ಕೆ.ಆರ್.ಪೇಟೆ: ಪಟ್ಟಣದ ಹೇಮಾವತಿ ಜಲಾಶಯ ಯೋಜನೆಯ 3ನೇ ವಿಭಾಗ ಕಚೇರಿಯ ಕಾರ್ಯಪಾಲಕ ಇಂಜಿನಿಯರ್ ಕಿಜಾರ್ ಅಹಮದ್ ನಿವೃತ್ತರಾದ ಹಿನ್ನೆಲೆಯಲ್ಲಿ ಹೃದಯ ಸ್ಪರ್ಶಿ ಸನ್ಮಾನ ಮಾಡುವ ಮೂಲಕ ಗೌರವಿಸಿ ಬೀಳ್ಕೊಡಲಾಯಿತು.
ಪ್ರಭಾರ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಆನಂದ್ ಅಧಿಕಾರ ಸ್ವೀಕರಿಸಿದರು. ಕಳೆದ ಎರಡು ವರ್ಷಗಳಿಂದ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಜಲಾಶಯ ಯೋಜನೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ದಕ್ಷತೆಯಿಂದ ಪ್ರಾಮಾಣಿಕ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದ ಕಿಜಾರ್ ಅಹಮದ್ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಸರ್ಕಾರಿ ಕೆಲಸದಲ್ಲಿ ವರ್ಗಾವಣೆ ಹಾಗೂ ಸೇವಾ ನಿವೃತ್ತಿ ಎನ್ನುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ನಾವು ನಮ್ಮ ಸೇವಾ ಅವಧಿಯಲ್ಲಿ ಕೈಗೊಂಡ ಗುಣ ಮಟ್ಟದ ಅಭಿವೃದ್ಧಿ ಕೆಲಸ ಕಾರ್ಯಗಳು ನಮ್ಮ ಕಾರ್ಯದಕ್ಷತೆಯ ಬಗ್ಗೆ ಸಾರಿ ಹೇಳುತ್ತವೆ. ನನ್ನ 35 ವರ್ಷದ ಅಧಿಕಾರದ ಅವಧಿಯಲ್ಲಿ ಗುತ್ತಿಗೆದಾರರು ಹಾಗೂ ಇಲಾಖೆಯ ಇಂಜಿನಿಯರುಗಳು, ಸಿಬ್ಬಂದಿಗಳು ನೀಡಿದ ಸಹಕಾರದಿಂದ ನಾನು ಹೆಚ್ಚಿನ ಸಾಧನೆ ಮಾಡಿ ಜನ ಸಾಮಾನ್ಯರ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯವಾಯಿತು ಎಂದರು.
ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಸೇವೆಗೆ ಸೇರಿದ ನಾನು ಸಹಾಯಕ ಇಂಜಿನಿಯರ್ ಆಗಿ, ಎಇಇ ಆಗಿ ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ಇಲಾಖೆಯಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕೆಲಸ ಮಾಡಲು ಸಹಕಾರ ನೀಡಿದ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಾಜಿ ಸಚಿವರಾದ ನಾರಾಯಣ ಗೌಡ ಅವರ ಸಹಕಾರವನ್ನು ಸದಾ ಸ್ಮರಿಸುವುದಾಗಿ ಕಿಜಾರ್ ತಿಳಿಸಿದರು.
ನಾನು ಇಂಜಿನಿಯರಿಂಗ್ ಪದವಿ ಪಡೆದು ಇಂದು ದೊಡ್ಡ ಹುದ್ದೆ ಅಲಂಕರಿಸಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಲು ನನ್ನ ತಂದೆ ತಾಯಿಗಳ ಆಶೀರ್ವಾದವೇ ಮುಖ್ಯ ಕಾರಣವಾಗಿದೆ. ನಾನು ನನ್ನ ಸಿಬ್ಬಂದಿಗಳು ಹಾಗೂ ಸಹೋದ್ಯೋಗಿಗಳನ್ನು ನನ್ನ ಸ್ನೇಹಿತರು ಹಾಗೂ ಬಂಧುಗಳಂತೆ ಕಂಡಿದ್ದೆ ನನ್ನ ಯಶಸ್ಸಿಗೆ ಕಾರಣವಾಗಿದೆ ಎಂದು ದೈವಾಧೀನರಾಗಿರುವ ತಮ್ಮ ತಂದೆ ಯವರನ್ನು ನೆನೆದು ಕಿಜಾರ್ ಭಾವುಕರಾದರು.
ಪ್ರಭಾರ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಅಧಿಕಾರ ಸ್ವೀಕರಿಸಿದ ಆನಂದ್ ಮಾತನಾಡಿ, ಕಿಜಾರ್ ಅಹಮದ್ ಅವರ ಸರಳತೆ ಹಾಗೂ ಕಾರ್ಯದಕ್ಷತೆಯನ್ನು ಶ್ಲಾಘಿಸಿದರು.
ಕಿಜಾರ್ ಅಹಮದ್ ಅವರ ಧರ್ಮ ಪತ್ನಿ ಹಾಗೂ ಮಾತೃಶ್ರೀ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಸೇವಾ ನಿವೃತ್ತರಾದ ಡಿ ಗ್ರೂಪ್ ನೌಕರರಾದ ರುದ್ರಣ್ಣ ಅವರಿಗೂ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ಎಇಇ ಗಳಾದ ವಿಶ್ವನಾಥ್, ಪುಟ್ಟನರಸಪ್ಪ, ಚಂದ್ರೆಗೌಡ, ಗುರುಪ್ರಸಾದ್, ಬಸವೇಗೌಡ, ಕುಮಾರ, ರವಿಕುಮಾರ್, ನಾಗರಾಜು, ರಾಘವೇಂದ್ರ, ಮೋಹನ್, ನಾಯಕ್, ನಂಜೇಗೌಡ, ಮನ್ಸೋರ್ ಖಾನ್, ರಶ್ಮಿ, ಪ್ರೇಮಲತಾ ಗುತ್ತಿಗೆಧಾರರಾದ ಪ್ರವೀಣ್, ರವಿ, ಮಂಜುನಾಥ್, ಕೇಶವ, ಶಿವರಾಮೇಗೌಡ, ಬಂಡಿಹೊಳೆ ಜಯರಾಮು ಸೇರಿದಂತೆ ನೂರಾರು ಜನರು ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.
l ವರದಿ ಡಾ.ಕೆ.ಆರ್.ನೀಲಕಂಠ ಕೃಷ್ಣರಾಜಪೇಟೆ