ಮಂಗಳೂರು: ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜಕೀಯ ಪಕ್ಷವಾದ ಆಮ್ ಆದ್ಮಿ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾ ನೂತನ ಕಚೇರಿಯು ನವೆಂಬರ್ 1 ರಂದು ಉದ್ಘಾಟನೆಗೊಳ್ಳಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ತಿಳಿಸಿದ್ದಾರೆ.
ಇಂದು ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈಗಾಗಲೇ ಭ್ರಷ್ಟಾಚಾರ ರಹಿತ ಪಕ್ಷವಾಗಿ ಬೆಳೆಯುತ್ತಿರುವ ಎಎಪಿ ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಬಲಿಷ್ಟ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲಿ ಸರ್ಕಾರವನ್ನು ರಚಿಸಿ ಇತರ ರಾಜ್ಯಗಳಲ್ಲಿ ಕೂಡ ಜನ ಬೆಂಬಲವನ್ನು ಪಡೆಯುತ್ತಿದೆ. ಮುಂಬರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕೂಡ ನಮ್ಮ ಆಮ್ ಆದ್ಮಿ ಪಾರ್ಟಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದೆ ಎಂದರು.
ಇನದನು ಕರ್ನಾಟಕದಲ್ಲೂಆಮ್ ಆದ್ಮಿ ಪಾರ್ಟಿ ತನ್ನ ಸಂಘಟನೆಯನ್ನು ವಿಸ್ತರಿಸುತ್ತಿದೆ. ತಳಮಟ್ಟದಿಂದಲೇ ಸಂಘಟನೆಯನ್ನು ಬೆಳೆಸಲಾಗುತ್ತಿದೆ. ಈಗಾಗಲೇ ಗ್ರಾಮ ಸಂಪರ್ಕ ಅಭಿಯಾನವನ್ನುಆರಂಭಿಸಲಾಗಿದೆ. ಪಕ್ಷದ ಪರವಾಗಿ ಜನಸ್ಪಂದನೆ ಉತ್ತಮವಾಗಿದೆ. ಮಹಿಳಾ, ಯುವ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಪಂಗಡ, ವ್ಯಾಪಾರಿಗಳು, ರೈತರು, ವೃತ್ತಿಪರರು ಸೇರಿರುವ ಹತ್ತು ಮಂಚೂಣಿ ಸಂಘಟನೆಗಳನ್ನು ರೂಪಿಸಿದೆ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಸದಸ್ಯತ್ವ ಅಭಿಯಾನ ಕೂಡ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಕ್ಷದ ಸದಸ್ಯರಾಗಲು ಆಸಕ್ತಿ ತೋರಿಸಿದ್ದಾರೆ. ಸದಸ್ಯರಾಗ ಬಯಸುವವರು ಆನ್ ಲೈನ್ ಮೂಲಕ ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ. ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಎಎಪಿ ಸರ್ಕಾರದ ಸಾಧನೆಯನ್ನು ಗಮನಿಸಿ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ನಾವು ಮಾಡಿರುವ ಬದಲಾವಣೆಯನ್ನು ಗುರುತಿಸಿ ಜನರು ನಮ್ಮ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಇದೀಗ ಮಂಗಳೂರಿನಲ್ಲಿ ಪಕ್ಷದ ಕಚೇರಿ ಆರಂಭಿಸಿದ್ದು ಮಂಗಳೂರು ನಗರದ ಬಲ್‌ಮಠ ರಸ್ತೆಯ ಸೋಜ ಆರ್ಕೇಡ್ (ಡಾ.ಅಂಬೇಡ್ಕರ್ ವೃತ್ತದ ಸಮೀಪ)ನಲ್ಲಿ ಸಿದ್ಧವಾಗಿರುವ ಪಕ್ಷದ ನೂತನ ಕಚೇರಿಯನ್ನು ಆಮ್ ಆದ್ಮಿ ಪಾರ್ಟಿಯ ಹಿತೈಷಿಗಳಾದ, ಅನಿವಾಸಿ ಭಾರತೀಯ ಮೈಕಲ್ ಡಿಸೋಜ ಅವರು ನ.1 ರ ರಾಜ್ಯೋತ್ಸವ ದಿನದಂದು ಸಂಜೆ 4.30ಕ್ಕೆ ಪಕ್ಷದ ಕಚೇರಿ ಉದ್ಘಾಟಿಸಲಿದ್ದಾರೆ.
ಅದಕ್ಕೂ ಮುನ್ನ ನಗರದ ಪಂಪ್ ವೆಲ್ ವೃತ್ತದಿಂದ ಮಧ್ಯಾಹ್ನ 3.30 ಕ್ಕೆ ಪಾದಯಾತ್ರೆ ನಡೆಯಲಿದೆ. ಪಂಪ್ ವೆಲ್ ವೃತ್ತದ ಸಮೀಪ 3 ಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಇದೇ ವೇಳೆ ವಿನಂತಿಸಿದರು.
ಕಚೇರಿ ಉದ್ಘಾಟನೆ ನಂತರ ಡಾನ್ ಬಾಸ್ಕೋ ಸಭಾಂಗಣದಲ್ಲಿ ಸಂಜೆ 5.15ಕ್ಕೆ ಸಾರ್ವಜನಿಕ ಸಮಾವೇಶ ನಡೆಯಲಿದೆ. ಎಎಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸಂತೋಷ್ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶದಲ್ಲಿ ಎಎಪಿ ಕರ್ನಾಟಕ ಅಧ್ಯಕ್ಷ ಪೃಥ್ವಿ ರೆಡ್ಡಿ, ಪಕ್ಷದ ಕೇಂದ್ರ ಸಮಿತಿ ಸದಸ್ಯ ಅಶೋಕ್ ಎಡಮಲೆ, ರಾಜ್ಯ ಜಂಟಿ ಕಾರ್ಯದರ್ಶಿ ವಿವೇಕಾನಂದ ಸಾಲಿನ್ಸ್, ಮೈಕಲ್ ಡಿಸೋಜ ಮುಂತಾದವರು ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಕೂಡ ಆಚರಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ಮಾಧ್ಯಮ ಸಂಚಾಲಕ ವೆಂಕಟೇಶ್ ಬಾಳಿಗಾ, ಸಹ ಕಾರ್ಯದರ್ಶಿ ಡೆಸ್ಮಂಡ್ ಡಿಸೋಜಾ ಜೇಮ್ಸ್ ಡಿಸಾ ಹಾಗೂ ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.