ಬೆಂಗಳೂರು: ಮೊನ್ನೆ ಅಪಹರಣಕ್ಕೊಳಗಾಗಿ ಮುನಿಗಳು ಹತ್ಯೆ ಆಗಿರುವುದರ ಹಿಂದಿನ ಮಾಹಿತಿಯೆಲ್ಲ ರೆಡಿ ಇದೆ. ಆದರೆ ಸರ್ಕಾರ ಉತ್ತರ ಕೊಡಲು ಆಗುವುದಿಲ್ಲ. ಗೃಹ ಸಚಿವರು ಹುಬ್ಬಳ್ಳಿಯಲ್ಲಿದ್ದು ಅವರು ಬಂದ ಮೇಲೆ ಉತ್ತರ ಕೊಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಪರಿಷತ್ನಲ್ಲಿ ಇಂದು ಒಂದು ಗಂಟೆಗಳ ಕಾಲ ಮುನಿಗಳ ಬರ್ಬರ ಹತ್ಯೆ ಬಗ್ಗೆ ಚರ್ಚೆಯಾಯಿತು. ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿಗಳು ಜೈನ ಮುನಿಗಳು ಉಪವಾಸ ಕೂರದಂತೆ ಮನವಿ ಮಾಡಿರುವುದರಿಂದ ಉಪವಾಸ ಕೈಬಿಟ್ಟಿದ್ದಾರೆ. ಗೃಹ ಸಚಿವರು ಚಿಕ್ಕೋಡಿಗೆ ಹೋಗುತ್ತಿದ್ದಾರೆ ಅವರು ನಾಳೆ ಬಂದು ಈ ಹತ್ಯೆ ಸಂಬಂಧ ಉತ್ತರ ಕೊಡಲಿದ್ದಾರೆ ಎಂದರು.
ಯತ್ನಾಳ್ಗೆ ಪಾಪ ರಾಜಕೀಯ ಬಿಟ್ಟು ಮಾತನಾಡಲು ಬರುವುದಿಲ್ಲ ಎಂದು ಹೇಳಿದ ಸಿಎಂ, ಕೆಲ ಸದಸ್ಯರು ರಾಜಕೀಯ ಸೇರಿಸಿ ಮಾತನಾಡಿದ್ದಾರೆ. ಆದರೆ ನಾನು ಕೂಡ ರಾಜಕೀಯ ಬೆರೆಸದೆ ಈ ಘಟನೆ ಖಂಡಿಸುತ್ತೇನೆ. ಅಲ್ಲದೆ ಅಗತ್ಯ ಬಿದ್ದರೆ ನಾನು ಕೂಡ ಮುನಿಗಳ ಹತ್ಯೆ ಬಗ್ಗೆ ಉತ್ತರ ನೀಡುತ್ತೇನೆ ಎಂದು ಹೇಳಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಒಂದು ಗಂಟೆಗಳ ಕಾಲ ಮುನಿಗಳ ಬರ್ಬರ ಹತ್ಯೆ ಬಗ್ಗೆ ಚರ್ಚೆಯಾಗಿದೆ. ಪ್ರಕರಣವನ್ನು ರಾಜಕೀಯಕ್ಕೆ ಬೆರೆಸುವುದನ್ನು ಬಿಟ್ಟು, ನಮ್ಮ ಜವಾಬ್ದಾರಿ ಹಾಗೂ ಏನಾಗಿದೆ ಎಂದು ಅರ್ಥೈಸಿಕೊಂಡು ಹೆಜ್ಜೆಯಿಡುವ ಸಂದರ್ಭವಿದೆ. ಭಾವೋದ್ವೇಗಕ್ಕೆ ಒಳಗಾಗಿ ಅಥವಾ ತಪ್ಪುಮಾಹಿತಿಯಿಂದ ಮಾತನಾಡೋದು ಬೇಡ. ಬಂಧಿತ ಆರೋಪಿ ಹೇಳಿರುವ ಹೇಳಿಕೆಯನ್ನು ಪೊಲೀಸರು ಹೇಳಿದ್ದಾರೆ ಎಂದರು.
6 ಲಕ್ಷ ರೂಪಾಯಿಗೆ ಕೊಲೆ ಮಾಡಿದ್ದೇನೆ ಎಂದು ಆರೋಪಿ ಹೇಳಿದ್ದಾನೆ. ಅದನ್ನೇ ಪೊಲೀಸರು, ಗೃಹ ಸಚಿವರು ಹೇಳಿದ್ದಾರೆ. ಇದು ಕ್ರೋಧದ ವಿಚಾರ ಅಲ್ಲ. ಕೊಲೆ ಮಾಡಿದ ವ್ಯಕ್ತಿ ಮಾನಸಿಕ ಸ್ಥಿತಿ ಗೌರವಿಸಬೇಕಿಲ್ಲ. ಸಿಬಿಐಗೆ ಯಾವ ಕಾರಣಕ್ಕೆ ಕೊಡಬೇಕು..? ನಮಗೆ ಏನಾದರೂ ರಾಜಕೀಯ ಇಚ್ಛಾಶಕ್ತಿ ಇದೆಯಾ ಅಥವಾ ಪ್ರಕರಣದಲ್ಲಿ ನಮ್ಮ-ನಿಮ್ಮ ಕಡೆಯ ರಾಜಕೀಯ ವ್ಯಕ್ತಿಗಳು ಇದ್ದಾರಾ..? ಯಾಕೆ ಈ ಪ್ರಕರಣ ಸಿಬಿಐಗೆ ಕೊಡಬೇಕು ಎಂದು ಪ್ರಶ್ನಿಸಿದರು.
ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಆರೋಪಿಗಳಿಗೆ ಭಯ ಬರುವಂತೆ ನಿರ್ಣಯ ಮಾಡಬೇಕು. ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಯಾರೂ ಸಹ ರಕ್ಷಣೆ ಪಡೆಯಲು ಸಾಧ್ಯವಿಲ್ಲ. ಯಾರೆ ಇದ್ದರೂ, ಯಾರದ್ದೆ ಕೈವಾಡ ಇದ್ದರೂ ಪ್ರಾಮಾಣಿಕವಾಗಿ, ದಿಟ್ಟತನವಾಗಿ ಬಯಲಿಗೆ ಎಳೆಯುತ್ತೇವೆ.
ನಿಮ್ಮ ಸಹಕಾರ ಸಹ ಬೇಕು, ಇದರಲ್ಲಿ ಯಾವುದೇ ರಾಜಕೀಯ ಬೇಡ. ಗೃಹ ಸಚಿವರು ಭೇಟಿ ಕೊಟ್ಟಿದ್ದು, ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ನಾಳೆ ಗೃಹ ಮಂತ್ರಿಗಳು ಉತ್ತರ ಕೊಡುತ್ತಾರೆ. ಆದ್ದರಿಂದ ಯಾರೂ ಸಹ ಆತಂಕಕ್ಕೆ ಒಳಗಾಗಬೇಡಿ ಎಂದು ಎಚ್.ಕೆ ಪಾಟೀಲ್ ಸ್ಪಷ್ಟಪಡಿಸಿದರು.