ಬೆಂಗಳೂರು: ರಾಜ್ಯ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಯನ್ನು ಈಡೇರಿಸಲು ಸರ್ಕಾರ ಮುಂದಾಗದ ಕಾರಣ ಇದೇ ಮಾ.24ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳು ಶನಿವಾರ ಸಂಜೆ ಧರಣಿ ಸ್ಥಳದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಮತ್ತು ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸತತ ಮೂರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು ಕೂಡ 2023-24 ರ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಸರ್ಕಾರ ಕೊಟ್ಟ ಲಿಖಿತ ಭರವಸೆ ಈಡೇರಿಸದ ಕಾರಣ ಅನಿವಾರ್ಯವಾಗಿ ಮಾ. 24 ರಿಂದ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಸರ್ಕಾರ 2020 ಡಿಸೆಂಬರ್‌ನಲ್ಲಿ ಮತ್ತು 2021 ಏಪ್ರೀಲ್ ತಿಂಗಳ ಸಾರಿಗೆ ಮುಷ್ಕರದ ಸಮಯದಲ್ಲಿ ಅಂದಿನ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು (ಅಂದಿನ ಗೃಹ ಮಂತ್ರಿಗಳಾಗಿದ್ದ ಹಾಗೂ ಹಾಲಿ ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ) ನಡೆದ ಸಂಧಾನ ಸಭೆಯಲ್ಲಿ ಸರ್ಕಾರ ಸಾರಿಗೆ ನೌಕರರಿಗೂ 6ನೇ ವೇತನ ಆಯೋಗ ಮಾದರಿಯಲ್ಲಿ ವೇತನ ನೀಡುವುದಾಗಿ ಲಿಖಿತ ಭರವಸೆ ಕೊಟ್ಟು ಮೂರು ತಿಂಗಳ ಒಳಗೆ ಈಡೇರಿಸುವುದಾಗಿ ತಿಳಿಸಿದ್ದರು.
ಅಂದಿನ ಸಾರಿಗೆ ಸಚಿವರು ಅನೇಕ ಬಾರಿ ಮಾಧ್ಯಮಗಳಲ್ಲಿ 6 ನೇ ವೇತನ ಆಯೋಗ ಮಾದರಿಯಲ್ಲಿ ಸಾರಿಗೆ ನೌಕರರಿಗೆ ವೇತನ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿಕೆ ನೀಡಿ ಕೊನೆಗೆ ತೆಗೆದುಕೊಂಡ ಕಾಲಾವಧಿಯಲ್ಲಿ ಈಡೇರಿಸದ ಕಾರಣ ಏಪ್ರಿಲ್-2021 ಸಾರಿಗೆ ಮುಷ್ಕರ ಮಾಡಬೇಕಾದ ಸನ್ನಿವೇಶವನ್ನು ಸರ್ಕಾರವೇ ನಿರ್ಮಾಣ ಮಾಡಿತ್ತು.
ಬಸವರಾಜ ಎಸ್. ಬೊಮ್ಮಾಯಿ ಅವರು ಮುಖ್ಯ ಮಂತ್ರಿ ಹಾಗೂ ಶ್ರೀರಾಮುಲು ಅವರು ಸಾರಿಗೆ ಸಚಿವರಾದ ಮೇಲೆ ಕೊಟ್ಟ ಭರವಸೆಯನ್ನು ಈಡೇರಿಸುವಂತೆ ಮತ್ತು ನೌಕರರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸತತ ಮೂರು ವರ್ಷಗಳಿಂದ ಸರ್ಕಾರ ಮತ್ತು ಆಡಳಿತ ಮಂಡಳಿಯ ಗಮನ ಸೆಳೆಯಲಾಗಿದೆ.
ಅಲ್ಲದೆ ರಾಜ್ಯದಾದ್ಯಂತ ನೌಕರರಿಂದ ವೈಯುಕ್ತಿಕ ಅಭಿಪ್ರಾಯ ಸಂಗ್ರಹಕ್ಕಾಗಿ ಮೊಬೈಲ್ ಆಧಾರಿತ ವೋಟಿಂಗ್ ಮಾಡಿದ ಸಂದರ್ಭದಲ್ಲಿ ಸಂಸ್ಥೆಯ ಬಹುಪಾಲು ನೌಕರರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದು ವೇತನ ಆಯೋಗ ಮಾದರಿಯಲ್ಲಿ ಸರ್ಕಾರಿ ನೌಕರರ ಸರಿ ಸಮಾನವಾದ ವೇತನವನ್ನು ನಮಗೂ ಜಾರಿಮಾಡಬೇಕು ಹಾಗೂ ಕಾರ್ಮಿಕ ಸಂಘಟನೆಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಈ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು, ಹಲವು ಶಾಂತಿಯುತ ಹೋರಾಟಗಳಾದ ಸೈಕಲ್ ಜಾಥಾ, ಜಾಗೃತಿ ಸಮಾವೇಶ, ಉಪವಾಸ ಸತ್ಯಾಗ್ರಹ, ಕ್ಯಾಂಡಲ್ ಮಾರ್ಚ್ – ಪತ್ರ ಚಳವಳಿ, ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆ ಹೀಗೆ ಅನೇಕ ಶಾಂತಿಯುತ ಹೋರಾಟಗಳನ್ನು ಮಾಡಿದರೂ ಕೂಡ ಕೊಟ್ಟ ಲಿಖಿತ ಭರವಸೆಯನ್ನು ಸದನದ ಒಳಗಾಗಲೀ ಇಲ್ಲ ಹೊರಗಾಗಲೀ ಈಡೇರಿಸಿಲ್ಲ.
