ಮಂಡ್ಯ: ಆಸ್ತಿಯನ್ನು ಕೆಲವು ಕಾರಣದಿಂದ ನಮ್ಮ ಕುಟುಂಬದ ಸದಸ್ಯರಿಗೆ ವರ್ಗಾವಣೆ ಮಾಡಬೇಕಾಗಿರುತ್ತದೆ ಅಥವಾ ಆಸ್ತಿಯನ್ನು ನಮ್ಮವರಿಗೆ ಉಡುಗೊರೆಯಾಗಿ ಕೊಡಬೇಕಾಗುತ್ತದೆ. ಇಂತಹ ಉದ್ದೇಶಗಳಿಗೆ ಗಿಫ್ಟ್ ಡೀಡ್, ಉಡುಗೊರೆ ಪತ್ರ ಮಾಡಬೇಕಾಗುವುದು ಅವಶ್ಯಕ. ಹಾಗಾದರೆ ಉಡುಗೊರೆ ಪತ್ರ ಎಂದರೇನು? ಅದರಲ್ಲಿ ಯಾವೆಲ್ಲಾ ಅಂಶಗಳು ಇರಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿ ನಿಮಗಾಗಿ ಕೊಡುತ್ತಿದ್ದೇವೆ. ಇದು ಕಾನೂನಿನ ಅರಿವು ಕೂಡ ಆಗಿದೆ.
ಆಸ್ತಿಯನ್ನು ವರ್ಗಾವಣೆ ಮಾಡಬೇಕಾದರೆ ಗಿಫ್ಟ್ ಡೀಡ್ ಬಳಸಿ ಆಸ್ತಿಯನ್ನು ವರ್ಗಾವಣೆ ಮಾಡಬಹುದು. ಒಬ್ಬರ ಆಸ್ತಿಯ ಮಾಲೀಕತ್ವವನ್ನು ಇನ್ನೊಬ್ಬ ವ್ಯಕ್ತಿಗೆ ಗಿಫ್ಟ್ ಡೀಡ್ ಅಥವಾ ಉಡುಗೊರೆ ಪತ್ರದ ಮೂಲಕ ವರ್ಗಾಯಿಸಬಹುದು. ಕಾನೂನಿನ ಮೂಲಕ ಆಸ್ತಿಗೆ ಮಾಲೀಕತ್ವವನ್ನು ಹೊಂದಿದ್ದರೆ ಅಂತವರು ಮಾತ್ರ ಗಿಫ್ಟ್ ಡೀಡ್ ಬಳಸಬಹುದು. ಚರಾಸ್ತಿ ಅಥವಾ ಸ್ಥಿರಾಸ್ತಿಯನ್ನು ಇನ್ನೊಬ್ಬರ ಹೆಸರಿಗೆ ವರ್ಗಾವಣೆ ಮಾಡುವಾಗ ಗಿಫ್ಟ್ ಡೀಡ್ ಬಳಸಬಹುದು.
ಗಿಫ್ಟ್ ಡೀಡ್ ಬಳಸಿಕೊಂಡು ಆಸ್ತಿಯನ್ನು ವರ್ಗಾವಣೆ ಮಾಡುವಾಗ ಸ್ಟಾಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಷನ್ ಫೀಸ್ ತುಂಬಬೇಕಾಗುತ್ತದೆ. ಕುಟುಂಬದ ಸದಸ್ಯರಿಗೆ ಆಸ್ತಿಯನ್ನು ವರ್ಗಾವಣೆ ಮಾಡುವುದಾದರೆ ಗಿಫ್ಟ್ ಡೀಡ್ ಬಳಸಿಕೊಳ್ಳಬಹುದು. ಇದಕ್ಕೆ ಸರ್ಕಾರ ಸ್ಟಾಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಷನ್ ಫೀಸ್ ನಲ್ಲಿ ರಿಯಾಯಿತಿ ಕೊಡುತ್ತದೆ.
