ಮೈಸೂರು: ಧರ್ಮದ ಹಾದಿಯಲ್ಲಿ ಸಾಗಿದರೆ ವಿಜಯ ಪ್ರಾಪ್ತಿಯಾಗುತ್ತದೆ ಎಂದು ಸೋಸಲೆ ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.
ತಿರುಪತಿ ತಿರುಮಲ ಬೆಟ್ಟದಲ್ಲಿ ವ್ಯಾಸರಾಜ ಮಠದ ನವೀಕೃತ ಕಟ್ಟಡ `ಶ್ರೀ ವಿಶ್ವ ಪಾವನ ಭವನ’ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಲಿಯುಗದ ಕಲ್ಪದೃಮನಾದ ವೆಂಕಟೇಶನ ದರ್ಶನ ಮಾತ್ರದಿಂದಲೇ ಲೌಕಿಕ ಜೀವನದ ಸಕಲ ಸಂಕಟಗಳೂ ಪರಿಹಾರವಾಗುತ್ತವೆ. ಆತನ ಸ್ಮರಣೆಯನ್ನು ಸದಾ ಮನದಲ್ಲಿ ಧರಿಸಿಕೊಂಡು ಜೀವನವನ್ನು ಪಾವನ ಮಾಡಿಕೊಳ್ಳಿ ಎಂದು ಭಕ್ತರಿಗೆ ಸಂದೇಶ ನೀಡಿದರು.
ತಿರುಮಲದಲ್ಲಿ ವೆಂಕಟೇಶದ ದರ್ಶನಕ್ಕೆ ನಿತ್ಯವೂ ಸಾವಿರಾರು ಸಾತ್ವಿಕ ಭಕ್ತರು ದೂರದೂರದ ಪ್ರದೇಶದಿಂದ ಬರುತ್ತಾರೆ. ಜೀವನದಲ್ಲಿ ಕಠಿಣ ಅನುಷ್ಠಾನಗಳನ್ನು ಇಟ್ಟುಕೊಂಡವರು ಇಲ್ಲಿ ತಂಗಲು ಪರದಾಡುತ್ತಾರೆ. ಅಂಥವರು ದೇವರ ದರ್ಶನವನ್ನು ಸುಖವಾಗಿ ಮಾಡಲು ಮಠವು ಸುಸಜ್ಜಿತ ವಸತಿಗೃಹಗಳನ್ನು ನಿರ್ಮಿಸಿದೆ. ಇಲ್ಲಿ ನಿತ್ಯವೂ ಅನ್ನದಾನದ ಸೇವೆ ನಡೆಯಲಿದೆ ಎಂದರು.
ಗುರುಮುಖದಿಂದ ಜ್ಞಾನ ಪಡೆಯುವುದು ಅತ್ಯಂತ ಶ್ರೇಷ್ಠ. ಇದು ಸಾಧನೆಗೆ ಮಹೋನ್ನತ ಮಾರ್ಗವನ್ನು ತೋರಲಿದೆ. ತಿರುಮಲ ಬೆಟ್ಟದಲ್ಲಿ ಶ್ರೀನಿವಾಸನ ದರ್ಶನ ಮಾಡಿ ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳನ್ನು ಬೇಡಬೇಕು. ಇದು ಮೋಕ್ಷಕ್ಕೂ ರಹದಾರಿಯಾಗಬೇಕು. ಆಗಲೇ ಬದುಕು ಸಾರ್ಥಕವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಮಹತ್ತರ ಸೇವೆ: ಮುಖ್ಯ ಅತಿಥಿ, ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ ಮಾತನಾಡಿ, ತಿರುಪತಿ ತಿಮ್ಮಪ್ಪನಿಗೆ 12 ವರ್ಷಗಳ ಕಾಲ ವಿಶೇಷ ಸೇವೆ ಸಲ್ಲಿಸಿ, ಪುರಾತನ ದೇಗುಲದ ಮಹತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಶ್ರೀ ವ್ಯಾಸರಾಜರು ಮಹತ್ತರ ಸೇವೆ ಸಲ್ಲಿಸಿದ್ದಾರೆ ಎಂದರು.
