ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿ ನಾಡಿನ ಮಹಿಳೆಯರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಆರಂಭಿಸಿದ ದಿನದಿಂದ ಈವರೆಗೂ ನೂರಾರು ಚಾಲನಾ ಸಿಬ್ಬಂದಿಗಳು ಅಮಾನತು, ದಂಡ ಕಟ್ಟಿದ್ದಾರೋ. ಆದರೆ, ಟಿಕೆಟ್ ರಹಿತ ಪ್ರಯಾಣಿಕ ಮಹಿಳೆಯರಿಗೆ ಮಾತ್ರ ಯಾವುದೆ ದಂಡ ವಿಧಿಸಿಲ್ಲ.
ಆದರೆ, ತೆಲಂಗಾಣದಲ್ಲಿ ಇದೇ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಡಿ.9ರಿಂದ ತೆಲಂಗಾಣ ರಾಜ್ಯದ ಮಹಿಳೆಯರಿಗೂ ಟಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗಿದೆ. ಆದರೆ, ಅಲ್ಲಿನ ಪ್ರಯಾಣಿಕ ಮಹಿಳೆಯರು ಟಿಕೆಟ್ ರಹಿತ ಪ್ರಯಾಣ ಮಾಡಿದರೆ ಅವರಿಗೆ 500 ರೂ. ದಂಡ ವಿಧಿಸಲಾಗುವುದು ಎಂದು ನಿಗಮದ ಎಂಡಿ ಸಜ್ಜನರ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಎಂಡಿ ಅವರ ರೀತಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಎಂಡಿ ಅನ್ಬುಕುಮಾರ್ ಅವರು ಕೂಡ ಈ ರೀತಿ ಆದೇಶ ಹೊರಡಿಸಿದ್ದರೆ, ಕೆಲ ಮಹಿಳಾ ಪ್ರಯಾಣಿಕರು ಮಾಡಿದ ತಪ್ಪಿಗೆ ಅಮಾನತು, ದಂಡದಂಥ ಶಿಕ್ಷೆ ಅನುಭವಿಸುವುದು ರಾಜ್ಯದ ಸಾರಿಗೆ ನೌಕರರಿಗೂ ತಪ್ಪುತ್ತಿತ್ತು.
ಆದರೆ, ಈ ರೀತಿಯ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡದೆ ಬರಿ ಸಾರಿಗೆ ನಿಗಮಗಳ ನೌಕರರ ಮೇಲೆ ಪ್ರತಿಯೊಂದನ್ನು ಹೊರಿಸಿ ಅವರನ್ನು ಮಾನಸಿಕವಾಗಿ ಹಿಂಸೆ ನೀಡುತ್ತಿರುವುದಲ್ಲದೆ. ಅವರಿಗೆ ಅಮಾನತು, ದಂಡ ಕಟ್ಟುವ ಶಿಕ್ಷೆಯನ್ನು ವಿಧಿಸುತ್ತಿರವುದು ಎಷ್ಟರ ಮಟ್ಟಿಗೆ ಸರಿ. ಇನ್ನಾದರೂ ಈ ಬಗ್ಗೆ ಎಂಡಿ ಅನ್ಬುಕುಮಾರ್ ಅವರು ಪ್ರತಿಯೊಂದಕ್ಕೂ ಸರ್ಕಾರದ ಆಜ್ಞೆಗಾಗಿ ಕಾಯದೆ ತಮ್ಮ ಅಧಿಕಾರ ವ್ಯಾಪ್ತಿಗೆ ಬರುವ ಅಧಿಕಾರವನ್ನು ಚಲಾಯಿಸಿ ಪ್ರಯಾಣಿಕ ಮಹಿಳೆಯರ ಜವಾಬ್ದಾರಿ ಏನು ಎಂಬುದನ್ನು ತೋರಿಸಬೇಕಿದೆ.
ಈಗಾಗಾಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಲ್ಲಿ ನೌಕರರಿಗಷ್ಟೇ ನಿಯಮಗಳಡಿ ಶಿಕ್ಷೆ ವಿಧಿಸಲಾಗುತ್ತಿದೆ. ಆದರೆ, ತಪ್ಪು ಮಾಡಿದ ಪ್ರಯಾಣಿಕ ಮಹಿಳೆಯರಿಗೆ ಯಾವುದೆ ದಂಡ ವಿಧಿಸಿಲ್ಲ ಇದರಿಂದ ಬಹುತೇಕ ಮಹಿಳೆಯರು ನಿರ್ವಾಹಕರ ಜತೆಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.