ಆಸ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದ್ದಾಗ ಸರ್ಕಾರಕ್ಕೆ 1,130 ರೂಪಾಯಿ ಸ್ಟಾಂಪ್ ಡ್ಯೂಟಿ ಕಟ್ಟಬೇಕು. ಪ್ರಾಪರ್ಟಿ ಬೆಂಗಳೂರಿನಲ್ಲಿದ್ದರೆ ಅದನ್ನು ವರ್ಗಾವಣೆ ಮಾಡಬೇಕಾದರೆ ಸ್ಟಾಂಪ್ ಡ್ಯೂಟಿ 5,000 ರೂಪಾಯಿ ಕಟ್ಟಬೇಕು ಇತರೆ ಚಾರ್ಜಸ್ ಸೇರಿ 5,600 ರೂಪಾಯಿ ಸ್ಟಾಂಪ್ ಡ್ಯೂಟಿ ಕಟ್ಟಬೇಕು, ಒಂದು ಸಾವಿರ ರೂಪಾಯಿ ರಿಜಿಸ್ಟ್ರೇಷನ್ ಫೀಸ್ ಕಟ್ಟಬೇಕು.
ಪ್ರಾಪರ್ಟಿ ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಇದ್ದರೆ 3,000 ರೂಪಾಯಿ ಸ್ಟಾಂಪ್ ಡ್ಯೂಟಿ ಕಟ್ಟಬೇಕು, ಒಟ್ಟು 3,360 ರೂಪಾಯಿ ಸ್ಟಾಂಪ್ ಡ್ಯೂಟಿ, 1,000 ರೂಪಾಯಿ ರಿಜಿಸ್ಟ್ರೇಷನ್ ಫೀಸ್ ಕಟ್ಟಬೇಕಾಗುತ್ತದೆ. ಗಿಫ್ಟ್ ಡೀಡ್ ನಲ್ಲಿ ದಾನ ಕೊಡುವವರು ಮತ್ತು ದಾನ ಪಡೆಯುವವರ ಸಂಪೂರ್ಣ ವಿವರ ಇರಬೇಕು. ದಾನ ಕೊಡುವವರು ಮತ್ತು ಪಡೆಯುವವರ ನಡುವೆ ಯಾವ ಸಂಬಂಧವಿದೆ ಎಂಬುದನ್ನು ಗಿಫ್ಟ್ ಡೀಡ್ ನಲ್ಲಿ ಉಲ್ಲೇಖಿಸಬೇಕು.
ಇದರಲ್ಲಿ ಹಣದ ವ್ಯವಹಾರ ಇರುವುದಿಲ್ಲ, ಪ್ರೀತಿ-ವಿಶ್ವಾಸದಿಂದ ಪ್ರಾಪರ್ಟಿಯನ್ನು ದಾನ ಕೊಡುವುದಾಗಿದೆ ಮತ್ತು ಸ್ವಯಂ ಪ್ರೇರಿತದಿಂದ ದಾನ ಕೊಡುವುದಾಗಿದೆ, ಇದರಲ್ಲಿ ಬೇರೆಯವರ ಬಲವಂತ ಇರಬಾರದು. ಗಿಫ್ಟ್ ಡೀಡ್ ನಲ್ಲಿ ಆಸ್ತಿಯ ಮಾಲೀಕತ್ವದ ಬಗ್ಗೆ ಸಂಪೂರ್ಣವಾಗಿ ವಿವರ ನೀಡಿರಬೇಕು ಅಲ್ಲದೆ ಆಸ್ತಿಯ ಸಂಪೂರ್ಣವಾದ ವಿವರವನ್ನು ನೀಡಿರಬೇಕು.
ದಾನ ಪಡೆದಿರುವವರು ಆಸ್ತಿಯ ಮೇಲೆ ಸಂಪೂರ್ಣವಾದ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾರೆ. ದಾನ ಪಡೆಯುತ್ತಿರುವವರು ತಾವು ಸಂತೋಷದಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ ಎಂಬುದನ್ನು ಕಾನೂನಾತ್ಮಕವಾಗಿ ಹೇಳಿಕೆ ನೀಡಬೇಕು. ಗಿಫ್ಟ್ ಡೀಡ್ ಕೊಡುವಾಗ ಇಬ್ಬರು ಸಾಕ್ಷಿ ಇರಬೇಕು. ಅವರ ಹೆಸರು, ವಿಳಾಸ ಅವರ ಸಿಗ್ನೇಚರ್ ಕಡ್ಡಾಯವಾಗಿ ಇರಬೇಕು.