ಕಳೆದ ಕೆಲವು ತಿಂಗಳ ಹಿಂದೆ ಸಾರಿಗೆ ಸಚಿವರು ಬಹಿರಂಗ ಸಭೆಗಳಲ್ಲಿ ಮತ್ತು ಮಾಧ್ಯಮಗಳ ಮುಂದೆ ಸಾರಿಗೆ ನೌಕರರನ್ನು 7 ನೇ ವೇತನ ಆಯೋಗದಲ್ಲಿ ಸೇರ್ಪಡೆ ಮಾಡುವುದು, ನನ್ನ ಕಮಿಟ್‌ಮೆಂಟ್ (ಜವಾಬ್ದಾರಿ) ಎಂದು ಹೇಳಿದ್ದರು. ಆದರೆ, ಈ ಸರ್ಕಾರದ ಕೊನೆಯ ಬಜೆಟ್‌ನಲ್ಲೂ ಸಾರಿಗೆ ನೌಕರರಿಗೆ ನೀಡಿದ ಭರವಸೆಯನ್ನು ಕೈ ಬಿಟ್ಟಿದ್ದು, ಸಾರಿಗೆ ಸಂಸ್ಥೆಯ 1.07 ಲಕ್ಷ ಸಾರಿಗೆ ನೌಕರರು ಮತ್ತು ಕುಟುಂಬ ಸದಸ್ಯರಿಗೆ ಭಾರಿ ನಿರಾಸೆಯನ್ನುಂಟು ಮಾಡಿದ್ದಾರೆ.
ಹೀಗೆ ಸರ್ಕಾರ ಸಾರಿಗೆ ನೌಕರರನ್ನು ಕಡೆಗಣಿಸುತ್ತಿರುವುದನ್ನು ಖಂಡಿಸಿ ಹಾಗೂ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ವತಿಯಿಂದ ಸಾರಿಗೆ ನೌಕರರು ಮತ್ತು ಕುಟುಂಬ ಸದಸ್ಯರು ಮಾ.1ರಿಂದ ಅನಿದಿರ್ಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೆವು.
ಆದರೆ ಸರ್ಕಾರ 2 ದಿನ ಕಳೆದರು ಯಾವುದೇ ರೀತಿಯ ಭರವಸೆಗಳ ಈಡೇರಿಕೆಗೆ ಮುಂದಾಗದ ಕಾರಣ, ಮಾ.3 ರಂದು ಸಂಘದ ತುರ್ತು ಕಾರ್ಯಕಾರಿಣಿ ಸಭೆ ಕರೆದು ಎಲ್ಲ ವಿಭಾಗದ ನೌಕರರ, ಪದಾಧಿಕಾರಿಗಳ ಸಲಹೆಗಳನ್ನು ಸ್ವೀಕರಿಸಿದ ನಂತರ ಒಮ್ಮತದಿಂದ ಮಾ.4ರ ಸಂಜೆ 5 ಗಂಟೆಯ ಒಳಗೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿದ್ದ ಬಗ್ಗೆ ಲಿಖಿತವಾಗಿ ತಿಳಿಸಬೇಕು ಎಂದು ಗಡುವು ನೀಡಲಾಗಿತ್ತು. ಆದರೆ ಸರ್ಕಾರ ಈ ಬಗ್ಗೆ ಉದಾಸೀನತೆ ತೋರಿದ ಕಾರಣ ಇದೇ ಮಾ.24 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡುತ್ತಿದ್ದೇವೆ ಎಂದು ಪದಾಧಿಕಾರಿಗಳು ತಿಳಿಸಿ, ಧರಣಿ ಸತ್ಯಾಗ್ರಹವನ್ನು ಕೈ ಬಿಟ್ಟಿರುವುದಾಗಿ ಘೋಷಿಸಿದರು.