ಅಲ್ಲದೆ ಕಂಡಕ್ಟರ್ ಟಿಕೆಟ್ ತೆಗೆದುಕೊಳ್ಳಿ ಎಂದು ಹಲವಾರು ಬಾರಿ ಹೇಳಿದರೂ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಕುಳಿತಿರುತ್ತಾರೆ. ಇನ್ನು ಕಂಡಕ್ಟರ್‌ಗಳೇ ಹತ್ತಿರ ಹೋಗಿ ನೀವು ಟಿಕೆಟ್ ತೆಗೆದುಕೊಂಡಿದ್ದಾರ ಎಂದು ಕೇಳಿದಾಗ ಇಲ್ಲ ಕೊಡಿ ಎನ್ನುತ್ತಾರೆ ಎಂಬ ಆರೋಪವು ಇದೆ. ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸುವ ಮಹಿಳಾ ಪ್ರಯಾಣಿಕರಿಗೆ ದಂಡದ ಬಿಸಿ ಮುಟ್ಟಿಸಿದರೆ ನಂತರ ಬಸ್ ಹತ್ತಿದ ಕೂಡಲೇ ಟಿಕೆಟ್ ತೆಗೆದುಕೊಳ್ಳುತ್ತಾರೆ.
ಹೀಗಾಗಿ ಇನ್ನಾದರ ನಿಗಮದ ತೆಲಂಗಾಣ ಟಿಎಸ್‌ಆರ್‌ಟಿಸಿ ಎಂಡಿ ಸಜ್ಜನರ್ ತೆಗೆದುಕೊಂಡ ರೀತಿ ಕರ್ನಾಟಕ ರಾಜ್ಯ ರಸ್ತೆಯ ಎಂಡಿ ಅನ್ಬುಕುಮಾರ್ ಅವರು ತೆಗೆದುಕೊಂಡರೆ, ಚಾಲನಾ ಸಿಬ್ಬಂದಿ ಮತ್ತು ಪ್ರಯಾಣಿಕ ಮಹಿಳೆಯರ ನಡುವೆ ಆಗುತ್ತಿರುವ ಘರ್ಷಣೆ ಮತ್ತು ಚಾಲನಾ ಸಿಬ್ಬಂದಿಗೆ ಆಗುತ್ತಿರುವ ಶಿಕ್ಷೆ ಕಡಿಮೆಯಾಗಬಹುದು.
ಈ ನಿಯಮ ಕರ್ನಾಟಕದಲ್ಲಿ ಬರುವುದಿಲ್ಲ. ಒಂದು ವೇಳೆ ಸರ್ಕಾರವೇ ಈ ರೀತಿಯ ನಿಯಮ ಜಾರಿ ಮಾಡಲು ಸಿದ್ದವಾದರೆ ಇಲ್ಲಿನ ಕೆಲವು ಸಂಘಟನೆಗಳು ಹಾಗೂ ಕೆಲವು ಅಧಿಕಾರಿಗಳು ಕೂಡಿ ಏನಾದರೂ ಸಬೂಬು ಹೇಳಿ ಇದನ್ನು ತಡೆಯುತ್ತಾರೆ. ಏಕೆಂದರೆ ಇಂಥಾ ಸುತ್ತೋಲೆ ಗಳು ಜಾರಿ ಆದರೆ ನಿರ್ವಾಹಕರ ಮೇಲೆ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಪ್ರಕರಣ ದಾಖಲಾಗದಿದ್ದರೆ ಅಮಾನತು ಮಾಡಲು ಸಾದ್ಯವಿಲ್ಲ. ಅಮಾನತು ಆಗದಿದ್ದರೆ ಆ ನಿರ್ವಾಹಕ ಅಧಿಕಾರಿಗಳಿಗೆ ಯಾವುದೇ ಲಂಚ ನೀಡುವ ಪ್ರಮೇಯವೇ ಬರುವುದಿಲ್ಲ. ಇದು ವಾಸ್ತವ.
l ಹೆಸರೇಳಲಿಚ್ಛಿಸದ ಸಾರಿಗೆ ನೌಕರ