ಬೆಂಗಳೂರು: ನಟ ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಾರೆಂದು ಹಬ್ಬಿದ್ದ ವದಂತಿಗೆ ಸ್ವತಃ ಕಿಚ್ಚ ಸುದೀಪ್ ಅವರೇ ಸ್ಪಷ್ಟನೆ ನೀಡಿ ಆ ವಿಚಾರಕ್ಕೆ ತೆರೆ ಎಳೆದಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಯಾವ ಪಕ್ಷದಿಂದಲೂ ನಾನು ಚುನಾವಣೆಗೆ ನಿಲ್ಲುವುದಿಲ್ಲ. ನನ್ನ ಸ್ನೇಹಿತರಿಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಚುನಾವಣೆ, ರಾಜಕಾರಣ ನನಗೆ ಇಷ್ಟವಿಲ್ಲ ಎಂದು ಸ್ಪಷ್ಟ ಪಡಿಸಿದರು.
ಈ ಮೂಲಕ ನಟ ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿಯೇ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿತ್ತು. ಆದರೆ, ಸುದ್ದಿಗೋಷ್ಠಿಯಲ್ಲಿ ಸುದೀಪ್, ಬಿಜೆಪಿ ಸೇರುವ ವಿಚಾರ ಮಾತನಾಡಲಿಲ್ಲ. ಪಕ್ಷದ ಪರವಾಗಿ ಪ್ರಚಾರ ಮಾಡುವೆ ಅಂತಾನೂ ಹೇಳಲಿಲ್ಲ. ಬಸವರಾಜ ಬೊಮ್ಮಾಯಿ ಪರವಾಗಿ ನಿಂತುಕೊಳ್ಳುತ್ತೇನೆ ಎಂದಷ್ಟೇ ಹೇಳಿದರು.
ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರನ್ನು ನಾನು ಚಿಕ್ಕಂದಿನಿಂದಲೇ ಮಾಮಾ ಎಂದು ಕರೆಯುತ್ತಿದ್ದೆ. ಈಗಲೂ ಅವರನ್ನು ಹಾಗೆಯೇ ಕರೆಯುವೆ. ನಾನು ಸಿನಿಮಾ ರಂಗಕ್ಕೆ ಬರುವಾಗ ತುಂಬಾ ಕಷ್ಟದ ದಿನಗಳಲ್ಲಿ ಇದ್ದೆ. ಅವತ್ತು ನನಗೆ ಸಪೋರ್ಟ್ ಮಾಡಿದವರು. ಹಾಗಾಗಿ ಇವರಿಗೆ ನಾನು ಸಪೋರ್ಟ್ ಕೊಡುತ್ತಿದ್ದೇನೆ. ನನ್ನ ಸ್ನೇಹಿತರೂ ಇಲ್ಲಿದ್ದಾರೆ. ಅವರ ಪರವಾಗಿ ನಾನು ನಿಲ್ಲುತ್ತೇನೆ ಎಂದರು.
ನನಗೆ ಆತ್ಮೀಯರು, ಆಪ್ತರು ತುಂಬಾ ಜನ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೇ, ಅವರು ನನ್ನ ಕಷ್ಟದ ಕಾಲದಲ್ಲಿ ಕೈ ಹಿಡಿದಿದ್ದಾರೆ. ಅವರ ಪರವಾಗಿ ನಿಲ್ಲಬೇಕಾಗಿದ್ದು ನನ್ನ ಕರ್ತವ್ಯ ಈ ಕಾರಣದಿಂದಾಗಿ ನಾನು ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದೇನೆ ಎಂದರು.
ಸಂದರ್ಭದಲ್ಲಿ ಒಂದು ಸ್ಪಷ್ಟನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಇದನ್ನು ಅಭಿಮಾನಿಗಳಿಗೆ ಸ್ಪಷ್ಟನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ಟಿಕೆಟ್ ಕೇಳುವುದಿಲ್ಲ ಎಂದರು.
ಇನ್ನು ಈ ಕುರಿತು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಆರಂಭಿಸಿದ್ದಾರೆ. ನೆಚ್ಚಿನ ನಟ ಈಗಾಗಲೇ ತಮ್ಮದೇ ಟ್ರಸ್ಟ್ ಮೂಲಕ ಸಮಾಜಸೇವೆ ಆರಂಭಿಸಿದ್ದಾರೆ. ರಾಜಕಾರಣಕ್ಕೆ ಹೋದರೆ ಮತ್ತಷ್ಟು ಸಹಾಯ ಮಾಡಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ಅವರು ರಾಜಕೀಯ ಕ್ಷೇತ್ರಕ್ಕೆ ಹೋಗುವುದು ಬೇಡ ಎಂದು ನೇರವಾಗಿ ಹೇಳುತ್ತಿದ್ದಾರೆ.