ಬೆಂಗಳೂರು: ಸಾರ್ವಜನಿಕರು ಹೃದಯಾಘಾತಕ್ಕೀಡಾಗಿ ಮೃತಪಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಸೋಮವಾರ ರಾತ್ರಿ ಕೆಕೆಆರ್‌ಟಿಸಿ ಬಸ್ ಚಾಲಕ ಬಸ್ ಚಲಾಯಿಸುತ್ತಿದ್ದಾಗಲೇ ಮೃತಪಟ್ಟಿರುವುದು ಸೇರಿದಂತೆ ನಿನ್ನೆ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಅದರ ಜತೆಗೆ ಇಂದು ಬೆಳ್ಳಂಬೆಳಗ್ಗೆ ಇನ್ನೊಬ್ಬರು ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಇಎಲ್ ಕ್ರೀಡಾ ಮೈದಾನದಲ್ಲಿ ಜಾಗಿಂಗ್ ಮಾಡುತ್ತಿದ್ದ ಏರ್‌ಫೋರ್ಸ್ ಅಧಿಕಾರಿ ಗೋಪಾಲ್ ಸಿಂಗ್ ರಾವತ್ (35) ಎಂಬುವರು ಕುಸಿದು ಬಿದ್ದು ಅಸುನೀಗಿದ್ದಾರೆ.
ಹೃದಯಾಘಾತದಿಂದ ಈ ಘಟನೆ ನಡೆದಿದೆ. ಜಾಗಿಂಗ್‌ಗೆ ಎಂದು ಬಂದಿದ್ದ ಸಂದರ್ಭದಲ್ಲೇ ಕುಸಿದು ಬಿದ್ದಿದ್ದು, ಸ್ಥಳೀಯರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳುಹಿಸಿಕೊಡಲಾಗಿದೆ.
ನಿನ್ನೆ ರಾಜಹಂಸ ಬಸ್ ಚಲಾಯಿಸುತ್ತಿದ್ದ ಚಾಲಕ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದು, ಈ ಸಂದರ್ಭ ಬಸ್ ಆಯತಪ್ಪಿ ಪಲ್ಟಿಯಾಗಿತ್ತು. ಹಾಗೆಯೇ ಕಾಂತಾರ ಸಿನಿಮಾ ನೋಡಲು ಹೋಗಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೀಡಾಗಿ ಚಿತ್ರಮಂದಿರದಲ್ಲೇ ಮೃತಪಟ್ಟಿದ್ದರು.