ಬೆಂಗಳೂರು: ಕರ್ನಾಟಕ ಜಲ ಸಂರಕ್ಷಣಾ ಸಮಿತಿಯು ಕನ್ನಡ ಚಳವಳಿ ಕೇಂದ್ರ ಸಮಿತಿ ಸಂಘಟನೆಗಳ ಒಕ್ಕೂಟದಿಂದ ನಡೆದ ಎರಡನೇ ದಿನದ ಪ್ರತಿಭಟನಾ ಧರಣಿ ಯಶಸ್ವಿಯಾಗಿದ್ದು ಮೂರನೇ ದಿನಕ್ಕೆ ಕಾಲಿಟ್ಟಿದೆ.
ಇಂದಿನ ಧರಣಿಯನ್ನು ಕನ್ನಡ ಚಳವಳಿ ಮುಖಂಡ ಗುರುದೇವ ನಾರಾಯಣ್ ನೇತೃತ್ವದಲ್ಲಿ ನಡೆಸಲಾಯಿತು. ರೈತ ಮುಖಂಡ ಕುರುಬೂರು ಶಾಂತಕುಮಾರ್ ಆರಂಭದಲ್ಲಿ ಮಾತನಾಡಿ, ನಾವು ಜನರಿಗೆ ಕುಡಿಯುವ ನೀರು ಉಳಿಸಿ ಎಂದು ಹೋರಾಟ ಮಾಡಿದರೆ ರಾಜ್ಯ ಸರ್ಕಾರ 1000 ಮದ್ಯದ ಅಂಗಡಿಗಳನ್ನು ತೆರೆಯುತ್ತೇವೆ ಮದ್ಯ ಕುಡಿದು ತೃಪ್ತರಾಗಿ ಎನ್ನುತ್ತಾ ಹೋರಾಟವನ್ನು ನಿರ್ಲಕ್ಷಿಸುತ್ತಿದೆ ಎಂದು ಆಸಮಾಧಾನ ವ್ಯಕ್ತಪಡಿಸಿದರು.
ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಪಂಜಾಬ್, ಹರಿಯಾಣದಲ್ಲಿ ಸಟ್ಲೆಜ್ ನದಿಯ ನೀರಿನ ವಿವಾದದಲ್ಲಿ ಇದೇ ರೀತಿ 80ರಲ್ಲಿ ಸಮಸ್ಯೆ ಬಂದಾಗ ಪಂಜಾಬ್ ಸರ್ಕಾರ ಆದೇಶ ಧಿಕ್ಕರಿಸಿತು. ಅಲ್ಲಿನ ಮುಖ್ಯಮಂತ್ರಿಯನ್ನು ಜೈಲಿಗೆ ಕಳಿಸಿಲ್ಲ ಅಂತಹ ಆತಂಕ ನಮ್ಮ ಮುಖ್ಯಮಂತ್ರಿಗಳಿಗೆ ಬೇಡ ದೃಢ ನಿರ್ಧಾರ ಕೈಗೊಳ್ಳಿ ನೀರು ನಿಲ್ಲಿಸಿ ಎಂದು ಎಚ್ಚರಿಸಿದರು.
