುಮುಚ್ಚಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೊರಬಂದ ಸಮಿತಿ ಪದಾಧಿಕಾರಿಗಳು ಸರ್ಕಾರ ತಮ್ಮ ಬೇಡಿಕೆಗಳನ್ನು ಒಪ್ಪದಿದ್ದರೂ ಮುಷ್ಕರವನ್ನು ಏಕಾಏಕಿ ವಾಪಸ್ ಪಡೆದಿರುವುದಾಗಿ ಘೊಷಣೆ ಮಾಡಿಕೊಂಡರು.
ಆ ಬಳಿಕ ಮಾ.19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ನಮ್ಮ ಬೇಡಿಕೆ ಈಡೇರಿಸಿದ್ದಕ್ಕೆ ಮತ್ತು ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿ ಹೂ ಗುಚ್ಛನೀಡಿ ಸಂಭ್ರಮಿಸಿದ್ದರು.
ಅಸಲಿಗೆ ಸರ್ಕಾರ ಈ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಯಾವೊಂದು ಬೇಡಿಕೆಯನ್ನು ಈಡೇರಿಸದೆ ತಾನೇ ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರದಂತೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿದೆ ಎಂಬುವುದು ಆರ್‌ಟಿಐಯಡಿ ಕೇಳಿದ್ದ ಮಾಹಿತಿಯಿಂದ ಬಹಿರಂಗವಾಗಿದೆ.
ಇನ್ನು ಇದನ್ನು ಗಮನಿಸಿದರೆ ನೌಕರರು ನಮ್ಮ ಜತೆ ಇಲ್ಲ ನಾವು ಮಾ.21ರಂದು ಮುಷ್ಕರಕ್ಕೆ ಹೋದರೆ ನೌಕರರಾರು ನಮ್ಮನ್ನು ಬೆಂಬಲಿಸುವುದಿಲ್ಲ ಎಂದು ಭಯಗೊಂಡು ಏಕಾಏಕಿ ಸರ್ಕಾರ ಹೆಚ್ಚಿಸಿದ ಶೇ.15ರಷ್ಟು ವೇತನವನ್ನೇ ಒಪ್ಪಿಕೊಂಡು ಮುಷ್ಕರವನ್ನು ವಾಪಸ್ ಪಡೆದಿರುವ ನಾಟಕವಾಡಿದರ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಎಂಬುವುದು ಈಗ ನೌಕರರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ತಮ್ಮ ಬೇಡಿಕೆಗೆ ವಿರುದ್ಧವಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದ್ದನ್ನು ಖಂಡಿಸಿ ಮಾ.21ರಂದು ಮುಷ್ಕರ ಮಾಡುತ್ತೇವೆ ಎಂದು ಹೇಳಿದ್ದ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮುಷ್ಕರ ಮಾಡದಿದ್ದರೂ ಪರವಾಗಿರಲಿಲ್ಲ. ಆದ್ರೆ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ ಎಂದು ಮಾ.17ರಂದು ನೀಡಿದ್ದ ಹೇಳಿಕೆಗೆ ಬದ್ಧವಾಗಿದ್ದುಕೊಂಡು ತಟಸ್ಥವಾಗಿ ಉಳಿದುಕೊಂಡಿದ್ದರೆ ನೌಕರರು ಒಂದಷ್ಟು ಮರಿಯಾದೆ ಕೊಡುತ್ತಿದ್ದರೇನೋ.
ಆದರೆ, ಅದಾವುದನ್ನು ಯೋಚಿಸದೆ, ಮಾ.18ರಂದು ಕೇಂದ್ರ ಕಚೇರಿಯಿಂದ ಏಕಾಏಕಿ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಷ್ಟೆ ಹೊರಬಂದು ( ಇಲ್ಲಿ ಅಧಿಕಾರಿಗಳಾರು ಜತೆಗಿರಲಿಲ್ಲ) ಸರ್ಕಾರ ನಮ್ಮ ಬೇಡಿಕೆ ಪೂರೈಸುವುದಾಗಿ ಹೇಳಿದೆ ಹೀಗಾಗಿ ಮಾ.21ರಂದು ಹಮ್ಮಿಕೊಂಡಿದ್ದ ಮುಷ್ಕರವನ್ನು ಕೈ ಬಿಟ್ಟಿದ್ದೇವೆ ಎಂದು ಹೇಳಿದರಲ್ಲ, ಇದರ ಅರ್ಥವೇನು ಎಂದು ನೌಕರರು ಪ್ರಶ್ನಿಸುತ್ತಿದ್ದಾರೆ.
ಇನ್ನು ಇದಾದ ಬಳಿಕವೂ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಕರೆ ನೀಡಿದ್ದ ಮಾ.24ರಂದು ಮುಷ್ಕರ ಮಾಡುವ ನಿಲುವಿಗೆ ವೇದಿಕೆ ಪದಾಧಿಕಾರಿಗಳು ಬದ್ಧರಾಗಿ ಮುಷ್ಕರ ಮಾಡೇ ತೀರುತ್ತೇವೆ ನಮಗೆ ಸರಿ ಸಮಾನ ವೇತನ ಬೇಕು ಎಂದು ಆಗ್ರಹಿಸಿದ್ದರು. ಆದರೆ, ಬಂದ್ ಮಾಡುವ ಹಿಂದಿನ ದಿನವೇ ಖಾಸಗಿ ವ್ಯಕ್ತಿಯೊಬ್ಬರು ಮುಷ್ಕರ ಮಾಡುವುದು ಸರಿಯಲ್ಲ ಎಂದು ಹೈಕೋರ್ಟ್ ಮೊರೆ ಹೋಗಿದ್ದರಿಂದ ಮುಷ್ಕರಕ್ಕೆ 3 ವಾರಗಳ ಕಾಲ ಹೈಕೋರ್ಟ್ ತಡೆ ನೀಡಿದೆ.
ಒಟ್ಟಾರೆ, ತಮ್ಮ ಯಾವುದೇ ಬೇಡಿಕೆಗೂ ಸರ್ಕಾರ ಸ್ಪಂದಿಸದಿದ್ದರೂ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಸಿಎಂ ಅವರನ್ನು ಸನ್ಮಾನಿಸಿ ಹಿಗ್ಗಿದ್ದು ಮಾತ್ರ ನೌಕರರಿಗೆ ನುಂಗಲಾರದ ತಪ್ಪವಾಗಿ ಪರಿಣಮಿಸಿರುವುದಂತು ಕಟುಸತ್ಯ.