ಆಸ್ತಿಯನ್ನು ವರ್ಗಾವಣೆ ಮಾಡುವಾಗ ಗಿಫ್ಟ್ ಡೀಡ್ ನಲ್ಲಿ ಆಸ್ತಿಯನ್ನು ಯಾವಾಗ ಹಿಂತೆಗೆದುಕೊಳ್ಳಬಹುದು ಎಂಬುದನ್ನು ಉಲ್ಲೇಖಿಸಿದರೆ ಒಳ್ಳೆಯದು. ದಾನ ಪಡೆದಿರುವವರು ಆಸ್ತಿಗೆ ಯಾವುದೆ ರೀತಿಯ ತೆರಿಗೆ ಕಟ್ಟಬೇಕಾಗಿಲ್ಲ. ಗಿಫ್ಟ್ ಡೀಡ್ ಮೂಲಕ ಆಸ್ತಿಯನ್ನು ಕಡಿಮೆ ಖರ್ಚಿನಲ್ಲಿ ಒಬ್ಬರಿಂದ ಒಬ್ಬರಿಗೆ ವರ್ಗಾವಣೆ ಮಾಡಬಹುದು. ಕುಟುಂಬದ ಸದಸ್ಯರಿಗೆ ಆಸ್ತಿಯ ವರ್ಗಾವಣೆಯನ್ನು ಗಿಫ್ಟ್ ಡೀಡ್ ಮೂಲಕ ಮಾಡುವುದರಿಂದ ಅನುಕೂಲ ಆಗುತ್ತದೆ.
ಗಿಫ್ಟ್ ಕೊಟ್ಟ ಆಸ್ತಿ ವಾಪಸ್ ಪಡೆಯಬಹುದೇ?: ಗಿಫ್ಟ್ ಡೀಡ್ ಮೂಲಕ ಆಸ್ತಿಯನ್ನು ವರ್ಗಾವಣೆ ಮಾಡಿದ ನಂತರ ಗಿಫ್ಟ್ ಕೊಟ್ಟ ಆಸ್ತಿಯನ್ನು ವಾಪಸ್ ಪಡೆಯಬಹುದೇ? ಒಬ್ಬ ತಾಯಿ ಅಥವಾ ತಂದೆ ತನ್ನ ಮಗನಿಗೆ ಅಥವಾ ಮಗಳಿಗೆ ಗಿಫ್ಟ್ ಡಿಡ್ ಮೂಲಕ ಸ್ವತ್ತನ್ನು ವರ್ಗಾವಣೆ ಮಾಡಿದರೆ ಅದನ್ನು ಹಿಂಪಡೆಯಬಹುದೇ? ಹೌದು, ಈ ಕೆಳಗಿನ ಸಂದರ್ಭಗಳಲ್ಲಿ ಹಿಂಪಡೆಯಬಹುದು.
ತಾಯಿ ಅಥವಾ ತಂದೆ ತನ್ನ ಸ್ವತ್ತನ್ನು ದಾನ ಪತ್ರದ ಮೂಲಕ ವರ್ಗಾಯಿಸುವ ಸಂದರ್ಭದಲ್ಲಿ ತಾಯಿಗೆ 60 ವರ್ಷ ಮೇಲ್ಪಟ್ಟಿದ್ದರೆ ತಾಯಿ ಅಥವಾ ತಂದೆ ಸ್ವತ್ತನ್ನು ವರ್ಗಾವಣೆ ಮಾಡಿದ ನಂತರ ಮಗಳು ಅಥವಾ ಮಗ ತಾಯಿಯನ್ನು ಅಥವಾ ತಂದೆ ಜೋಪಾನ ಮಾಡದಿದ್ದರೆ ಅಥವಾ ಅವರನ್ನು ಮನೆಯಿಂದ ಹೊರ ದೂಡಿದರೆ, ಆರೋಗ್ಯ ಹಾರೈಕೆಯನ್ನು ಮಾಡದಿದ್ದರೆ ಅಥವಾ ದಾನವನ್ನು ಪಡೆಯುವ ಸಂದರ್ಭದಲ್ಲಿ ದಾನ ಕೊಡುವ ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದು, ಬುದ್ಧಿಮಾಂದ್ಯರಾಗಿದ್ದಲ್ಲಿ ಅಥವಾ ದಾನ ಕೊಡುವ ವ್ಯಕ್ತಿಯಿಂದ ಬಲವಂತವಾಗಿ ದಾನ ಪಡೆದಿದ್ದರೆ ಅದು ಶೂನ್ಯವಾಗುತ್ತದೆ ಅಥವಾ ದಾನವನ್ನು ಸೂಕ್ತ ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ ಮತ್ತೆ ಹಿಂಪಡೆಯಬಹುದು.