Search By Date & Category

NEWSನಮ್ಮರಾಜ್ಯ

ಕನಿಷ್ಠ ವೇತನ, ಪಿಂಚಣಿ ಸೌಲಭ್ಯಕ್ಕಾಗಿ ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಗ್ರಾಮ ಪಂಚಾಯಿತಿ ನೌಕರರಿಗೆ ಬೆಲೆ ಏರಿಕೆಗೆ ತಕ್ಕಂತೆ ಜೀವನ ನಡೆಸಲು ಕನಿಷ್ಠ ವೇತನ ₹25,000 ನಿಗದಿ ಮಾಡಬೇಕು ಹಾಗೂ ನಿವೃತ್ತರಿಗೆ ₹6000 ಮಾಸಿಕ ಪಿಂಚಣಿ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿ ಗ್ರಾಪಂ ನೌಕರರು ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯದ ಗ್ರಾಮ ಪಂಚಾಯಿತಿ ನೌಕರರಿಗೆ ಸಿ ಮತ್ತು ಡಿ ದರ್ಜೆ ಸ್ಥಾನಮಾನ ನೀಡಬೇಕು ಮತ್ತು ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಬೃಹತ್‌ ಹೋರಾಟ ನಡೆಸುತ್ತಿದ್ದಾರೆ.

ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಾದ ನಾವು ಕಳೆದ ಎಂಟು ವರ್ಷಗಳಿಂದ ಪಂಚಾಯಿತಿ ನೌಕರರುಗಳೇ ಸೇರಿ ಸಂಘಟಿತರಾಗಿ ಮಾತೃ ಇಲಾಖೆಯ ಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಯಾವುದೇ ಹೋರಾಟ ಮುಷ್ಕರಗಳಲ್ಲಿ ಸೇರದೆ ನೇರವಾಗಿ ಸರ್ಕಾರ, ಇಲಾಖಾ ಸಚಿವರು ಹಾಗೂ ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮೂಲಕ ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬೇಡಿಕೆಗಳನ್ನು ಸಲ್ಲಿಸುತ್ತಾ ಬಂದಿದ್ದೇವೆ.

ಮುಖ್ಯ ಮಂತ್ರಿಗಳು ಪ್ರಸ್ತುತ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜವಾಬ್ದಾರಿಯನ್ನು ಹೊಂದಿದ್ದು, ಇಲಾಖೆಯ ಅಭಿವೃದ್ಧಿಗೆ ಕಳೆದ ಮೂರು ದಶಕಗಳಿಂದ ಹಗಲಿರುಳು ದುಡಿಯುತ್ತಿರುವ ಗ್ರಾಮ ಪಂಚಾಯಿತಿ ನೌಕರರಾದ ಬಿಲ್ ಕಲೇಕ್ಟರ್‌, ಕ್ಲರ್ಕ್‌ ಕಮ್‌ ಡಿಇಒ, ಡಾಟ ಎಂಟ್ರೀ ಅಪರೇಟರ್‌, ವಾಟರ್‌ ಮ್ಯಾನ್‌, ಪಂಪುಚಾಲಕ, ಶುಚಿತ್ವ ನೌಕರರು ಹಾಗೂ ಅಟೆಂಡರ್‌ ಗಳು ಭವಿಷ್ಯ ನಿಧಿ, ಆರೋಗ್ಯ ಭದ್ರತೆ, ಸರಿಯಾದ ವೇತನ ಶ್ರೇಣಿ, ಉದ್ಯೋಗ ಭದ್ರತೆ, ನಿವೃತ್ತಿ ಜೀವನಕ್ಕೆ ಭದ್ರತೆ ಇಲ್ಲದೇ ಕಳೆದ ಮೂರು ದಶಕಗಳಿಂದ ಕೇವಲ ಕನಿಷ್ಠ ಕೂಲಿ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದೇವೆ.

ಹೀಗಾಗಿ ಸರ್ಕಾರ ‌ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಬೃಹತ್‌ ಹೋರಾಟ ಮಾಡುತ್ತಿದ್ದೇವೆ ಎಂದು ಸಮಿತಿ ನೌಕರರು ವಿವರಿಸಿದ್ದಾರೆ. ಪ್ರಪ್ರಥಮ ಬಾರಿಗೆ ಪಂಚಾಯಿತಿ ನೌಕರರೇ ಅನಿರ್ದಿಷ್ಟ ಕಾಲ ತಮ್ಮ ಮೂಲಭೂತ ಬೇಡಿಕೆಗಳಿಗಾಗಿ ರಾಜ್ಯ ಮಟ್ಟದ ಬೃಹತ್ ಹೋರಾಟಕ್ಕೆ ಇಳಿದಿದ್ದೇವೆ ಎಂದು ತಿಳಿಸಿದ್ದಾರೆ.

