NEWSನಮ್ಮಜಿಲ್ಲೆನಮ್ಮರಾಜ್ಯ

ಜಾತಿಗಣತಿ ವಿಚಾರದಲ್ಲಿ ನುಡಿದಂತೆ ನಡೆಯಬೇಕು : ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಚಾಮರಾಜನಗರ: ಎರಡು ಪ್ರಬಲ ಸಮುದಾಯಗಳ ಒತ್ತಡದಿಂದ ಜಾತಿಗಣತಿ ವರದಿಯನ್ನು ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೇಟು ಹಾಕುತ್ತಿದ್ದಾರೆ. ಈ ಮೂಲಕ 250ಕ್ಕೂ ಹೆಚ್ಚು ಜಾತಿಯವರಿಗೆ ಅನ್ಯಾಯ ಮಾಡುತ್ತಿದ್ದಾರೆ. ನಮ್ಮ ಜಾತಿಯಲ್ಲಿ ಎಷ್ಟು ಜನಸಂಖ್ಯೆ ಇದ್ದಾರೆ ಎಂಬುದು ನಮಗೆ ತಿಳಿಯದಿದ್ದರೆ ನಮ್ಮ ಸಮುದಾಯಕ್ಕೆ ಸಿಗುತ್ತಿರುವ ಮೀಸಲಾತಿಯನ್ನು ಖಚಿತ ಪಡಿಸಿಕೊಳ್ಳುವುದು ಹೇಗೆ? ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ನಿರತರಾಗಿರುವ ಮುಖ್ಯಮಂತ್ರಿ ಚಂದ್ರು ಅವರು ಚಾಮರಾಜನಗರ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದರು. ಈ ಸಂದರ್ಭ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ಸಮುದಾಯದವರು ಎಲ್ಲರೂ ಜಾತಿಗಣತಿ ವರದಿಯನ್ನು ಬಿಡುಗಡೆಗೊಳಿಸುವಂತೆ ಹೋರಾಟ ಮಾಡಬೇಕು. ಸಿದ್ದರಾಮಯ್ಯ ಅವರು ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರವೆಲ್ಲಿ ಬಿದ್ದುಹೋಗುತ್ತದೋ ಎಂಬ ಭಯದಿಂದ ವರದಿಯನ್ನು ಸ್ವೀಕರಿಸಲಿಲ್ಲ.

ಈ ಬಾರಿ ಚುನಾವಣೆ ಪೂರ್ವದಲ್ಲೇ ಜಾತಿಗಣತಿ ವರದಿ ಸ್ವೀಕರಿಸುವುದಾಗಿ ಹೇಳಿದ್ದಾರೆ. ನುಡಿದಂತೆ ನಡೆಯುವ ಸರ್ಕಾರ ಎಂದು ಬಿಂಬಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು ಜಾತಿಗಣತಿ ವರದಿಯನ್ನು ಸ್ವೀಕರಿಸುವ ಮೂಲಕ ತಮ್ಮ ಮಾತಿನಂತೆ ನಡೆಯಬೇಕು ಎಂದು ಮುಖ್ಯಮಂತ್ರಿ ಚಂದ್ರು ಸಿದ್ದರಾಮಯ್ಯ ಅವರಿಗೆ ಸವಾಲು ಒಡ್ಡಿದರು.

ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ಸಂದಿರುವ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಶಾಸಕರಿಗೆ ಕನ್ನಡದಲ್ಲೇ ಸಹಿ ಹಾಕಬೇಕು ಎನ್ನುತ್ತಿದ್ದಾರೆ.

