ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಆತ್ಮಹತ್ಯೆ ಪ್ರಕರಣಗಳು ಮರುಕಳಿಸುತ್ತಿವೆ. ಬಿಎಂಟಿಸಿ ದೇವನಹಳ್ಳಿ ಘಟಕ 50ರ ಚಾಲಕ ಕಂ. ನಿರ್ವಾಹಕರೊಬ್ಬರು ಇಂದು ಮುಂಜಾನೆ ಘಟಕದ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ದೇವನಹಳ್ಳಿ ಘಟಕ 50ರ ಚಾಲಕ ಕಂ ನಿರ್ವಾಹಕ ಆವತಿ ಮೂಲದ ನಾಗೇಶ್ (45) ಎಂಬುವರೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.
ಕಳೆದ ಕೆಲ ದಿನಗಳಿಂದ ಅಧಿಕಾರಿಗಳು ಕೊಡುತ್ತಿದ್ದ ಕಿರುಕುಳದಿಂದ ಮಾನಸಿಕವಾಗಿ ನೊಂದಿದ್ದ ನಾಗೇಶ್. ಮಧ್ಯರಾತ್ರಿ ಡಿಪೋಗೆ ಬಂದು ಡಿಪೋ ಮ್ಯಾನೇಜರ್ ಕೊಠಡಿ ಎದುರೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ 6 ಗಂಟೆಗೆ ಸಿಬ್ಬಂದಿಗಳು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಘಟಕದಲ್ಲಿ ಡಿಪೋ ಮ್ಯಾನೇಜರ್ ಹಾಗೂ ಅಧಿಕಾರಿಗಳು ತೀವ್ರ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನೌಕರರ ಆತ್ಮಹತ್ಯೆಗೆ ಅಧಿಕಾರಿಗಳ ಕಿರುಕುಳ, ಲಂಚಬಾಕತನವೇ ಕಾರಣ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆತ್ಮಹತ್ಯೆ ಸಂಬಂಧ ದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದರು. ಅದರಂತೆ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿy ಬಿಎಂಟಿಸಿ ಘಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಅಧಿಕಾರಿ ವರ್ಗದವರು ಚಾಲನಾ ಸಿಬ್ಬಂದಿಗೆ ನೀಡುತ್ತಿರುವ ಕಿರುಕುಳ ಎಂಥದ್ದು ಎಂಬುದನ್ನು ತೋರಿಸುವಂತಿದೆ.