
ಬೆಂಗಳೂರು: ಕೇಂದ್ರ ಸರ್ಕಾರ ನಿವೃತ್ತ ನೌಕರರಿಗೆ ಒಳ್ಳೆ ಪಿಂಚಣಿ ಕೊಡುತ್ತೇವೆ ಎಂದು ಹೇಳಿಕೊಂಡು ಬಂದು ಮಹಾಮೋಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ “ನಿಧಿ ಆಪ್ಕೆ ನಿಕಟ್” ಇಪಿಎಸ್ ಪಿಂಚಣಿದಾರರು ವಿನೂತನ ಪ್ರತಿಭಟನೆ ಮೂಲಕ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.
ಇದೇ ಫೆಬ್ರವರಿ 27 ರಂದು ಬೆಳಗ್ಗೆ 11 ಗಂಟೆಗೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಹಾಗೂ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರದ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನು ಇಪಿಎಸ್ ಪಿಂಚಣಿದಾರರ ನಿರೀಕ್ಷೆಗಳು ಇನ್ನೂ ಸಕಾರ ಗೊಳ್ಳಲಿಲ್ಲ ಎಂದು ಯಾರೂ ಧೃತಿಗೆಡಬಾರದು. ರಾಷ್ಟ್ರೀಯ ಆಂದೋಲನ ಸಮಿತಿಯ ಅಧ್ಯಕ್ಷ ಕಮಾಂಡರ್ ಅಶೋಕ್ ರಾಹುತ್ ಅವರ ನೇತೃತ್ವದ ತಂಡ ಇದೇ ಫೆಬ್ರವರಿ 20ರಂದು, ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ಸಚಿವ (minister for labour & employment) ಮಸ್ಸುಖ್ ಮಾಂಡವಿಯ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಪತ್ರ ನೀಡಿ, ವಿಸ್ತೃತವಾಗಿ ಚರ್ಚಿಸಿದ್ದಾರೆ.
ಅದಕ್ಕೆ ಪ್ರತಿಯಾಗಿ ಕೇಂದ್ರ ಕಾರ್ಮಿಕ ಇಲಾಖೆಯು ಪತ್ರಿಕಾ ಪ್ರಕಟಣೆ ಹೊರಡಿಸಿ, ಎರಡನೇ ಹಂತದ ಪಾರ್ಲಿಮೆಂಟ್ ಬಜೆಟ್ ಅಧಿವೇಶನ ಇದೇ ಮಾರ್ಚ್ 10 ರಿಂದ ಪ್ರಾರಂಭವಾಗಲಿದ್ದು ಅದಯ ಏಪ್ರಿಲ್ 04 ಕ್ಕೆ ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ, 78 ಲಕ್ಷ ಇಪಿಎಸ್ ನಿವೃತ್ತರ ಬಹು ನಿರೀಕ್ಷಿತ ಬೇಡಿಕೆಗಳನ್ನು ಈಡೇರಿಸಿ ಕೊಡುತ್ತೇವೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಇದನ್ನು ಗಮನಿಸಿದ ಎಲ್ಲ ಇಪಿಎಸ್ ನಿವೃತ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದೆ.
ಪ್ರತಿ 10 ವರ್ಷಗಳಿಗೊಮ್ಮೆ ಇಪಿಎಸ್ ಕಾಯಿದೆಯಲ್ಲಿ ಮಾರ್ಪಾಡು ಮಾಡಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ಪಿಂಚಣಿಯನ್ನು ಮಾರ್ಪಾಡು ಮಾಡಿ, ಸವಲತ್ತುಗಳನ್ನು ನೀಡಬೇಕೆಂಬ ನಿಯಮ ಇದ್ದು, ಅದರಂತೆ ಕೇಂದ್ರ ಸರ್ಕಾರ ಕ್ರಮವಹಿಸಿ, ಈ ಕೂಡಲೇ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಿ ಕೊಡಬೇಕು.
ಇಪಿಎಫ್ಒ ಅಧಿಕಾರಿಗಳು ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸಿ, ಅಧಿಕ ಪಿಂಚಣಿಗೆ ವಿನಾಯ್ತಿ ಸಂಸ್ಥೆಯ (exempted organization) ಇಪಿಎಸ್ ನಿವೃತ್ತರು ಅರ್ಹರಲ್ಲ ಎಂದು ಹೊರಡಿಸಿರುವ ಸುತ್ತೋಲೆ (circular) ಖಂಡನೀಯ. ಇದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಎರಡನೇ ಸುತ್ತಿನ ಹೋರಾಟಕ್ಕೆ ಉದ್ಯೋಗದಾತರು (employer) ಹಾಗೂ ಸಂಸ್ಥೆಗಳ ನಿವೃತ್ತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಪ್ರತಿಭಟನೆ ಮಹತ್ವದ್ದು: ದೇಶಾದ್ಯಂತ ಇರುವ ಎಲ್ಲ 78 ಲಕ್ಷ ಇಪಿಎಸ್ ನಿವೃತ್ತ ನೌಕರರಾದ ನಾವೆಲ್ಲರೂ ಒಂದೇ. ಕಮಾಂಡರ್ ಅಶೋಕ ರಾವತ್ ಅವರ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದ್ದು, ನಾವೆಲ್ಲರೂ ಶಕ್ತಿ ಪ್ರದರ್ಶನದ ಮೂಲಕ ಈ ಆಂದೋಲನದಲ್ಲಿ ಭಾಗಿಯಾಗೋಣ. ಫೆಬ್ರವರಿ 28ರಂದು ದೆಹಲಿಯಲ್ಲಿ ಸಿಬಿಟಿ ಸಭೆ ಇದ್ದು, ನಂತರ ಎರಡನೇ ಹಂತದ ಬಜೆಟ್ ಅಧಿವೇಶನ ಇರುವುದರಿಂದ ಈ ಪ್ರತಿಭಟನಾ ಸಭೆ ಹಾಗೂ ಮನವಿ ಸಲ್ಲಿಸುವ ಕಾರ್ಯಕ್ರಮ ಮಹತ್ವದ್ದಾಗಿದೆ.
ಹೀಗಾಗಿ ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್ಆರ್ಟಿಸಿ ಹಾಗೂ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಇಪಿಎಸ್ ಪಿಂಚಣಿದಾರರ ವಿನೂತನ ಪ್ರತಿಭಟನಾ ಸಭೆ ಹಾಗೂ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮವನ್ನು ಫೆ.27ರಂದು ಹಮ್ಮಿಕೊಂಡಿದ್ದು ಪ್ರತಿಯೊಬ್ಬರು ಬಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ, ಇತರೆ ಮುಖಂಡರು ಹಾಗೂ ನಮ್ಮ ಸಂಘದ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲ ಇಪಿಎಸ್ ನಿವೃತ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಮುಖಂಡರು ಪ್ರಚಲಿತ ಸಂಗತಿ ಹಾಗೂ ನಮ್ಮ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಪ್ರಸ್ತುತಪಡಿಸಲಿದ್ದಾರೆ.