ಎಚ್.ಡಿ.ಕೋಟೆ: ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದ 25 ವರ್ಷದ ಮಕ್ನಾ ಗಂಡಾನೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಮೇಟಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಜಿ.ಎಂ.ಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮೇಟಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಜಿ.ಎಂ.ಹಳ್ಳಿ ಗ್ರಾಮದ ರೈತರೊಬ್ಬರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ರಕ್ಷಣೆಗಾಗಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದರು ಎನ್ನಲಾಗಿದೆ. ಈ ವೇಳೆ ಆಹಾರ ಅರಸಿ ಬಂದಿದ್ದ ಮಕ್ನಾ ಆನೆಗೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಮೇಟಿಕುಪ್ಪೆ ವನ್ಯಜೀವಿ ವಲಯದ ಎಸಿಎಫ್ ರಂಗಸ್ವಾಮಿ, ಆರ್‌ಎಫ್‌ಒ ಹರ್ಷಿತ್ ಕುಮಾರ್, ಸಾಮಾಜಿಕ ವಲಯಾರಣ್ಯದ ಆರ್‌ಎಫ್‌ಒ ಪೂಜಾ ಎಲಿಗಾರ್ ಸೇರಿದಂತೆ ಅರಣ್ಯ ಇಲಾಖೆ ಪಶು ವೈದ್ಯ ಮತ್ತು ಸಿಬ್ಬಂದಿ ಆಗಮಿಸಿ ಮಹಜರು ನಡೆಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಕಾಡಂಚಿನ ಗ್ರಾಮದ ರೈತರು ತಮ್ಮ ಜಮೀನುಗಳಲ್ಲಿ ತಾವು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳು ಬಂದು ನಾಶಪಡಿಸದಿರಲಿ ಎಂಬ ಕಾರಣಕ್ಕೆ ಅದರಲ್ಲೂ ಹಂದಿ ಹಾವಳಿ ತಡೆಗೆ ಜಮೀನಿನ ಬೇಲಿಗೆ ಅಕ್ರಮ ವಿದ್ಯುತ್ ಹರಿಸುವುದರಿಂದ ವಿವಿಧ ಪ್ರಭೇದದ ಅನೇಕ ವನ್ಯಜೀವಿಗಳು ಸಾವನ್ನಪ್ಪುತ್ತಿವೆ, ಅದರಲ್ಲೂ ಆನೆಗಳು ಹೆಚ್ಚಾಗಿ ಬಲಿಯಾಗುತ್ತಿವೆ.
ಜಮೀನಿನ ಬೇಲಿಗೆ ಅಕ್ರಮ ವಿದ್ಯುತ್ ಹರಿಸಿ ಮುಗ್ದ ವನ್ಯಜೀವಿಗಳ ಪ್ರಾಣಕ್ಕೆ ಕಂಟಕವಾಗುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸದಿರುವುದು ಇಂತಹ ಪ್ರಕರಣಗಳು ಮತ್ತೇಮತ್ತೆ ಪುನರಾವರ್ತನೆಯಾಗಿ ಪ್ರಾಣಿಗಳು ಬಲಿಯಾಗುತ್ತಿರುವುದು ದುರಂತದ ಸಂಗತಿಯಾಗಿದೆ.
ಕಾಡು ಪ್ರಾಣಿಗಳ ಧಾರುಣ ಸಾವಿಗೆ ಇಲ್ಲಿನ ಅರಣ್ಯಾಧಿಕಾರಿಗಳೇ ಕಾರಣ ಎಂದು ಆರೋಪಿಸಿರುವ ರೈತರು, ಕಾಡು ಪ್ರಾಣಿಗಳು ಕಾಡಿನಿಂದ ಹೊರ ಬಾರದಂತೆ ಮಾಡುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಕಾಡಂಚಿನಲ್ಲಿ ರೈಲ್ವೆ ಕಂಬಿ ಅಳವಡಿಸಿಲ್ಲ, ವೈಜ್ಞಾನಿಕವಾಗಿ ಟ್ರಂಚ್ ನಿರ್ಮಾಣ ಮಾಡಿಲ್ಲ ಎಂದು ದೂರಿದ್ದಾರೆ.
ಇನ್ನು ಇದರ ಮಧ್ಯೆ ಆನೆ ಕಾವಲು ಗಸ್ತನ್ನು ಹೆಚ್ಚಿಸಿಲ್ಲ. ಇದೆಲ್ಲ ಕಾರಣಗಳಿಂದ ಆನೆಗಳು ಜಮೀನಿಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ ಎಂದು ಆರೋಪಿಸಿದ್ದು, ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷವನ್ನು ತಡೆಯಬೇಕೆಂದು ಆಗ್ರಹಿಸಿದ್ದಾರೆ.