NEWSನಮ್ಮಜಿಲ್ಲೆನಮ್ಮರಾಜ್ಯ

ಪ್ರಯಾಣಿಕರಿಗೆ ವಿತರಿಸದ ಟಿಕೆಟ್‌ಗೆ ಮೌಲ್ಯವೇ ಇಲ್ಲ ಅಂದ ಮೇಲೆ ನಿರ್ವಾಹಕರು ಶೂನ್ಯ ಟಿಕೆಟ್‌ 10 ರೂ. ಏಕೆ ಕಟ್ಟಬೇಕು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯ ನಾಲ್ಕೂ ನಿಗಮಗಳ ನಿರ್ವಾಹಕರ ಪಾಲಿಗೆ ಮುಳ್ಳಾಗುವ ಒಂದು ನಿರ್ಧಾರವನ್ನು 2024ರ ಮೇ 3ರಂದು ಅಂದಿನ ಮುಖ್ಯ ಸಂಚಾರಿ ವ್ಯವಸ್ಥಾಪಕರು ತೆಗೆದುಕೊಂಡಿದ್ದರು. ಈಗ ಆ ರೀತಿಯ ಟಿಕೆಟ್‌ ಇಲ್ಲ ಬಿಡಿ. ಆದರೆ ಅಧಿಕಾರಿಗಳು ತೆಗೆದುಕೊಳ್ಳುವ ಸಣ್ಣತನದ ನಿರ್ಧಾರದಿಂದ ನೌಕರರು ಎಷ್ಟೆಲ್ಲ ಸಮಸ್ಯೆ ಅನುಭವಸಬೇಕಾಗುತ್ತದೆ ಅನ್ನೋದು ಗೊತ್ತಾಗಬೇಕಲ್ಲ, ಅದಕ್ಕಾಗಿ.

ಅಂದಿನ ಮುಖ್ಯ ಸಂಚಾರಿ ವ್ಯವಸ್ಥಾಪಕರು ಶಾಂತಿ ನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಕುಳಿತು ಒಂದು ಸಹಿ ಮಾಡಿ ಆದೇಶ ಮಾಡಿಬಿಟ್ಟರು. ಆದರೆ ಅವರಿಗೇನುಗೊತ್ತು ಮಹಿಳೆಯರಿಗೆ ವಿತರಿಸದೇ ಕಳೆದುಕೊಂಡ ಟಿಕೆಟ್‌ಗೆ ಮೌಲ್ಯವೇ ಇಲ್ಲದಾಗ ನಿರ್ವಾಹಕರಿಂದ ಪ್ರತಿ ಶೂನ್ಯ ಟಿಕೆಟ್‌ 10 ರೂಪಾಯಿ ವಸೂಲಿ ಮಾಡಿ ಎಂಬ ಆದೇಶದಿಂದ ನೌಕರರಿಗೆ ಲಾಸ್‌ ಆಗುತ್ತದೆ ಎಂದು.

ಈ ರೀತಿ ಆದೇಶ ಹೊರಡಿಸುವ ಮುನ್ನ ಮುಖ್ಯ ಸಂಚಾರಿ ವ್ಯವಸ್ಥಾಪಕರು ಸ್ವಲ್ಪ ತಾಳ್ಮೆಯಿಂದ ಯೋಚಿಸಬೇಕಾಗಿತ್ತು. ಟಿಕೆಟ್‌ಅನ್ನು ನಿರ್ವಾಹಕರು ಕಳೆದುಕೊಂಡಿದ್ದಾರೆ ಎಂದ ಮೇಲೆ ಆ ಟಿಕೆಟ್‌ನಿಂದ ಸಂಸ್ಥೆಗೆ ಯಾವುದೇ ನಷ್ಟವಾಗುವುದಿಲ್ಲ. ಅಂದ ಮೇಲೆ ನಿರ್ವಾಹಕರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬೇಕು ಅವರಿಂದ  ಟಿಕೆಟ್‌ ಹೇಗೆ ಕಳೆದುಕೊಂಡಿರಿ ಎಂಬ ಬಗ್ಗೆ ವಿವರಣೆ ಬರದುಕೊಡಿ ಎಂದು ಹೇಳಿ ಬರೆಸಿಕೊಂಡು ಆ ಬಳಿಕ ನಿಜವಾಗಲು ಟಿಕೆಟ್‌ ಕೆಳೆದುಹೋಗಿವೆ ಎಂದು ಖಚಿತವಾದ ಮೇಲೆ ಆ ಪ್ರಕರಣವನ್ನು ಕೈ ಬಿಟ್ಟರಾಯಿತಲ್ಲವೇ?

ಅದನ್ನು ಬಿಟ್ಟು ನಿರ್ವಾಹಕರೆ ಏನೋ ಆ ಟಿಕೆಟ್‌ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ರೀತಿಯಲ್ಲಿ ಅವರಿಂದ ಪ್ರತಿ ಟಿಕೆಟ್‌ಗೆ 10 ರೂಪಾಯಿ ವಸೂಲಿ ಮಾಡಿ ಎಂಬ ಸುತ್ತೋಲೆ ಹೊರಡಿಸಿರುವುದು ಒಂದು ರೀತಿ ಹಾಸ್ಯಸ್ಪದವಾಗಿ ಕಾಣುತ್ತಿದೆ. ಅಲ್ಲದೆ ಆ ಅಧಿಕಾರಿಯ ಮನಸ್ಥಿತಿ ಏನಾಗಿದೆ ಎಂಬುದರ ಬಗ್ಗೆಯೂ ಯೋಚಿಸಬೇಕಿದೆ ಎಂಬ ಅನುಮಾನ ಮೂಡುವಂತಿದೆ.

