ಹಾಸನ : ಅಂಗನವಾಡಿ ಕೇಂದ್ರದ ಆವರಣದಲ್ಲಿ ಹಾವು ಕಚ್ಚಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ಜರುಗಿದೆ.
ದೊಡ್ಡಕಲ್ಲೂರು ಗ್ರಾಮದ ಯಶವಂತ್-ಗೌರಿ ಎಂಬುವವರ ಪುತ್ರ ರೋಷನ್ (4) ಮೃತ ಬಾಲಕ. ಅಂಗನವಾಡಿ ಸಹಾಯಕಿ ಮಕ್ಕಳನ್ನು ಕರೆ ತರಲು ಮನೆಗಳಿಗೆ ಹೋದಾಗ ಈ ಘಟನೆ ನಡೆದಿದೆ.
ರೋಷನ್‍ಗೆ ಹಾವು ಕಚ್ಚಿತ್ತು. ವಿಷಯ ತಿಳಿದ ಕೂಡಲೇ ಬಾಲಕನ ಪಾಲಕರು ರೋಷನ್‍ನನ್ನು ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೈಕ್‍ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿಂದ ಸಕಲೇಶಪುರ ಪಟ್ಟಣ್ಣದ ಆಸ್ಪತ್ರೆಗೆ ತೆರಳುವಂತೆ ತಿಳಿಸಿದ್ದು, ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ.
ಆದರೆ ಹೆತ್ತೂರಿನಿಂದ ಸಕಲೇಶಪುರ ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯಲು ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಬಂದಿರಲಿಲ್ಲ. ಇದರಿಂದಾಗಿ ರೋಷನ್‌ನನ್ನು ಸಕಲೇಶಪುರಕ್ಕೆ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಅರ್ಧಕ್ಕೆ ಆಂಬುಲೆನ್ಸ್ ಬಂದಿದೆ. ಆದರೆ ಅಷ್ಟರಲ್ಲಾಗಲೇ ಬಾಲಕ ಅಸುನೀಗಿದ್ದ.
ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲಿ ಒಂದೇ ಆಂಬುಲೆನ್ಸ್ ಇರುವುದರಿಂದ ಸಮಯಕ್ಕೆ ಸರಿಯಾಗಿ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಲು ಸಾಧ್ಯವಾಗದಿದ್ದರಿಂದ ಬಾಲಕನ ಜೀವ ಹೋಗಿದೆ. ಒಂದುವೇಳೆ ಆ ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಬಂದಿದ್ದರೆ ಬಾಲಕ ಬದುಕುಳಿಯುತ್ತಿದ್ದನೇನೋ.
ಬಾಲಕನ ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಘಟನೆ ಸಂಬಂಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.