ಬೆಂಗಳೂರು: ಮಹದೇವಪುರ ಕ್ಷೇತ್ರದಲ್ಲಿ 14.95 ಕೋಟಿ ರೂಪಾಯಿ ಮೊತ್ತದ ರಾಜಕಾಲುವೆ ಕಾಮಗಾರಿ ನಡೆದಿದ್ದರೂ ಕ್ಷೇತ್ರದ ಹಲವು ಭಾಗ ಮುಳುಗಡೆಯಾಗಿರುವುದಕ್ಕೆ ಶಾಸಕ ಅರವಿಂದ್ ಲಿಂಬಾವಳಿ ಉತ್ತರ ನೀಡಬೇಕೆಂದು ಮಹದೇವಪುರ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಆಗ್ರಹಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ನೇರಪ್ರಸಾರವಾಗಿ ಮಾತನಾಡಿದ ಅಶೋಕ್ ಮೃತ್ಯುಂಜಯ, “2020ರಲ್ಲಿ ಶಾಸಕ ಅರವಿಂದ ಲಿಂಬಾವಳಿಯವರು 14.95 ಕೋಟಿ ರೂಪಾಯಿ ಮೊತ್ತದ ಹಲವು ರಾಜಕಾಲುವೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು.
ಇದಾಗಿ ಕೇವಲ ಎರಡೇ ವರ್ಷಗಳಲ್ಲಿ ಕ್ಷೇತ್ರದ ಹಲವು ರಸ್ತೆಗಳು ಮುಳುಗಡೆಯಾಗಿ, ಮನೆಗಳಿಗೆ ನೀರು ನುಗ್ಗಿದೆ. ಕಾಮಗಾರಿಗಳಿಗೆ ಬಿಡುಗಡೆಯಾಗಿದ್ದ ಕೋಟ್ಯಂತರ ರೂಪಾಯಿ ಯಾರ ಜೇಬು ಸೇರಿದೆ ಎಂಬ ಪ್ರಶ್ನೆಯು ಕ್ಷೇತ್ರದ ಜನರನ್ನು ಕಾಡುತ್ತಿದೆ. ಇದಕ್ಕೆ ಲಿಂಬಾವಳಿ ಉತ್ತರಿಸಬೇಕಿದೆ ಎಂದು ಒತ್ತಾಯಿಸಿದರು.
ಲಿಂಬಾವಳಿ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆದ ರಾಜಕಾಲುವೆ ಕಾಮಗಾರಿಗಳ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಬಹುತೇಕ ಕಡೆಗಳಲ್ಲಿ ರಾಜಕಾಲುವೆಗಳು ಒತ್ತುವರಿಯಾದರೂ ಶಾಸಕ ಲಿಂಬಾವಳಿ ಜಾಣಕುರುಡು ತೋರಿದ್ದಾರೆ.
ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡ ಪ್ರಭಾವಿಗಳು ಹಾಗೂ ಶಾಸಕ ಲಿಂಬಾವಳಿ ನಡುವೆ ಯಾವ ರೀತಿಯ ಒಪ್ಪಂದವಾಗಿದೆ ಎಂದು ತಿಳಿಯುವ ಹಕ್ಕು ಜನಸಾಮಾನ್ಯರಿಗೆ ಇದೆ. ಲಿಂಬಾವಳಿಯವರು ಇನ್ನಾದರೂ ರಾಜಕಾಲುವೆ ಒತ್ತುವರಿ ಕುರಿತು ಮಾತನಾಡುವ ಧೈರ್ಯ ತೋರಲಿ” ಎಂದು ಅಶೋಕ್ ಮೃತ್ಯುಂಜಯ ಸವಾಲು ಹಾಕಿದರು.
ಯಮಲೂರು ಕೋಡಿಯಿಂದ ರಾಜಕಾಲುವೆ ಅಭಿವೃದ್ಧಿಗೆ 9 ಕೋಟಿ ರೂ, ಚೌಳಕೆರೆ ಕೋಡಿ ಸಮೀಪದ ರಾಜಕಾಲುವೆ ಅಭಿವೃದ್ಧಿಗೆ 1 ಕೋಟಿ ರೂ, ಚೈತನ್ಯ ಶಾಲೆ ರಸ್ತೆ ಸಮೀಪದ ರಾಜಕಾಲುವೆ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಸೇರಿದಂತೆ ಒಟ್ಟು 12 ಕಾಮಗಾರಿಗಳಿಗೆ 14.95 ಕೋಟಿ ರೂ. ಖರ್ಚು ಮಾಡಿರುವ ಬಗ್ಗೆ ಸಮಗ್ರ ತನಿಖೆಯಾಗಬೇಕು. ಬೆಂಗಳೂರಿನ ರಾಜಕಾಲುವೆಗಳಿಗೆ ಸರ್ಕಾರ ಎಷ್ಟು ಹಣ ಖರ್ಚು ಮಾಡಿದೆ ಎಂಬ ಬಗ್ಗೆ ಆಮ್ ಆದ್ಮಿ ಪಾರ್ಟಿಯು ಮಾಹಿತಿಯನ್ನು ಬಿಡುಗಡೆ ಮಾಡಿ ಸರ್ಕಾರವನ್ನು ಪ್ರಶ್ನಿಸಲಿದೆ ಎಂದು ಅಶೋಕ್ ಮೃತ್ಯುಂಜಯ ಹೇಳಿದರು.