ಮೈಸೂರು: ನಾಡಿನಲ್ಲಿ ಮೆಳೆ ಇಲ್ಲದೆ ಬರಗಾಲ ಇದ್ದರೂ ಜನ ಸಂತೋಷವಾಗಿದ್ದಾರಲ್ಲಾ ಎಂಬುದೇ ನನಗೆ ಖುಷಿ ವಿಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಮೈಸೂರು ಜಿಲ್ಲಾಡಳಿತ ಮತ್ತು ಭಾರತೀಯ ವಾಯುಪಡೆ ವತಿಯಿಂದ ನಾಡಹಬ್ಬ ದಸರಾ- 2023 ಪ್ರಯುಕ್ತ ಮೈಸೂರಿನ ಬನ್ನಿಮಂಟಪದಲ್ಲಿರುವ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ವೈಮಾನಿಕ ಪ್ರದರ್ಶನ (Airshow) ವೀಕ್ಷಣೆ ಬಳಿಕ ಮಾತನಾಡಿದರು.
ದಸರಾ ಅಂದರೆ ಜನರ ಹಬ್ಬ, ನಾಡಹಬ್ಬ. ನಾನು ದೆಹಲಿಗೆ ಭೇಟಿ ನೀಡಿದ್ದ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರಿಗೆ ಈ ಬಾರಿಯ ದಸರಾದಲ್ಲಿ ಏರ್ಶೋ ಆಯೋಜಿಸುವಂತೆ ಮನವಿ ಮಾಡಿದ್ದೆ. ಅವರು ಸಹ ಒಪ್ಪಿಗೆ ಸೂಚಿಸಿದರು. ಅದರಂತೆ ಏರ್ಶೋ ನಡೆದಿದೆ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಒಮ್ಮೆ ಏರ್ಶೋ ಮಾಡಿಸಿದ್ದೆ ಎಂದರು.
ಇನ್ನು ಬರ ಪರಿಹಾರ ಕಾಮಗಾರಿಗಳು ನಡೆಯುತ್ತಿವೆ. ದುಡಿಯುವ ಕೈಗಳಿಗೆ ಕೆಲಸ ಕೊಡುತ್ತಿದ್ದೇವೆ. ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಜಾನುವಾರುಗಳಿಗೆ ಮೇವು ಒದಗಿಸಲಾಗುತ್ತಿದೆ. ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಕುಡಿಯುವ ನೀರು ಹಾಗೂ ಮೇವಿನ ವಿಚಾರದಲ್ಲಿ ಎಷ್ಟೇ ಹಣ ಖರ್ಚಾದರೂ ಕೊಡುತ್ತೇವೆ ಎಂದು ಹೇಳಿದ್ದೇವೆ. ಮೇವಿಗೆ ಯಾವುದೇ ಅಭಾವವಿಲ್ಲ. ಸಾಕಷ್ಟು ಮೇವನ್ನು ಸಂಗ್ರಹಿಸಲಾಗಿದ್ದು, ಹೊಸದಾಗಿ ಬೆಳೆಯಲು ಹಾಗೂ ಸಂಗ್ರಹಿಸಲು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.