ಆ ಮುಖ್ಯ ಸಂಚಾರಿ ವ್ಯವಸ್ಥಾಪಕರು ಹೊರಟಿಸಿರುವ ಸುತ್ತೋಲೆ? ಸುತ್ತೋಲೆ ಸಂಖ್ಯೆ: 1796/2024 (ಸಂಚಾರ ಇಲಾಖೆಯಿಂದ ಹೊರಡಿಸಲಾಗಿದೆ) ವಿಷಯ: “ಶಕ್ತಿ ಯೋಜನೆ’ಯಲ್ಲಿ ನಿರ್ವಾಹಕರು ಮಹಿಳಾ ಪ್ರಯಾಣಿಕರುಗಳಿಗೆ ವಿತರಿಸಲು ನೀಡಿರುವ ಪಿಂಕ್‌ ಟಿಕೆಟ್‌ಗಳನ್ನು ಕಳೆದುಕೊಂಡಾಗ ಕೈಗೊಳ್ಳಬೇಕಾದ ಕ್ರಮದ ಕುರಿತು.

ಉಲ್ಲೇಖ:ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ: 818/2023, ದಿನಾಂಕ: 07-06.2023.

ಈ ವಿಷಯಕ್ಕೆ ಸಂಬಂಧಿಸಿದಂತೆ, ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ 818/2023 ರನ್ವಯ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಸಂಬಂಧ ಇಟಿಎಂ ಕಾರ್ಯ ನಿರ್ವಹಿಸದ ಸ್ಪಂದರ್ಭದಲ್ಲಿ ಪಿಂಕ್ ಟಿಕೆಟ್ ವಿತರಿಸಲು (ಲಗ್ಗೇಜ್ ಟಿಕೆಟ್ ರೀತಿಯಲ್ಲಿ) ತಿಳಿಸಲಾಗಿದೆ. ಅದೇ ರೀತಿ ಎಲ್ಲ
ನಿರ್ವಾಹಕರಿಗೂ ಪಿಂಕ್ ಟಿಕೆಟ್‌ನ್ನು ವಿತರಿಸಲಾಗಿದೆ. ಈ ರೀತಿ ನಿರ್ವಾಹಕರಿಗೆ ವಿತರಿಸಿರುವ ಪಿಂಕ್ ಟಿಕೆಟ್ ಕಳೆದುಹೋದ ಪಕ್ಷದಲ್ಲಿ ನಿರ್ವಾಹಕರ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಯಾವುದೇ ಮಾರ್ಗದರ್ಶನ ನೀಡಿರುವುದಿಲ್ಲವೆಂದು ತಿಳಿಸಿ, ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾರ್ಗದರ್ಶನ ಕೋರಿ ವಿಭಾಗಗಳಿಂದ ಪತ್ರಗಳು ಬಂದಿವೆ.

ಈ ಸಂಬಂಧ ನಿರ್ವಾಹಕರಿಗೆ ಪಿಂಕ್‌ ಟಿಕೆಟನ್ನು ಲಗ್ಗೇಜು ಟಿಕೆಟ್ ಮಾದರಿಯಲ್ಲಿ ವಿತರಿಸುತ್ತಿದ್ದು, ಸದರಿ ಟಿಕೆಟ್‌ಗಳಿಗೆ ಮುಖ ಬೆಲೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಕಳೆದುಹೋದ ಪ್ರತಿ ಟಿಕೆಟ್‌ಗೆ 10 ರೂ. (ರೂ.ಹತ್ತು)ಗಳಂತೆ ನಿಗದಿ ಮಾಡಿ, ಈ ಮೊತ್ತವನ್ನು ಸಂಬಂಧಿಸಿದ ನಿರ್ವಾಹಕರಿಂದ ಭರಿಸಿಕೊಳ್ಳುವಂತೆ ಹಾಗೂ ಈ ಟಿಕೆಟ್ ಕಳೆದ ಕಾರಣ ಅವರ ನಿರ್ಲಕ್ಷತೆಗೆ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು.

ಇನ್ನು ಈ ಸುತ್ತೋಲೆಯನ್ನು ಸ್ವೀಕರಿಸಿದ ಬಗ್ಗೆ ಸ್ವೀಕೃತಿಯನ್ನು ಹಾಗೂ ಕೈಗೊಂಡ ಕ್ರಮದ ಬಗ್ಗೆ ಅನುಸರಣಾ – ವರದಿಯನ್ನು ನೀಡುವುದು ಎಂದು ಮುಖ್ಯ ಸಂಚಾರಿ ವ್ಯವಸ್ಥಾಪಕರು ಸುತ್ತೋಲೆ ಹೊರಡಿಸಿದ್ದಾರೆ. ಇದರಿಂದ ನಿರ್ವಾಹಕರಿಗೆ ಎಷ್ಟು ಕಿರಿಕಿರಿಯಾಗುತ್ತೆ ಎಂಬ ತಿಳಿವಳಿಕೆಯೂ ಇಲ್ಲದೆ ಈ ರೀತಿ ಸುತ್ತೋಲೆ ಹೊರಡಿಸುವುದು ಎಷ್ಟರ ಮಟ್ಟಿಗೆ ಸರಿ?

Megha
the authorMegha

Leave a Reply

error: Content is protected !!