ಧರಣಿಯಲ್ಲಿ ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು, ಭಾಗವಹಿಸಿದ್ದರು. ಸಾಹಿತಿ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಮಳೆ ಬರಲು ಅರಣ್ಯ ಮುಖ್ಯ ಅದರ ರಕ್ಷಣೆಯು ಕೂಡ ಅಷ್ಟೇ ಜವಾಬ್ದಾರಿ ಅದನ್ನು ರಕ್ಷಿಸಿ ಮಳೆ ಬಂದ ನೀರನ್ನು ತಮಿಳುನಾಡಿನವರು ಯಾವುದೇ ಖರ್ಚಿಲ್ಲದೆ ದಬ್ಬಾಳಕಿ ಎಸೆಗೆ ನೀರು ಪಡೆಯುತ್ತಿದ್ದಾರೆ ಇದು ಸರಿಯಾದ ಕ್ರಮ ಅಲ್ಲ ಪ್ರಕೃತಿಯನ ಕಾಪಾಡಲು ಅವರು ಸಹ ಸಾವಿರಾರು ಕೋಟಿ ರೂ. ಅನುದಾನ ನೀಡಿ ಸಹಕರಿಸಲಿ ನಂತರ ನೀರಿನ ಪಾಲು ಕೇಳಲಿ ಈ ಬಗ್ಗೆ ಸರ್ಕಾರಗಳು ನ್ಯಾಯಾಲಯಕ್ಕೆ ತಿಳಿಸಬೇಕು ಎಂದರು.
ಮುಖ್ಯ ಹಿರಿಯ ಕನ್ನಡಪರ ಹೋರಾಟಗಾರರಾದ ನಮ್ ವಿಜಯ್ ಕುಮಾರ್, ನಾ.ಶ್ರೀಧರ್ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ, ಸಾರಿಕಾ, ಎಂ.ಬಿ.ವಿಜಯಲಕ್ಷ್ಮೀ ಇತರರು ಭಾಗವಹಿಸಿದ್ದರು. ನಾಡಗೀತೆಯೊಂದಿಗೆ ಧರಣಿ ಆರಂಭವಾದ ಧರಣಿಯಲ್ಲಿ ಕಾವೇರಿ ನಮ್ಮದು, ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷಣೆ ಕೂಗಲಾಯಿತು. ಮೂರು ಗಂಟೆ ತನಕ ನೂರಾರು ಮಹಿಳೆಯರು ಪ್ರತಿಭಟನೆಗೆ ಸಾಥ್ ನೀಡಿದರು.
ಹರಿಸುತ್ತಿರುವ ನೀರು ನಿಲ್ಲಿಸಿ: ಕಾವೇರಿ ನೀರಿನ ಅವೈಜ್ಞಾನಿಕ ತೀರ್ಪಿನ ವಿರುದ್ಧ ಸೆ.26ರಂದು ಬೆಂಗಳೂರು ಬಂದ್ ಮಾಡಿದ್ದು 29ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ, ವಿಶೇಷ ವಿಧಾನ ಮಂಡಲದ ಅಧಿವೇಶನ ಕರೆದು ಸಂಕಷ್ಟ ಸೂತ್ರ ಜಾರಿ ಆಗುವ ತನಕ ನೀರು ಬಿಡುವುದಿಲ್ಲ ಎನ್ನುವ ನಿರ್ಣಯ ಕೈಗೊಳ್ಳಬೇಕು.
ಕಾವೇರಿ ನೀರು ನಿರ್ವಹಣಾ ಮಂಡಳಿ ಕುರುಡು ಆದೇಶ ಆವೈಜ್ಞಾನಿಕ ತೀರ್ಪುಗಳನ್ನು ನೀಡುತ್ತಿರುವ ಕಾರಣ ಈ ಮಂಡಳಿಯನ್ನು ರದ್ದು ಮಾಡಿ ಸ್ವತಂತ್ರ ಕಾರ್ಯನಿರ್ವಹಣೆ ಮಾಡುವ ಚುನಾವಣಾ ಆಯೋಗದ ರೀತಿ ಕಾರ್ಯನಿರ್ವಹಿಸುವ ನೀರು ನಿರ್ವಹಣ ಪ್ರಾಧಿಕಾರ ರಚಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಿಕೊಳ್ಳಲು, ಮಳೆ ಹೆಚ್ಚು ಬಂದಾಗ ನೀರು ಸಂಗ್ರಹಿಸಿಕೊಳ್ಳಲು ಮೇಕೆದಾಟು ನಿರ್ಮಾಣ ತಕ್ಷಣ ಕಾರ್ಯಾರಂಭ ಮಾಡಲು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ.