ಬೆಂಗಳೂರು: ಸರ್ಕಾರಿ ಅಸ್ಪತ್ರೆಗಳು ಸರಿಯಾದ ಚಿಕಿತ್ಸೆ ಮತ್ತು ಸ್ವಚ್ಛತೆಯಿಂದ ಕೂಡಿದರೆ ಜನರೇಕೆ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ ಎಂದು ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಬೌರಿಂಗ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗರಂ ಆಗಿದ್ದರು.
ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಳಪೆ ಸೇವೆ ಕುರಿತಂತೆ ಸಾರ್ವಜನಿಕರಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಶನಿವಾರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅವರು, ಆಸ್ಪತ್ರೆಯ ಸೌಕರ್ಯ ಪರಿಶೀಲಿಸಿ ಸ್ವಚ್ಛತೆ ಮತ್ತು ಅಗತ್ಯ ವೈದ್ಯರು ಇಲ್ಲದನ್ನು ಕಂಡು ಸಿಟ್ಟಾದರು.
ಆಸ್ಪತ್ರೆಯ ಆಪರೇಷನ್ ಥಿಯೇಟರ್, ಮೆಡಿಕಲ್ ಸ್ಟೋರ್ ಮತ್ತಿತೆರೆಡೆ ಪರಿಶೀಲನೆ ನಡೆಸಿದ ನ್ಯಾಯಮೂರ್ತಿಗಳು ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಆಸ್ಪತ್ರೆ ಸಿಬ್ಬಂದಿ ವಿಫಲವಾಗಿರುವುದನ್ನು ಕಂಡು ಅವರನ್ನು ತರಾಟೆಗೆ ತೆಗೆದಕೊಂಡರು.
ಬಳಿಕ ರೋಗಿಗಳಿಂದಲೂ ಆಸ್ಪತ್ರೆಯ ಸೇವೆ, ಗುಣಮಟ್ಟ ಕುರಿತು ಮಾಹಿತಿ ಪಡೆದುಕೊಂಡರು. ಹಲವು ವೈದ್ಯರು ರಜೆಯಲ್ಲಿದ್ದುದನ್ನು ತಿಳಿದು ಗರಂ ಆದ ನ್ಯಾಯಮೂರ್ತಿಗಳು ಮೇಜರ್ ಕೇಸ್‌ಗಳು ಬಂದರೆ ಏನು ಮಾಡುತ್ತೀರಿ? ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟ ಕಾಪಾಡಿಕೊಂಡರೆ ಜನರೇಕೆ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆಂದು ವೈದ್ಯರನ್ನು ಪ್ರಶ್ನಿಸಿದರು.
ನ್ಯಾಯಮೂರ್ತಿಗಳ ದಿಢೀರ್ ಭೇಟಿಯಿಂದ ಕಂಗಾಲಾಗಿದ್ದ ಆಸ್ಪತ್ರೆ ಸಿಬ್ಬಂದಿ ಸಮಜಾಯಿಷಿ ನೀಡಲು ಹೆಣಗಾಡಿದರು. ಅದನ್ನು ಕಂಡ ನ್ಯಾಯಮೂರ್ತಿಗಳ ಇನ್ನು ಮುಂದೆ ಹೀಗಾಗಂತೆ ನೋಡಿಕೊಳ್ಳಬೇಕು ಎಂಬ ಎಚ್ಚರಿಕೆ ನೀಡಿದರು.