
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೂ ಉಳಿದ 70 ನಿಗಮಗಳಿಗೆ ನೀಡುವ ವೇತನದಂತೆ ಹಾಗೂ ತಮ್ಮ ಪ್ರಣಾಳಿಕೆಯಂತೆ ಸರಿ ಸಮಾನ ವೇತನ ಕೊಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಸಮಸ್ತ ಸಾರಿಗೆ ನೌಕರರು ಮನವಿ ಮಾಡಿದ್ದಾರೆ.
ತಾವು ನಮ್ಮ ನೌಕರರ ಸಂಘಟನೆಗಳೊಂಗೆ ಇದೇ ಏ.15ರಂದು ಸಂಜೆ ನಡೆಸಿದ ಸಭೆಯಲ್ಲಿ ಸರಿ ಸಮಾನ ವೇತನ ಸೇರಿ ಇತರೆ ನಿಮ್ಮ ಬೇಡಿಕೆಗಳನ್ನು ಅತೀ ಶೀಘ್ರದಲ್ಲೇ ಈಡೇರಿಸುತ್ತೇವೆ ಎಂದು ಭರವಸೆ ನೀಡಿರುವುದಾಗಿ ನೀವೆ ಮಾಧ್ಯಮಗಳಿಗೆ ತಿಳಿಸಿದ್ದೀರಿ. ಅದರಂತೆ ನಮಗೆ ಸರಿ ಸಮಾನ ವೇತನವನ್ನು ಜಾರಿ ಮಾಡಬೇಕು ಎಂದು ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ನಮಗೂ ವೇತನ ಆಯೋಗದಂತೆ ವೇತನ ನೀಡಿದರೆ ಕಾಂಗ್ರೆಸ್ ಪಕ್ಷವು ಮತ್ತಷ್ಟು ಅವಧಿಗಳಿಗೆ ಆಯ್ಕೆ ಆಗುವುದು ಖಚಿತ ಹಾಗೂ ನಿಗಮದ 1.20 ಲಕ್ಷ ನೌಕರರು ಮತ್ತು ಕುಟುಂಬ ವರ್ಗವು ಸೇರಿದಂತೆ ದುಡಿಯುವ ವರ್ಗದ ಎಲ್ಲ ಮತದಾರರ ಒಲವು ಜೀವನಪೂರ್ತಿ ತಮ್ಮ ಮೇಲೆ ಇರುತ್ತದೆ ಎಂದು ಹೇಳಿದ್ದಾರೆ.
ಇನ್ನು ತಮ್ಮ ಸರ್ಕಾರದ ಕುರಿತು ಪ್ರಚಾರದ ಮಾಧ್ಯಮವಾಗಿ ಸಾರಿಗೆಯ ಚಾಲಕರು ಪ್ರಯಾಣಿಕರಿಗೆ ರಾಜ್ಯದ ಉದ್ದಗಲಕ್ಕೂ ಪ್ರಯಾಣದ ವೇಳೆಯಲ್ಲಿ ಅಬ್ಬರದ ಪ್ರಚಾರ ಮತ್ತು ಮಾತುಕತೆಯ ಮೂಲಕ ಮಾಡುತ್ತಾರೆ. ಇದು ಒಂದು ರೀತಿಯಲ್ಲಿ ಖರ್ಚುರಹಿತ ತಮ್ಮ ಸರ್ಕಾರದ ಕುರಿತು ಮಾಧ್ಯಮದ ಪ್ರಚಾರದಂತೆ ಆಗುತ್ತದೆ ಎಂದಿದ್ದಾರೆ.
ಇತಿಹಾಸವನ್ನು ತಿರುವುಹಾಕಿದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಲಾಭ ಮಾಡಿದ ಪಕ್ಷವು ಬಹುತೇಕ ಲಾಭವನ್ನೇ ನೋಡಿದೆ. ಆದ್ದರಿಂದ ದಯಮಾಡಿ 70 ನಿಗಮಗಳು ಮತ್ತು ಸರ್ಕಾರದ ಇಲಾಖೆಗಳಿಗೆ ನೀಡುವ ವೇತನ ಆಯೋಗದಂತೆ ಸಾರಿಗೆ ಸಂಸ್ಥೆಯ ನೌಕರರಿಗೂ ಸಹ ವೇತನ ಆಯೋಗ ಜಾರಿ ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇವೆ.
ದಯವಿಟ್ಟು ಭ್ರಷ್ಟ ಸಂಘಟನೆಗಳ ದಲ್ಲಾಳಿಗಳ ಮುಖ ನೋಡಬೇಡಿ ಸಾರಿಗೆ ಸಂಸ್ಥೆ ನಿಷ್ಠಾವಂತ ನೌಕರರ ಮುಖ ನೋಡಿ ವೇತನ ಆಯೋಗ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದು, ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಯನ್ನು ಜಾರಿ ಮಾಡಿ ಹಾಗೂ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಲು ಆದೇಶ ಹೊರಡಿಸಿ ಎಂದು ಕೇಳಿಕೊಂಡಿದ್ದಾರೆ.