ಕನಕಪುರ: ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಕೊಟ್ಟಿದ್ದ 5 ಗ್ಯಾರಂಟಿಗಳನ್ನು ಜಾರಿಗೆ ತರಲಾಗುತ್ತಿದ್ದು, ಆ ಗ್ಯಾರಂಟಿಗಳ ವಿಚಾರವಾಗಿ ಯಾರಾದರು ಲಂಚ ಕೇಳಿದರೆ ನನಗೇ ನೇರವಾಗಿ ಪತ್ರ ಬರೆಯಿರಿ ಲಂಚ ಕೇಳಿದವರನ್ನು ಒದ್ದು ಒಳಗೆ ಹಾಕಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕನಕಪುರದ ಕಬ್ಬಾಳು ಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳ ಜಾರಿಗೆ ತರುವುದರ ಬಗ್ಗೆ ನಿನ್ನೆ (ಶುಕ್ರವಾರ) ಸಂಚಿವ ಸಂಪುಟದಲ್ಲಿ ತೀರ್ಮಾನಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ನಿನ್ನೆಯೇ ಆ ಬಗ್ಗೆ ಘೋಷಣೆ ಮಾಡಿದ್ದಾರೆ. ಹೀಗಾಗಿ ಸಂಬಂಧಪಟ್ಟ ಫಲಾನುಭವಿಗಳಿಗೆ ಅದನ್ನು ತಲುಪಿಸಬೇಕಿದೆ. ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳ ವಿಚಾರವಾಗಿ ಯಾರಾದರೂ ಲಂಚ ಕೇಳಿದರೆ ಅವರನ್ನು ಸುಮ್ಮನೇ ಬಿಡುವುದಿಲ್ಲ ಎಂದು ತಿಳಿಸಿದರು.
ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಮುಂದಿನ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ಆರಂಭವಾಗಲಿದೆ. ಹೆಣ್ಣು ಮಕ್ಕಳಿಗೆ ಗೃಹಲಕ್ಷ್ಮೀ ಯೋಜನೆ ಮೂಲಕ ತಿಂಗಳಿಗೆ 2 ಸಾವಿರ ರೂ. ಕೊಡುತ್ತೇವೆ. ಯಾರು ಯಜಮಾನಿ ಎಂದು ನೀವು ತೀರ್ಮಾನ ಮಾಡಿಕೊಳ್ಳಬೇಕು ಎಂದರು.
ಅಲ್ಲದೆ ಈ ಯೋಜನೆಗೆ ಹೆಣ್ಣುಮಕ್ಕಳ ಅಕೌಂಟ್ ನಂಬರನ್ನೇ ಕೊಡಬೇಕು. ಈ ಯೋಜನೆಗಳಿಗೆ ಜೂ.15ರಿಂದ ಜು.15ರ ವರೆಗೆ ಅರ್ಜಿ ಹಾಕಬೇಕು. ಯಾರಿಗೂ ಲಂಚ ಕೊಡಬೇಡಿ ಎಂದರು. ಇದೇ ತಿಂಗಳು 11ರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸಿಗಲಿದೆ. ರಾಜ್ಯದಲ್ಲಿ ಎಲ್ಲಿಗೆ ಬೇಕಾದರೂ ಓಡಾಡಬಹುದು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ತಂದಿರುವುದಕ್ಕೆ ನಿಮಗೆ ಈ ಯೋಜನೆಗಳು ಸಿಗುತ್ತಿದೆ. ನಾನು ನಿಮ್ಮ ಉಪಕಾರ ಸ್ಮರಣೆ ನೆನೆಯಲು ಇಲ್ಲಿಗೆ ಬಂದಿದ್ದೇನೆ. ನೀವು ಕಾಂಗ್ರೆಸ್‍ಗೆ ಕೊಟ್ಟ ಶಕ್ತಿ ಸಾರ್ಥಕವಾಗುತ್ತದೆ. ರಾಜ್ಯದ ಇತಿಹಾಸದಲ್ಲೇ ಹೆಚ್ಚು ಅಂತರದಲ್ಲಿ ಗೆಲ್ಲಿಸಿದ್ದೀರಿ ಎಂದು ಹೇಳಿದರು.