ಕೂಡಲಸಂಗಮ: ರೈತರ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾರೆ. ಆದರೆ ಅನ್ನದಾತರನ್ನು ಕಡೆಗಣಿಸಿ ರೈತರ ಮೂಗಿಗೆ ತುಪ್ಪ ಸವರುತ್ತಾರೆ ಈ ರೀತಿಯ ಶೋಷಣೆಗಳಿಂದಲೇ ರೈತರ ಆತ್ಮಹತ್ಯೆಗಳಾಗುತ್ತಿವೆ ಎಂದು ರೈತರತ್ನ ಕುರುಬೂರು ಶಾಂತಕುಮಾರ್ ಸರ್ಕಾರಗಳ ವಿರುದ್ಧ ಕಿಡಿಕಾರಿದರು.
ಕೂಡಲಸಂಗಮದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಜಾಗೃತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ರೈತರ ಶೋಷಣೆ ನಿಂತಿಲ್ಲ. ಒಂದು ವರ್ಷಕಾಲ ಹೋರಾಟ ಮಾಡಿದರು ರೈತರಿಗೆ ಎಂಎಸ್ಪಿ ಗ್ಯಾರಂಟಿ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಸಾಲ ಮಾಡಿ ವಿದೇಶಕ್ಕೆ ಹಾರಿ ಹೋಗುವ ಬಂಡವಾಳ ಶಾಹಿಗಳಿಗೆ ಸಾವಿರಾರು ಕೋಟಿ ರೂ.ಗಳ ಸುಲಭ ಸಾಲ ಸಿಗುತ್ತದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ರೈತರ ಜಮೀನಿಗೆ ಒಂದು ಲಕ್ಷ ಸಾಲ ನೀಡಲು ಸತಾಯಿಸುತ್ತಾರೆ. ಇದು ರೈತರ ದೌರ್ಭಾಗ್ಯ. ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಸೇವಕರಾಗುತ್ತಿದ್ದಾರೆ. ಅದಕ್ಕಾಗಿ ಸಂಘಟಿತ ಹೋರಾಟದ ಅನಿವಾರ್ಯತೆ ಇದೆ. ಕೆಲವು ರೈತ ಸಂಘಟನೆಗಳು ರಾಜಕೀಯ ಪಕ್ಷಗಳ ಮುಖವಾಡಗಳಾಗಿವೆ, ಇದು ಕೂಡ ರೈತರ ದುರ್ಬಲತೆಗೆ ಕಾರಣವಾಗುತ್ತದೆ. ರಾಜಕೀಯ ಪಕ್ಷಗಳು ಇಂಥವರನ್ನು ಬಳಸಿ ರೈತರ ಶೋಷಣೆ ಮಾಡುತ್ತಿದ್ದಾರೆ ಇಂತಹ ಇಬ್ಬಂದಿಗಳ ನೀತಿ ವಿರುದ್ಧ ಹೋರಾಡಲು ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಾಗಾರ ಉದ್ಘಾಟನೆ ಮಾಡಿದ ಬೆಳಗಾವಿಯ ಸಾವಯುವ ಕೃಷಿಕ ಸುರೇಶ್ ಬಿ.ದೇಸಾಯಿ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ರೈತರಿಗೆ ಸ್ವಾಭಿಮಾನಿ ಸ್ವಾವಲಂಬಿ ಬದುಕು ಕಲಿಸುವ ಕಾರ್ಯಾಗಾರ ಉದ್ಘಾಟನೆ ಮಾಡುತ್ತಿರುವುದು ರೈತನಾಗಿ ನನಗೆ ಸಂತೋಷದ ಸಂಗತಿಯಾಗಿದೆ ಎಂದರು.
ರಾಜ್ಯ ರೈತ ಸಂಘ ರಾಜ್ಯ ಸಂಚಾಲಕ ಪ್ರಸನ್ನಕುಮಾರ್, ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯಧ್ಯಕ್ಷ ವೀರನಗೌಡ ಪಾಟೀಲ್ ಮಾತನಾಡಿದರು. ಶಿವಲೀಲಾ ಸ್ವಾಗತ ಮಾಡಿದರು. ಪರಶುರಾಮ್ ಎತ್ತಿನ ಗುಡ್ಡ ಕಾರ್ಯಕ್ರಮ ನಿರ್ವಹಿಸಿದರು. 150ಕ್ಕೂ ಹೆಚ್ಚು ರಾಜ ಜಿಲ್ಲಾ ತಾಲೂಕು ಪದಾಧಿಕಾರಿಗಳು ಭಾಗವಹಿಸಿದ್ದರು.