ಪ್ರಸ್ತುತ ತಿರುಮಲದ ಹತ್ತು ಹಲವು ಸೇವಾ ಚಟುವಟಿಕೆಗಳಲ್ಲಿ ಶ್ರೀ ವ್ಯಾಸರಾಜಮಠದ ವಿದ್ವತ್‌ಪೂರ್ಣ ಸಲಹೆ, ಸಹಕಾರಗಳು ದೊರಕುತ್ತಿರುವುದು ನಮ್ಮೆಲ್ಲರ ಸುಕೃತ. ಇಂದು ಟಿಟಿಡಿ ವಿಶ್ವಖ್ಯಾತಿ ಪಡೆದಿದೆ ಎಂದರೆ ಅದಕ್ಕೆ ಶ್ರೀ ವ್ಯಾಸರಾಜಮಠದ ಪರಂಪರೆಯ ಯತಿಗಳ ಅನನ್ಯ ಸೇವೆಯೇ ಕಾರಣ ಎಂದರು.
ಅಹ್ನೀಕ ಮಂಟಪದ ಪುನರುತ್ಥಾನ: ಸ್ವಾಮಿ ಪುಷ್ಕರಣಿ ತೀರದಲ್ಲಿರುವ ಶ್ರೀ ವ್ಯಾಸರಾಜರ ಅಹ್ನೀಕ ಮಂಟಪ ಸದ್ಯಶಿಥಿಲಾವಸ್ಥೆಯಲ್ಲಿದ್ದು, ಇದನ್ನು ಟಿಟಿಡಿ ವತಿಯಿಂದ ಸಮಗ್ರವಾಗಿ ಪುನರುತ್ಥಾನ ಮಾಡಲಾಗುವುದು ಎಂದು ಧರ್ಮಾರೆಡ್ಡಿ ಭರವಸೆ ನೀಡಿದರು.
ಕನ್ನಡದಲ್ಲೂ ಜ್ಞಾನ ಪ್ರಸಾರ: ಶ್ರೀ ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ನಿರ್ದೇಶಕ ಡಾ. ಆನಂದತೀರ್ಥ ನಾಗಸಂಪಿಗೆ ಮತನಾಡಿ, ಮಧ್ವಶಾಸ್ತçಕ್ಕೆ ವ್ಯಾಸರಾಜರು ಹಲವು ರೀತಿಯಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ. ಕನ್ನಡದಲ್ಲಿಯೂ ಈ ಎಲ್ಲ ಗ್ರಂಥಗಳನ್ನು ಪ್ರಕಟಿಸಿರುವುದು ಈ ಸಂಸ್ಥಾನದ ಹೆಮ್ಮೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಮತ್ತು ಶ್ರೀ ವ್ಯಾಸರಾಜಮಠದ ಮುಖ್ಯ ಆಡಳಿತಾಧಿಕಾರಿ ಸುರಂಜನ್, ಮಠದ ದಿವಾನರಾದ ಡಾ. ಎ.ಪಿ. ವಿಜೇಂದ್ರಾಚಾರ್, ಬ್ರಹ್ಮಣ್ಯಾಚಾರ್, ಮಠದ ಸಲಹಾ ಸಮಿತಿ ಸದಸ್ಯ ನಾಗೇಂದ್ರ ಪ್ರಸಾದ್, ನಿವೃತ್ತ ನ್ಯಾಯಾಧೀಶ ಸುಧೀಂದ್ರ, ಟಿಟಿಡಿ ಮಂಡಳಿ ಸದಸ್ಯ ಡಿ.ಪಿ. ಅನಂತಾಚಾರ್ಯ, ಮೈಸೂರಿನ ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧು ಸೂದನಾಚಾರ್ಯ ಮತ್ತಿತರರು ಇದ್ದರು.
ನಂತರ ಶ್ರೀವಿದ್ಯಾಶ್ರೀಶ ತೀರ್ಥರಿಗೆ ಟಿಟಿಡಿ ಸಕಲ ಗೌರವಾದರಗಳೊಡನೆ ಶ್ರೀ ವೆಂಕಟೇಶ್ವರನ ದರ್ಶನ ಮಾಡಿಸಿ ಮಹಾ ಪ್ರಸಾದ ನೀಡಲಾಯಿತು.