NEWSನಮ್ಮರಾಜ್ಯರಾಜಕೀಯ

ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ರಚನೆಗೆ ಸದನ ಅಸ್ತು

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ರಾಜ್ಯ ರಾಜಧಾನಿಯಲ್ಲಿ ಸಂಚಾರದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ಸಲುವಾಗಿ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ರಚನೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕವನ್ನು ಸದನ ಅಂಗೀಕರಿಸಿತು. ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಭಾಗವಹಿಸಿ ವಿಧೇಯಕದ ಬಗ್ಗೆ ಮಾತನಾಡಿದ ಸಿಎಂ, ನಗರ ಸಂಚಾರ ಸಮಸ್ಯೆ ಪರಿಹಾರಕ್ಕೆ ಹಲವು ಮಾದರಿಗಳ ಪ್ರಾಧಿಕಾರ, ಇಲಾಖೆಗಳ ಬದಲಾಗಿ ಉನ್ನತಾಧಿಕಾರದ ಒಂದೇ ಸಂಸ್ಥೆ ಸ್ಥಾಪಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ವಿವರಿಸಿದರು.

ಬೆಂಗಳೂರು ಮಹಾನಗರಕ್ಕೆ ಸುತ್ತಮುತ್ತಲಿನ ಪುರಸಭೆ, ನಗರಸಭೆಗಳು ಸೇರಿದಂತೆ ಸುಮಾರು 110 ಹಳ್ಳಿಗಳು ಸೇರ್ಪಡೆಯಾಗಿವೆ. ಮಹಾನಗರದ ಮೂಲಸೌಕರ್ಯಗಳಿಗೂ ಗ್ರಾಮೀಣ ಮೂಲಸೌಕರ್ಯಗಳಿಗೂ ವ್ಯತ್ಯಾಸ ಇರುತ್ತದೆ. ಕಳೆದ ಸುಮಾರು 25 ವರ್ಷಗಳಿಂದ ಬೆಂಗಳೂರಿನ ರಸ್ತೆಗಳ ವಿಸ್ತರಣೆಯಾಗಿಲ್ಲ. ಪ್ರತಿನಿತ್ಯ ಸುಮಾರು 5 ಸಾವಿರಕ್ಕೂ ಹೆಚ್ಚು ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ.

ಮಹಾನಗರದಲ್ಲಿ ಸುಮಾರು 1.25 ಕೋಟಿ ಜನಸಂಖ್ಯೆ ಇದೆ. ಸುಮಾರು 1.03 ಕೋಟಿ ವಾಹನಗಳಿವೆ. ಬರುವ ದಿನಗಳಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಅಧಿಕವಾಗಲಿದೆ. ಇವುಗಳ ನಿರ್ವಹಣೆಯನ್ನು ಬಹು ವಿಧದ ಸಂಸ್ಥೆಗಳು ನೋಡಿಕೊಳ್ಳುತ್ತಿವೆ. ಹೊಸ ರಸ್ತೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಕಾರ್ಯದ ಜವಾಬ್ದಾರಿ ಹಾಗೂ ಸಮಗ್ರ ಪರಿಹಾರ ಕಂಡುಕೊಳ್ಳಲು ಈ ವಿಧೇಯಕ ತರಲಾಗುತ್ತಿದೆ ಎಂದು ಹೇಳಿದರು.

ಗೊರಗುಂಟೆಪಾಳ್ಯದ ಬಳಿ ಬಹುಹಂತದ ಪಥ, ಹೆಬ್ಬಾಳ ಮೇಲ್ಸೇತುವೆ ಅಗಲೀಕರಣ ಸೇರಿದಂತೆ ಬೇರೆ ಊರುಗಳಿಂದ ಪ್ರವೇಶಿಸುವ ಮಾರ್ಗಗಳ ವಿಸ್ತಾರಕ್ಕೆ ಕ್ರಮವಹಿಸಲಾಗಿದೆ. ಬೆಂಗಳೂರಿನ ಸಂಚಾರ ವೈಜ್ಞಾನಿಕ ನಿರ್ವಹಣೆಗಾಗಿ ಅಧ್ಯಯನ ನಡೆಸಲು ಐಐಎಸ್ಸಿಗೆ ಕೋರಲಾಗಿದೆ. ಇದರ ಜೊತೆಗೆ ಈ ಹಿಂದಿನ ವರದಿಗಳನ್ನು ಪುನರ್ ಪರಿಶೀಲನೆ ಮಾಡಲಾಗುವುದು ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂಘೈ, ಲಂಡನ್, ನ್ಯೂಯಾರ್ಕ್ ಮತ್ತಿತರ ನಗರಗಳ ಸಂಚಾರ ನಿರ್ವಹಣೆಯನ್ನೂ ಕೂಡ ಅಧ್ಯಯನ ಮಾಡಲಾಗುವುದು ಎಂದು ತಿಳಿಸಿದರು.

