ಮೈಸೂರು: ಕರ್ನಾಟಕದ ಜೀವನದಿ ಕಾವೇರಿಯ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಮೈಸೂರು ಬ್ರಾಹ್ಮಣ ಸಂಘದ ನೇತೃತ್ವದಲ್ಲಿ ವಿಪ್ರ ಸಮುದಾಯದವರು ಜಾಗಟೆ ಬಾರಿಸಿ ಶಂಖ ಊದಿ ಸಾಮೂಹಿಕ ಭಜನೆ ಮಾಡಿ ಮೈಸೂರು ಜಿಲ್ಲಾ ಪಂಚಾಯತ್ ಎದುರು ವಿನೂತನ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ಕನ್ನಡ ನೆಲ ಜಲ ಭಾಷೆ ವಿಚಾರವಾಗಿ ಧಕ್ಕೆ ಬಂದಾಗ ಪ್ರತಿಭಟಿಸುವುದು ನ್ಯಾಯ ಕೇಳುವುದು ಪ್ರತಿಯೊಬ್ಬ ಕನ್ನಡಿಗರ ಹಕ್ಕು, ಸುಪ್ರೀಂಕೋರ್ಟ್ ತೀರ್ಪಿಗೆ ತಲೆಬಾಗಬೇಕು ನಿಜ ಆದರೆ ವಾಸ್ತವತೆ ವೈಜ್ಞಾನಿಕತೆ ವಿಷಯವನ್ನ ಅರಿವು ಮಾಡಿಕೊಡಬೇಕಾಗಿರುವುದು ನಮ್ಮ ಕರ್ನಾಟಕದ ಜನಪ್ರತಿನಿಧಿಗಳ ಕರ್ತವ್ಯವಾಗಿದೆ.
ಈ ಹಿಂದೆಯೂ ಕರ್ನಾಟಕಕ್ಕೆ ತಮಿಳುನಾಡು ಸರ್ಕಾರ ನೀರಿಗಾಗಿ ಖ್ಯಾತೆ ತೆಗೆದಾಗ ಅಂದು ಮಾಜಿ ಪ್ರಧಾನಿ ಹೆಚ್.ಡಿ ದೇವಗೌಡ ಮತ್ತು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ರವರ ನೇತೃತ್ವದಲ್ಲಿ ಕರ್ನಾಟಕದ ಸಮಸ್ತ ಜನಪ್ರತಿನಿಧಿಗಳ ನಿಯೋಗ ರಾಷ್ಟ್ರಪತಿ ರಾಜ್ಯಪಾಲರ ಬಳಿ ಕರ್ನಾಟಕದ ಸಮಸ್ಯೆಯನ್ನು ತಿಳಿಸಿ ನ್ಯಾಯ ಕೊಡಿಸಿದ್ದರು, ಇಂದು ಅಂತಹ ಆರೋಗ್ಯಕರ ಸಮನ್ವಯ ಕಾಣದಿರುವುದು ಬೇಸರದ ಸಂಗತಿ ಎಂದರು. ಮತ್ತೊಮ್ಮೆ ನ್ಯಾಯಾಲಯ ಕಾವೇರಿ ತೀರ್ಪನ್ನು ಪರಿಶೀಲಿಸಿ ಕನ್ನಡಿಗರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನಂ.ಶ್ರೀಕಂಠಕುಮಾರ್ ಮಾತನಾಡಿ ಮೇಕೆದಾಟು ಯೋಜನೆ ಜಾರಿಗೆ ತರುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅದನ್ನ ಕಾರ್ಯರೂಪಕ್ಕೆ ತರಲು ಮುಂದಾಗಬೇಕು, ಇದರಿಂದ ರೈತಾಪಿ ವರ್ಗಕ್ಕೆ ಮತ್ತು ಕುಡಿಯುವ ಸಹಾಯವಾಗುತ್ತದೆ ಎಂದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಮಾಜಿನಗರ ಪಾಲಿಕಾ ಸದಸ್ಯರಾದ ಎಂ.ಡಿ. ಪಾರ್ಥಸಾರಥಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷರಾದ ಎಚ್ ಎನ್ ಶ್ರೀಧರ್ ಮೂರ್ತಿ, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಕಡಕೋಳ ಜಗದೀಶ್, ಜಯಸಿಂಹ ಶ್ರೀಧರ್, ಶ್ರೀನಿವಾಸ್ ಬಾಷ್ಯಂ, ಓಂ ಶ್ರೀನಿವಾಸ್, ಅಪೂರ್ವ ಸುರೇಶ್, ಶ್ರೀಕಾಂತ್ ಕಶ್ಯಪ್ ಸೇರಿದಂತೆ ಹಲವರು ಇದ್ದರು.