ಬೇಲೂರು: ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಕಾಫಿ ತೋಟ ಸೇರಿದಂತೆ ರೈತರ ಜಮೀನುಗಳಿಗೆ ನುಗ್ಗುತ್ತಿರುವ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು, ಕಾರ್ಯಾಚರಣೆಗಾಗಿ ಒಂಬತ್ತು ಸಾಕಾನೆಗಳನ್ನು ತರಲಾಗಿದ್ದು, ಅವು ಕಾರ್ಯಾಚರಣೆ ಆರಂಭಿಸಿವೆ.
ಬೇಲೂರು ತಾಲೂಕು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಜನ ತತ್ತರಿಸಿದ್ದು, ಈ ಹಿನ್ನೆಲೆಯಲ್ಲಿ ಸಾಕಾನೆಗಳ ಮೂಲಕ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಮುಂದಾಗಿದ್ದು, ಈ ಕಾರ್ಯಾಚರಣೆಗೆ ತಾಲೂಕಿನ ಬಿಕ್ಕೋಡು ಸಮೀಪ ಶಾಸಕ ಎಚ್.ಕೆ.ಸುರೇಶ್ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ್ ನೇತೃತ್ವದಲ್ಲಿ ಸಾಕಾನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಹಿಂಡು ಹಿಂಡಾಗಿ ಕಾಡಿನಿಂದ ಬರುತ್ತಿರುವ ಕಾಡಾನೆಗಳು ಸಾಕಷ್ಟು ಬೆಳೆ ನಷ್ಟ ಮಾಡಿರುವುದಲ್ಲದೆ, ಪ್ರಾಣ ಹಾನಿಗೂ ಕಾರಣವಾಗಿವೆ. ಜತೆಗೆ ಕಾಡಾನೆಗಳು ಜಮೀನು ತೋಟಗಳಲ್ಲಿ ಬೀಡು ಬಿಡುತ್ತಿರುವುದರಿಂದ ಬೆಳೆಗಾರರು, ರೈತರು, ಕೂಲಿ ಕಾರ್ಮಿಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಉಪಟಳದಿಂದ ರೋಸಿ ಹೋಗಿದ್ದಾರೆ.
ರೈತರು ಸೇರಿದಂತೆ ಸಾರ್ವಜನಿಕರು ಮೇಲಿಂದ ಮೇಲೆ ಪ್ರತಿಭಟನೆ ನಡೆಸಿ ಕಾಡಾನೆಗಳ ಉಪಟಳದಿಂದ ಮುಕ್ತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಲೇ ಬರುತ್ತಿದ್ದಾರೆ. ಇದೀಗ ಎಚ್ಚೆತ್ತುಕೊಂಡಿರುವ ಸರ್ಕಾರ ತೋಟಗಳಲ್ಲಿ ಬೀಡು ಬಿಟ್ಟಿರುವ ಆನೆಗಳ ಪೈಕಿ 9 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಉದ್ದೇಶದಿಂದ ಸಾಕಾನೆಗಳನ್ನು ಕರೆ ತಂದು ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಎಚ್.ಕೆ.ಸುರೆಶ್ ಅವರು, ಬೇಲೂರು ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದರಿಂದಾಗಿ ರೈತರು ಬೆಳೆಗಳು ನಷ್ಟವಾಗುತ್ತಿದ್ದು, ಬೆಳೆದ ಬೆಳೆಯನ್ನು ತಿಂದು, ತುಳಿದು ಹಾನಿಮಾಡುತ್ತಿವೆ. ಜತೆಗೆ ಜನರ ಜೀವಕ್ಕೂ ಕಂಟಕವಾಗಿವೆ. ಹೀಗಾಗಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ. ಇದರಿಂದ ಅವುಗಳ ಮಾಹಿತಿ ದೊರೆಯಲಿದೆ. ಆದರೆ ಇಷ್ಟಕ್ಕೆ ಸುಮ್ಮನಾಗದೆ ಮುಂದಿನ ದಿನಗಳಲ್ಲಿ ಯಾವುದೇ ಪ್ರಾಣ ಹಾನಿಯಾಗದಂತೆ ಎಚ್ಚರ ವಹಿಸಬೇಕಿದೆ ಎಂದರು.
ಅರಣ್ಯ ಇಲಾಖೆ ಕಾಡಾನೆಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವ ಮೂಲಕ ತಾಲೂಕಿನ ಮಲೆನಾಡು ಭಾಗದ ಬೆಳೆಗಾರರು, ರೈತರು, ಕೂಲಿ ಕಾರ್ಮಿಕರು ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಲು ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.