ಕನ್ನಡ ಅಸ್ಮಿತೆ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಇದೆಲ್ಲವೂ ಬಾಯಿಯಲ್ಲಿ ಮಾತ್ರ, ಕೃತಿಯಲ್ಲಿ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅನ್ಯಾಯವಾಗಿದೆ. ಅನುದಾನ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಮಂಜೂರಾದ ಹಣ ಇದುವರೆಗೆ ಬಿಡುಗಡೆಯಾಗಿಲ್ಲ. ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕವಾಗಿಲ್ಲ. ರಂಗಾಯಣವನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಭಾಗವಾಗಿ 1-2 ಸ್ಥಾನದ ಬೇಡಿಕೆ ಇಡುತ್ತೇವೆ: ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸುವುದಕ್ಕಾಗಿ ರಾಷ್ಟ್ರಮಟ್ಟದ ‘ಇಂಡಿಯಾ’ ಮೈತ್ರಿಕೂಟದ ಸದಸ್ಯರಾಗಿದ್ದೇವೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮೈತ್ರಿ ಭಾಗವಾಗಿ 1-2 ಸ್ಥಾನವನ್ನು ಎಎಪಿಗೆ ಬಿಟ್ಟುಕೊಡುವಂತೆ ಬೇಡಿಕೆ ಮುಂದಿಡುತ್ತೇವೆ. ಸ್ಥಳೀಯ ಚುನಾವಣೆಗಳಲ್ಲಿ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದರು.

ಕಳೆದ 75 ವರ್ಷಗಳಿಂದ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಸರ್ಕಾರಗಳಿಂದ ಜನರು ಬೇಸತ್ತಿದ್ದಾರೆ. ಕಳೆದ 5 ವರ್ಷಗಳ ದುರಾಡಳಿತ, ಭ್ರಷ್ಟಾಚಾರದಿಂದ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ. ಜೆಡಿಎಸ್‌ನ ವಂಶರಾಜಕಾರಣದಿಂದ ಬೇಸತ್ತು, ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಹಾಗಾಗಿ ಕಾಂಗ್ರೆಸ್‌ ಪಕ್ಷವು ತನ್ನ ಪರ ಜನತೆಯಿದೆ ಎಂದುಕೊಂಡರೆ ಅದು ಮೂರ್ಖತನ ಎಂದು ಹೇಳಿದರು.

ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅರವಿಂದ ಕೇಜ್ರಿವಾಲ್‌ ಅವರ ದೆಹಲಿ ಸರ್ಕಾರ ಮಾದರಿ ಸರ್ಕಾರವಾಗಿದೆ. ಕಳೆದ 8 ವರ್ಷಗಳಿಂದ ಅಲ್ಲಿನ ನಾಗರಿಕರಿಗೆ ಗುಣಮಟ್ಟದ ಮೂಲಭೂತ ಸೌಲಭ್ಯಗಳು ಸಿಗುತ್ತಿವೆ. ಶಿಕ್ಷಣ, ಚಿಕಿತ್ಸೆ, ಪ್ರಯಾಣ ಎಲ್ಲವೂ ಉಚಿತವಿದ್ದು, ಉತ್ಕೃಷ್ಟ ಗುಣಮಟ್ಟದಿಂದ ಕೂಡಿವೆ. ಬಡವರು, ಮಧ್ಯವರ್ಗದವರು ಸಂತೋಷವಾಗಿದ್ದಾರೆ ಎಂದರು.

ಇನ್ನು ಕೇಜ್ರಿವಾಲ್‌ ಮಾದರಿಯ ಆಡಳಿತ ನಮ್ಮ ರಾಜ್ಯದಲ್ಲೂ ಬರಬೇಕು. ಅದಕ್ಕಾಗಿ ಎಎಪಿ ಸ್ಥಳೀಯ ಮಟ್ಟದಲ್ಲಿ ಪ್ರಬಲಗೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಉತ್ಸುಕರಾಗಿ ಕೆಲಸ ಮಾಡಬೇಕು. ಮಾತಲ್ಲಿ ಅರಮನೆ ಕಟ್ಟುವ ಡೋಂಗಿ ರಾಜಕಾರಣಿಗಳನ್ನು ನಂಬಬಾರದು ಎಂದು ಕರೆ ಕೊಟ್ಟರು.

ಈ ವೇಳೆ ರಾಜ್ಯ ಕಾರ್ಯದರ್ಶಿ ಸೋಸ್ಲೆ ಸಿದ್ಧರಾಜು, ಜಿಲ್ಲಾಧ್ಯಕ್ಷ ಹರೀಶ್‌, ಪ್ರಧಾನ ಕಾರ್ಯದರ್ಶಿ ಮಹದೇವ ಪ್ರಸಾದ್‌, ಸಂಘಟನಾ ಕಾರ್ಯದರ್ಶಿ ಮಹದೇವ ಸ್ವಾಮಿ ಮತ್ತಿತರರು ಇದ್ದರು.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...