ನೌಕರರ ಮುಖ್ಯ ಬೇಡಿಕೆಗಳು: 1. ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಲರ್ಕ್/ ಕ್ಲಕ್ ಕಮ್ ಡಿಇಒ, ಬಿಲ್‌ ಕಲೇಕ್ಟರ್ ಹಾಗೂ ಡಾಟ ಎಂಟ್ರೀ ಅಪರೇಟರ್ ಗಳಿಗೆ ಸಿ ದರ್ಜೆ ಸ್ಥಾನಮಾನ ಮತ್ತು ಅಟೆಂಡರ್, ಕ್ಲೀನರ್ಸ್‌, ವಾಟರ್ ಮ್ಯಾನ್/ಪಂಪು ಚಾಲಕ ಇತ್ಯಾದಿ ವೃಂದದವರಿಗೆ ಡಿ ದರ್ಜೆ ನೀಡಿ, ನಗರ ಮತ್ತು ಪಟ್ಟಣ ಪಂಚಾಯಿತಿಯಂತೆ ವೇತನ ಶ್ರೇಣಿ ನಿಗದಿಪಡಿಸಬೇಕು, ಜೊತೆಗೆ ನೌಕರರು ಮತ್ತು ನೌಕರರ ಅವಲಂಬಿತರಿಗೆ ಆರೋಗ್ಯ ಭದ್ರತೆಯೊಂದಿಗೆ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆಯ ವ್ಯವಸ್ಥೆಯನ್ನು ಕಲ್ಪಿಸಬೇಕು.

2. ಪಂಚಾಯಿತಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ವಾಟರ್‌ ಮ್ಯಾನ್‌, ಶುಚಿತ್ವ ನೌಕರರು ಹಾಗೂ ಇತರ ನೌಕರರಿಗೆ ಅವರ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಪರಿಗಣಿಸಿದೇ ಹಾಗೂ ಪಂಚಾಯತಿಗಳಲ್ಲಿ ಹುದ್ದೆಗಳ ಗರಿಷ್ಠ ಮೀತಿಯನ್ನು ಮತ್ತು ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿದೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ನೀಡಬೇಕು. ಮತ್ತು ಪಂಚಾಯಿತಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಡಾಟ ಎಂಟ್ರೀ ಅಪರೇಟರ್‌ ಗಳಿಗೆ ಜಿಲ್ಲಾ ಪಂಚಾಯಿತಿ ಅನುಮೋದನೆ ನೀಡಿ ಸೇವಾ ಭದ್ರತೆ ಒದಗಿಸಬೇಕು.

3. ವಿದ್ಯಾರ್ಹತೆ ಮತ್ತು ವಯೋಮಿತಿ ಹಾಗೂ ಇತರೆ ಸಮಸ್ಯೆಗಳಿಂದ ಜಿಲ್ಲಾ ಪಂಚಾಯಿತಿ ಅನುಮೋದನೆಯಾಗದೇ ನಿವೃತ್ತಿಯಾದ ಹಾಗೂ ಮುಂದೆ ನಿವೃತ್ತಿಯಾಗುವ ಎಲ್ಲ ಗ್ರಾಮ ಪಂಚಾಯಿತಿ ನೌಕರರಿಗೆ ನಿವೃತ್ತಿ ಉಪಧನ ಮಂಜೂರು ಮಾಡಬೇಕು, ಈ ನಿವೃತ್ತಿ ಉಪಧನ ಪಾವತಿಸಲು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಸರ್ಕಾರವೇ ಒಂದು ಶಾಶ್ವತ ನಿಧಿಯನ್ನು ಕಾಯ್ದಿರಿಸಿ ಪಂಚಾಯಿತಿ ನೌಕರರ ನಿವೃತ್ತಿ ಆದ ಒಂದು ತಿಂಗಳ ಒಳಗಾಗಿ ಗೌರವ ನಿವೃತ್ತಿ ಉಪಧನ ಮಂಜೂರು ಮಾಡಬೇಕು.

Leave a Reply

error: Content is protected !!