ತಿ. ನರಸೀಪುರ: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಬಿಜೆಪಿ, ಜೆಡಿಎಸ್ ನಾಯಕರು ರಾಜ್ಯಪಾಲರನ್ನು ಏಜೆಂಟ್ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ರಮೇಶ್ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಪಾಲರು ಯಾವುದೇ ಪಕ್ಷದ ಏಜೆಂಟಲ್ಲ ಅವರು ಇಡೀ ರಾಜ್ಯವನ್ನು ಪಾಲನೆ ಮಾಡಬೇಕಾದ ಜವಾಬ್ದಾರಿಯುತ ಸಾಂವಿಧಾನಿಕ ಹುದ್ದೆಯಲ್ಲಿರುವವರು. ವಿಪಕ್ಷಗಳ ಪರವಾಗಿ ಕೆಲಸ ಮಾಡಿದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಡಾದಲ್ಲಿ ಹಗರಣ ನಡೆದಿಲ್ಲದಿರುವುದನ್ನು ಹಗರಣ ಎಂದು ಬಿಂಬಿಸಿ ಸಿದ್ದರಾಮಯ್ಯ ಅವರಿಗೆ ತೊಂದರೆ ಕೊಡಲು ಸಂಚು ರೂಪಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದನ್ನು ಸಹಿಸದೆ ಹಿಂದುಳಿದ ವರ್ಗದ ಮುಖ್ಯಮಂತ್ರಿಗೆ ತೊಂದರೆ ಕೊಡುವ ಮೂಲಕ ದಲಿತ ಅಲ್ಪಸಂಖ್ಯಾತರಿಗೆ ಅವಮಾನ ಮಾಡಲು ಬಿಜೆಪಿ – ಜೆಡಿಎಸ್ ನಾಯಕರು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ಉಂಟಾಗುವ ಅಶಾಂತಿಗೆ ಬಿಜೆಪಿ-ಜೆಡಿಎಸ್ ನಾಯಕರು ಕಾರಣರಾಗುತ್ತಾರೆ. ಸಿದ್ದರಾಮಯ್ಯನವರು ಒಂದು ವರ್ಗಕ್ಕೆ ಸೇರಿದ ನಾಯಕರಲ್ಲ. ನೊಂದ, ಶೋಷಿತ ಸಮುದಾಯದ ಎಲ್ಲ ವರ್ಗದ ಜನನಾಯಕ. ಆರ್ಥಿಕವಾಗಿ ಎಲ್ಲ ವರ್ಗದವರು ಸಬಲರಾಗಬೇಕೆಂದು ಉತ್ತಮ ಜನಪರ ಯೋಜನೆಗಳನ್ನು ನೀಡಿದವರು. ಇಂಥ ನಾಯಕರ ವಿರುದ್ಧ ಇಲ್ಲಸಲ್ಲದ ಪಿತೂರಿ ನಡೆಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯಾದ್ಯಂತ ಜನಾಂದೊಲನ ನಡೆಯುತ್ತದೆ ಎಂದರು.
ತಾಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕುಕ್ಕೂರ್ ಗಣೇಶ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ದೀನ ದಲಿತರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಪರವಾಗಿದ್ದು ಅವರ ಏಳಿಗೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಇದನ್ನು ಸಹಿಸದೆ ವಿಪಕ್ಷಗಳು ಇಲ್ಲದ ಸಲ್ಲದ ಆರೋಪಗಳನ್ನು ಮಾಡಿ ಸರ್ಕಾರವನ್ನು ಬೀಳಿಸಲು ಷಢ್ಯಂತರ ರೂಪಿಸುತ್ತಿದ್ದಾರೆ. ಇದನ್ನು ರಾಜ್ಯದ ಹಿಂದುಳಿದ ದಲಿತ ಅಲ್ಪಸಂಖ್ಯಾತರು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಪುರಸಭೆ ಸದಸ್ಯರಾದ ಮಂಜು (ಬಾದಾಮಿ ), ಮೆಡಿಕಲ್ ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಮಹೇಶ್, ಗ್ರಾಂ.ಪಂ. ಅಧ್ಯಕ್ಷ ರಾಮನಂಜಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜು ( ಅಮಾವಾಸ್ಯೆ ), ಉಪಾಧ್ಯಕ್ಷ ಪುರಿ ನಟರಾಜು, ಕಾರ್ಮಿಕ ವಿಭಾಗದ ಅಧ್ಯಕ್ಷ ಟಿ. ಎಸ್.ಕುಮಾರ್, ಸಹದೇವ, ಮಂಜುನಾಥ್, ಶ್ರೀಕಂಠ, ಟೌನ್ ಅಧ್ಯಕ್ಷ ಅಧ್ಯಕ್ಷ ಅಂದಾನಿ, ಮಹದೇವಸ್ವಾಮಿ, ಯೋಗೇಶ್, ಮಹದೇವ, ಕಿಶೋರ್ ಮತ್ತಿತರರು ಇದ್ದರು.