ಬೆಂಗಳೂರು: ರಾಜ್ಯದ 31 ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಇಂದು (ಶನಿವಾರ) ಪ್ರಮಾಣವಚನ ಸ್ವೀಕರಿಸಿದರು.
ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 8 ಮಂದಿ ಸಚಿವರು ಕೂಡ ಪ್ರಮಾಣವಚನ ಸ್ವೀಕಾರ ಮಾಡಿದರು. ಇವರೆಲ್ಲರಿಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಿದರು. ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಇನ್ನು ಡಿ.ಕೆ.ಶಿವಕುಮಾರ್ ಅವರು ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
(“ಕಾನೂನಿನ ಮೂಲಕ ಸ್ಥಾಪಿತವಾದ ಭಾರತೀಯ ಸಂವಿಧಾನದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆ ಹೊಂದಿರುತ್ತೇನೆಂದು, ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಹಿಡಿಯುತ್ತೇನೆಂದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧಾಪೂರ್ವಕವಾಗಿ ಮತ್ತು ಅಂತಃಕರಣಪೂರ್ವಕವಾಗಿ ನಿರ್ವಹಿಸುತ್ತೇನೆಂದು, ಭಯ ಅಥವಾ ಪಕ್ಷಪಾತವಿಲ್ಲದೆ, ರಾಗ ದ್ವೇಷವಿಲ್ಲದೆ ಎಲ್ಲ ಬಗೆಯ ಜನರಿಗೆ, ಸಂವಿಧಾನಕ್ಕೆ ಮತ್ತು ಕಾನೂನಿಗೆ ಅನುಸಾರವಾಗಿ ನ್ಯಾಯವಾದುದ್ದನ್ನೇ ಮಾಡುತ್ತೇನೆಂದು ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ.)
ಸಿದ್ದರಾಮಯ್ಯ ಅವರ ಸಂಪುಟ ದರ್ಜೆ ಸಚಿವರಾಗಿಡಾ.ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆ, ಜಮೀರ್ ಅಹಮದ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ ಜಮೀರ್ ಅಹಮದ್ ಮಾತ್ರ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಉಳಿದ ಎಲ್ಲರೂ ಕನ್ನಡದಲ್ಲೇ ಪ್ರಮಾನ ವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ನಟ ಕಮಲ್ ಹಾಸನ್, ಶಿವರಾಜ್ ಕುಮಾರ್, ದುನಿಯಾ ವಿಜಯ್, ನಟಿ ರಮ್ಯಾ, ಉಮಾಶ್ರೀ, ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.