ಸಂಚಾರ ನಿರ್ವಹಣೆಗೆ ಎಡಿಜಿಪಿ ಹಂತದ ಅಧಿಕಾರಿ ನೇಮಿಸಿ ಇಲಾಖೆಯ ಸಾಮರ್ಥ್ಯ ಹೆಚ್ಚಿಸಲಾಗಿದೆ. ಐದು ಕಡೆ ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಈಗ ಸಾಕಷ್ಟು ಸುಧಾರಣೆಗಳು ಕಂಡು ಬಂದಿವೆ. ಸಂಚಾರ್ ಕಮಾಂಡ್ ಕೇಂದ್ರ ಹಾಗೂ 7 ಸಾವಿರ ನಿರ್ಭಯ ಕ್ಯಾಮೆರಾಗಳನ್ನು ಕೂಡ ಸಂಚಾರ ನಿಗಾ ಉದ್ದೇಶಕ್ಕೂ ಬಳಕೆ ಮಾಡಲಾಗುತ್ತಿದೆ. ರಸ್ತೆ ನಿರ್ಮಾಣ, ಸಂಚಾರ ನಿರ್ವಹಣೆ ಸುಧಾರಣೆಗೆ ನಾಗರಿಕರ ಸಹಕಾರ ಅಗತ್ಯ ಎಂದು ಸಿಎಂ ಹೇಳಿದರು.

ಬೆಂಗಳೂರು ಮಹಾನಗರಕ್ಕೆ ರಿಂಗ್ ರಸ್ತೆ, ಪೆರಿಫೆರಲ್ ರಿಂಗ್ ರಸ್ತೆ ಮತ್ತಿತರ ಕಾಮಗಾರಿಗಳ ಭೂಸ್ವಾಧೀನ ಕಾರ್ಯ, ಮೆಟ್ರೋ ಮಾರ್ಗದ ವಿಸ್ತರಣೆ ಮೊದಲಾದ ಕಾರ್ಯಗಳನ್ನು ಕೈಗೊಳ್ಳಲಾಗುವುದು. ವಿಧೇಯಕ ಕುರಿತು ಸಲಹೆಗಳನ್ನು ಸ್ವಾಗತಿಸಲಾಗುವುದು ಎಂದು ತಿಳಿಸಿದರು.

Leave a Reply

error: Content is protected !!
LATEST
ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಕೊಟ್ಟು ಹಣ ಉಳಿಯುತ್ತದೆ : ಎಎಪಿ ಜೂ.24ರಂದು ಶಿವಮೊಗ್ಗದಲ್ಲಿ ರಾಷ್ಟ್ರ, ರಾಜ್ಯ ರೈತ ಮುಖಂಡರ ಸಮಾವೇಶ: ಕುರುಬೂರ್ ಶಾಂತಕುಮಾರ್ ಸಂತ್ರಸ್ತೆ ಅಪರಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು KSRTCಯಿಂದ 300ಕ್ಕೂ ಹೆಚ್ಚು ಹೊಸ ಮಾರ್ಗಗಳಲ್ಲಿ ಬಸ್‌ ಓಡಾಟ: ಸಚಿವ ರಾಮಲಿಂಗಾರೆಡ್ಡಿ BMTC: 50ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್​​ಗಳ ಚಾಲಕರಿಗೆ ಗೇಟ್‌ಪಾಸ್‌ ಅತ್ಯಾಚಾರ ಆರೋಪಿ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ಎಸ್‌ಐಟಿ ಕಸ್ಟಡಿ ಅಂತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು