ಪಿರಿಯಾಪಟ್ಟಣ: ರೈತರು ದುಡುಕಿನ ನಿರ್ಧಾರದಿಂದ ತಮ್ಮ ಕುಟುಂಬವನ್ನು ಬೀದಿಗೆ ತರಬಾರದು. ಎಲ್ಲ ಸಮಸ್ಯೆಗಳಿಗೂ ಆತ್ಮಹತ್ಯೆಯೇ ಪರಿಹಾರವಲ್ಲ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಸಲಹೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿ ಮಾತನಾಡಿದರು.
ರೈತ ಸಮುದಾಯದ ಸಂಕಷ್ಟವನ್ನು ಮನಗಂಡ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಗೊಳಿಸಿದೆ, ಅದನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಹಣಕಾಸಿನ ತೊಂದರೆ ಎಂದು ಮಾಡಿರುವ ಸಾಲಗಳಿಗೆ ಅಂಜಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳಬಾರದು ಎಂದು ಹೇಳಿದರು.
ರೈತರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಹಾಗಾಗಿ ಯಾವೊಬ್ಬ ರೈತರು ಆತ್ಮಹತ್ಯೆ ಹಾದಿ ತುಳಿಯಬಾರದು. ಏನೇ ಸಮಸ್ಯೆ ಎದುರಾದರೂ ಗಮನಕ್ಕೆ ತನ್ನಿ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದ ಅವರು, ಬ್ಯಾಂಕುಗಳು ಸಾಲ ನೀಡುವುದೇ ಹೆಚ್ಚು ಬಡ್ಡಿ ವಿಧಿಸಲು, ಹಾಗಾಗಿ ಹೆಚ್ಚು ಸಾಲ ಸೌಲಭ್ಯದ ಆಸೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಉದಾಹರಣೆಗಳು ಸಾಕಷ್ಟಿವೆ. ರೈತರ ರಕ್ಷಣೆ ಹಾಗೂ ಸಹಕಾರ ನೀಡುವ ಉದ್ದೇಶದಿಂದ ಸಹಕಾರ ಸಂಘಗಳು ಬಡ್ಡಿ ರಹಿತವಾಗಿ 5 ಲಕ್ಷದ ವರೆಗೂ ಸಾಲ ನೀಡುತ್ತಿವೆ ಇದನ್ನು ಪಡೆದು ಸ್ವಾವಲಂಬನೆ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಹಣವಿದ್ದಾಗ ದುರುಪಯೋಗ ಪಡಿಸಿಕೊಳ್ಳಲು ಹಲವರು ಮುಂದಾಗುತ್ತಾರೆ. ಆದ್ದರಿಂದ ಆತ್ಮಹತ್ಯೆಗೆ ಒಳಗಾದ ರೈತ ಕುಟುಂಬಗಳು ಸರಕಾರ ನೀಡುವ ಹಣದಿಂದ ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬದ ಆರ್ಥಿಕ ಸಬಲತೆಗೆ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಕುಂಞಿ ಅಹಮದ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್ , ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.